ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ

Date:

Advertisements
ಮೋದಿಯವರು ಅಧಿಕಾರಲಾಲಸೆಯ ದುರಾಸೆಗೆ ಬಿದ್ದು ಸುಳ್ಳು ಹೇಳಿದರೆ, ಆ ಸುಳ್ಳಿನ ಹೇಳಿಕೆಗಳಿಗೆ ಪ್ರಚಾರ ಕೊಟ್ಟ ಪತ್ರಕರ್ತರು, ದೇಶದ ಜನರನ್ನು ದಾರಿ ತಪ್ಪಿಸಿದರು. ಹೀಗಾಗಿ ದೇಶ ಸುಳ್ಳು ಸೃಷ್ಟಿಸುವವರ ಸ್ವರ್ಗವಾಗಿದೆ. ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುತ್ತಿದೆ. ದೇಶದ ಮಾನ ಕಾಪಾಡಲು ಮತದಾರರೇ ಮುಂದೆ ಬರಬೇಕಾಗಿದೆ, ಸುಳ್ಳುಗಾರರನ್ನು ಸೋಲಿಸಿ ಗಟಾರಕ್ಕೆ ಎಸೆಯಬೇಕಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಆಗ್ರಾದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತ, ‘ಒಬಿಸಿ ಮೀಸಲು ಕಸಿದು ಮುಸ್ಲಿಮರಿಗೆ ನೀಡಿದ ಕರ್ನಾಟಕದ ಮಾದರಿಯನ್ನೇ ದೇಶವ್ಯಾಪಿ ವಿಸ್ತರಣೆ ಮಾಡಲು ಕಾಂಗ್ರೆಸ್ ಯೋಜಿಸಿದೆ’ ಎಂದು ಹೇಳಿದರು.

ದೇಶದ ಪ್ರಧಾನಿಯವರ ಪ್ರಚಾರ ಭಾಷಣವಾದ್ದರಿಂದ, ಸುದ್ದಿ ಮಾಧ್ಯಮಗಳು ‘ನಮ್ಮಲ್ಲೇ ಮೊದಲು’ ಎಂಬ ಆತುರಕ್ಕೆ ಬಿದ್ದು, ಪ್ರಸಾರ ಮಾಡುತ್ತವೆ. ಅವರ ಭಾಷಣವನ್ನು ನೇರವಾಗಿ ಮನೆಯಂಗಳಕ್ಕೆ ಆ ಕ್ಷಣವೇ ತಲುಪಿಸುವ ವ್ಯವಸ್ಥೆ ಮಾಡುತ್ತವೆ. ಪ್ರಧಾನಿ ಮೋದಿ ಹೇಳಿದ್ದು ಸತ್ಯ ಅಥವಾ ಸುಳ್ಳು ಎಂದು ಕೂಡ ಯೋಚಿಸುವುದಿಲ್ಲ.

ಸಾಮಾನ್ಯವಾಗಿ ಸುದ್ದಿ ಸಂಸ್ಥೆಗಳ ಧೋರಣೆ, ಗೌರವಾನ್ವಿತ ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿ ಸುಳ್ಳು ಹೇಳಲು ಸಾಧ್ಯವೇ ಎಂಬುದು ಮೊದಲ ಲಾಜಿಕ್ ಆದರೆ; ಸುಳ್ಳು ಹೇಳಿದ್ದರೆ, ಅದನ್ನು ಅಲ್ಲಗಳೆಯಲು ವಿರೋಧ ಪಕ್ಷಗಳಿವೆ ಎಂಬುದು ಎರಡನೇ ಲಾಜಿಕ್ ಆಗಿರುತ್ತದೆ. ದೇಶದಲ್ಲಿರುವ ಹೆಸರಾಂತ ಸುದ್ದಿ ಸಂಸ್ಥೆಗಳ ಮಾಲೀಕರು ಹೆಚ್ಚಿನಪಾಲು ಮೋದಿಯವರ ಮರ್ಜಿಗೊಳಗಾದವರು; ಐಟಿ ದಾಳಿಯಿಂದ ತಪ್ಪಿಸಿಕೊಂಡು ಸುರಕ್ಷಿತ ನೆಲೆಯಲ್ಲಿರುವವರು; ಜಾಹೀರಾತು ಎಂಬ ಹಣದ ಹೊಳೆಯನ್ನು ಹರಿಸಿಕೊಳ್ಳುತ್ತಿರುವವರು. ಇನ್ನು ಆ ಸುದ್ದಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಶೇ. 70 ಭಾಗ ಮೇಲ್ಜಾತಿಗೆ ಸೇರಿದವರು- ಮೋದಿ ಹಿಂದೂ ಧರ್ಮ ರಕ್ಷಕ ಎಂಬ ಭ್ರಮೆಯಲ್ಲಿ ತೇಲುತ್ತಿರುವವರು. ಅಕಸ್ಮಾತ್ ಅಳಿದುಳಿದ ಅಬ್ರಾಹ್ಮಣ ಪತ್ರಕರ್ತರಿದ್ದರೂ- ಅವರು ನಿಯೋಬ್ರಾಹ್ಮಿನ್‌ಗಳಾಗಿರುತ್ತಾರೆ; ಇಲ್ಲ ತತ್ವ-ಸಿದ್ಧಾಂತಗಳನ್ನು ಬದಿಗಿಟ್ಟು ಹಣಕ್ಕಾಗಿ ಕೆಲಸ ಮಾಡುವವರಾಗಿರುತ್ತಾರೆ.

Advertisements

ದೇಶದ ಸುದ್ದಿ ಸಂಸ್ಥೆಗಳ ಹಣೆಬರಹ ಹೀಗಿರುವಾಗ, ಮೋದಿಯವರು ಹೇಳಿದ ‘ಮುಸ್ಲಿಮರಿಗೆ ಮೀಸಲು’ ಸುದ್ದಿ, ಅಲ್ಲಿ ಮುಸ್ಲಿಮರು ಇರುವ ಏಕೈಕ ಕಾರಣಕ್ಕೆ- ದೇಶದಾದ್ಯಂತ ಹರಡುತ್ತದೆ. ಜೊತೆಗೆ ಬಿಜೆಪಿಯ ಅಕ್ಷೋಹಿಣಿ ಸೈನ್ಯ- ಐಟಿ ಸೆಲ್- ಅದನ್ನು ಇನ್ನಷ್ಟು ವೇಗವಾಗಿ, ಸೋಷಿಯಲ್ ಮೀಡಿಯಾ ಮೂಲಕ ಹಂಚಲ್ಪಡುತ್ತದೆ.

ಹೀಗೆ ಮಾಡುವುದರಿಂದ ಮಾಧ್ಯಮಗಳು ಆಳುವವರ ಕೃಪೆಗೆ ಪಾತ್ರವಾದರೆ; ಪ್ರಧಾನಿಯ ಮಾತುಗಳಿಗೆ ಕಾಯ್ದೆ-ಕಾನೂನಿನ ಮುದ್ರೆಯೊತ್ತಿ, ಅದಕ್ಕೊಂದು ಅಧಿಕೃತತೆ ತಂದುಕೊಡಲು ಸರ್ಕಾರದಿಂದಲೇ ನಿಯೋಜಿಸಲ್ಪಟ್ಟ ಸ್ವಾಯತ್ತ ಸಂಸ್ಥೆಗಳೂ ಟೊಂಕ ಕಟ್ಟಿ ನಿಂತಿರುತ್ತವೆ.

ಮೋದಿಯವರ ‘ಮುಸ್ಲಿಂ ಮೀಸಲು’ ವಿಷಯದಲ್ಲಿಯೂ ಅದೇ ಆಗಿದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಹಂಸರಾಜ್ ಗಂಗಾರಾಮ್ ಅಹಿರ್ ಕೂಡ ಒಂದು ಪತ್ರಿಕಾ ಹೇಳಿಕೆ ನೀಡಿ ಮೋದಿಯವರ ಹೇಳಿಕೆಯನ್ನೇ ಪುನರುಚ್ಚರಿಸಿರುವುದು, ಮೋದಿ-ಮೀಡಿಯಾ-ಸೋಷಿಯಲ್ ಮೀಡಿಯಾಗಳಿಗೆ ಅಧಿಕೃತ ಮುದ್ರೆಯೊತ್ತಿದಂತಿದೆ. ದೇಶದ ಜನ ಇದನ್ನು ನಂಬುವಂತಾಗಿದೆ.

ವಿಪರ್ಯಾಸವೆಂದರೆ ಪ್ರಧಾನಿ ಮೋದಿ ಮತ್ತು ಆಯೋಗದ ಅಧ್ಯಕ್ಷ ಅಹಿರ್- ಇಬ್ಬರಿಗೂ ಕರ್ನಾಟಕದ ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಕನಿಷ್ಠ ಜ್ಞಾನವೂ ಇಲ್ಲ. ಅದು ಅತ್ಯಂತ ಬೇಜವಾಬ್ದಾರಿ ಹೇಳಿಕೆಯಲ್ಲದೆ, ಬೇರೇನೂ ಅಲ್ಲ. ಮುಸಲ್ಮಾನರನ್ನು ಪ್ರತ್ಯೇಕಿಸಿ ಮತಗಳ ಧ್ರುವೀಕರಣ ಮಾಡುತ್ತಿರುವ ಮೋದಿಯವರ ಕೆಲಸ ಸಂವಿಧಾನ ಸಮ್ಮತವೂ ಅಲ್ಲ.

ಅಸಲಿಗೆ, ಮೋದಿಯವರು ಆಡಿರುವ ‘ಮುಸ್ಲಿಮರ ಮೀಸಲು’ ಧಾರ್ಮಿಕ ಮೀಸಲಾತಿಯಲ್ಲ, ಸಂವಿಧಾನದ ಆರ್ಟಿಕಲ್ 15 ಹಾಗೂ 16 ರಂತೆ ನೀಡಲಾಗಿದೆ. ಗೊತ್ತಿದ್ದೂ ಸುಳ್ಳು ಹೇಳಿದ್ದಾರೆ. ದೇಶದ ಜನರಲ್ಲಿ ದ್ವೇಷವನ್ನು ಹುಟ್ಟುಹಾಕುವ ಸಲುವಾಗಿಯೇ ಆಡಿದ್ದಾರೆ. ಅದರಲ್ಲಿ ಹಿಂದುಳಿದವರನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟುವ ಹುನ್ನಾರ ಅಡಗಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ಸನ್ನು ಹಣಿಯುವ ಷಡ್ಯಂತ್ರವಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸೂರತ್ ಸಂಸದನ ಅವಿರೋಧ ಆಯ್ಕೆಯ ಈ ಪ್ರಹಸನ ಅಪಾಯಕಾರಿ

ಸ್ವಾತಂತ್ರ್ಯಪೂರ್ವದ ನಾಲ್ವಡಿ ಕೃಷ್ಣರಾಜ ಒಡೆಯರ್ ನೇಮಿಸಿದ ಮಿಲ್ಲರ್ ಆಯೋಗದಿಂದ ಹಿಡಿದು ಸ್ವಾತಂತ್ರ್ಯಾನಂತರದ ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ ಆಯೋಗದವರೆಗೆ ಎಲ್ಲವೂ ಮುಸ್ಲಿಮರನ್ನು ‘ಹಿಂದುಳಿದ ವರ್ಗಗಳು’ ಎಂದೇ ಕರ್ನಾಟಕದಲ್ಲಿ ಗುರುತಿಸಿವೆ. ಹಾಗೆಯೇ ಮುಸ್ಲಿಮರನ್ನು ಎಲ್ಲೂ ಧಾರ್ಮಿಕ ಅಲ್ಪಸಂಖ್ಯಾತರು ಅಥವಾ ರಿಲಿಜಿಯಸ್ ಮೈನಾರಿಟಿ ಎಂದು ಗುರುತಿಸಿಲ್ಲ. ಅದೇ ರೀತಿ ಕ್ರೈಸ್ತರು, ಜೈನರು, ಬೌದ್ದರು, ಸಿಖ್ಖರೂ ಕೂಡ ಹಿಂದುಳಿದ ವರ್ಗಗಳ ಪಟ್ಟಿಯಲ್ಲೇ ಇದ್ದಾರೆ ಎನ್ನುವುದು ಕೂಡ ಗಮನಾರ್ಹ ಸಂಗತಿ.

ಮುಸ್ಲಿಮರಿಗೆ ಕೊಟ್ಟ ಮೀಸಲಾತಿಗೆ ಸುಮಾರು 150 ವರ್ಷಗಳ ಇತಿಹಾಸವಿದೆ. ಮೊಟ್ಟ ಮೊದಲಿಗೆ ಮುಸ್ಲಿಮರಿಗೆ ಮೀಸಲಾತಿ ಕೊಟ್ಟವರು ಮೈಸೂರು ಮಹಾಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್. ಆನಂತರ ಬಂದ ಆಯೋಗಗಳು ಅದನ್ನು ಮುಂದುವರೆಸಿವೆ.

1972ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ಹಾವನೂರು ಆಯೋಗ ರಚಿಸಿದರು. ಎಲ್.ಜಿ. ಹಾವನೂರರು ತಮ್ಮ ತಂಡದೊಂದಿಗೆ ನಾಡಿನಾದ್ಯಂತ ಸಂಚರಿಸಿ, ಎಲ್ಲ ಸಮುದಾಯಗಳನ್ನು ಮುಟ್ಟಿ-ಮಾತನಾಡಿಸಿ, ಅತ್ಯಂತ ಶಿಸ್ತು ಮತ್ತು ಶ್ರದ್ಧೆಯಿಂದ ವರದಿ ತಯಾರಿಸಿದರು. ಆ ವರದಿಯನ್ನು ಅರಸು 1975ರಲ್ಲಿ ಸ್ವೀಕರಿಸಿದರು. ಹಾವನೂರು ಮತ್ತು ಅರಸು ಹಿಂದುಳಿದವರಿಗೆ ಮೀಸಲಾತಿ ಕೊಟ್ಟರು. ಜೊತೆಗೆ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದರು.

ಮುಸ್ಲಿಮರಿಗೆ ಕೊಟ್ಟ ಮೀಸಲಾತಿಯ ವಿರುದ್ಧ ಆಗ ಕೋ. ಚನ್ನಬಸಪ್ಪನವರು ಕೋರ್ಟಿನಲ್ಲಿ ಮೊಕದ್ದಮೆ ಹೂಡಿದರು. 1979ರಲ್ಲಿ ಹೈಕೋರ್ಟ್ ಮುಸ್ಲಿಂ ಮೀಸಲಾತಿ ಪರ ತೀರ್ಪು ನೀಡಿತು. ಮತ್ತೆ ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಯಿತು. ಸುಪ್ರೀಂ ಕೋರ್ಟ್ ಸಹ ಮುಸ್ಲಿಂ ಮೀಸಲಾತಿಯನ್ನು ಎತ್ತಿಹಿಡಿಯಿತು. ನಂತರ 1994ರಲ್ಲಿ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯ್ಲಿಯವರು ಮುಸ್ಲಿಂ ಸಮುದಾಯಕ್ಕೆ ಶೇ. 4ರಷ್ಟು ಮೀಸಲಾತಿ ನೀಡಿದರು.

ಮುಸ್ಲಿಮರಿಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ಕಳೆದ ಬಿಜೆಪಿ ಸರ್ಕಾರ ರದ್ದು ಮಾಡಿತು. ಅದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಯಿತು. ಈಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಮುಸ್ಲಿಂ ಮೀಸಲಾತಿ ರದ್ದು ಮಾಡಿದ ಕ್ರಮಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಇದು ಮುಸ್ಲಿಂ ಮೀಸಲು ವಿಚಾರದ ಅಸಲಿಯತ್ತು. ಆದರೆ, ಪ್ರಧಾನಿ ಮೋದಿಯವರು, ಚುನಾವಣೆಗಾಗಿ, ಮತಗಳಿಗಾಗಿ, ಮುಸ್ಲಿಮರ ವಿರುದ್ಧ ಹಿಂದುಳಿದವರನ್ನು ಎತ್ತಿಕಟ್ಟಲಿಕ್ಕಾಗಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಮಸಿ ಬಳಿಯಲಿಕ್ಕಾಗಿ ಸುಳ್ಳು ಹೇಳಿದರು.

ಮೋದಿಯವರು ಅಧಿಕಾರಲಾಲಸೆಯ ದುರಾಸೆಗೆ ಬಿದ್ದು ಸುಳ್ಳು ಹೇಳಿದರೆ, ಆ ಸುಳ್ಳಿನ ಹೇಳಿಕೆಗಳಿಗೆ ಪ್ರಚಾರ ಕೊಟ್ಟ ಪತ್ರಕರ್ತರು, ದೇಶದ ಜನರನ್ನು ದಾರಿ ತಪ್ಪಿಸಿದರು. ಜನರಿಂದ ಆಯ್ಕೆಯಾದ ಪ್ರಧಾನಿಗೆ ಸುಳ್ಳು ಹೇಳಲು ಯಾವ ಅಂಜಿಕೆ, ಅಳುಕು ಇಲ್ಲ. ಸುಳ್ಳನ್ನು ಹರಡುವ ಸುದ್ದಿ ಮಾಧ್ಯಮಗಳಿಗೆ ಓದುಗರು/ನೋಡುಗರು ಕೂಡ ಪ್ರಶ್ನೆ ಮಾಡುವುದಿಲ್ಲ.

ಹೀಗಾಗಿ ದೇಶ ಸುಳ್ಳು ಸೃಷ್ಟಿಸುವವರ ಸ್ವರ್ಗವಾಗಿದೆ. ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುತ್ತಿದೆ. ದೇಶದ ಮಾನ ಕಾಪಾಡಲು ಮತದಾರರೇ ಮುಂದೆ ಬರಬೇಕಾಗಿದೆ, ಸುಳ್ಳುಗಾರರನ್ನು ಸೋಲಿಸಿ ಗಟಾರಕ್ಕೆ ಎಸೆಯಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X