ಅತ್ಯಂತ ಜನಪ್ರಿಯ ಭಾರತೀಯ ಟಿವಿ ಶೋ ಆದ ‘ತಾರಕ್ ಮೆಹ್ತಾ ಕಾ ಊಲ್ತಾಹ್ ಚಶ್ಮಾ’ದಲ್ಲಿ ರೋಷನ್ ಸಿಂಗ್ ಸೋಧಿ ಪಾತ್ರವನ್ನು ನಿರ್ವಹಿಸಿದ ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆಯಾಗಿದ್ದಾರೆ.
ಗುರುಚರಣ್ ಸಿಂಗ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಟನ ತಂದೆ, ತಮ್ಮ ದೂರಿನಲ್ಲಿ, ತಮ್ಮ ಮಗ ಸೋಮವಾರ ದೆಹಲಿಯಿಂದ ಮುಂಬೈಗೆ ಹೊರಟಿದ್ದು ಆದರೆ ಮುಂಬೈ ತಲುಪಿಲ್ಲ ಎಂದಿದ್ದಾರೆ.
ಅಂದಿನಿಂದ ಅವರ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. “ಗುರುಚರಣ್ ಸಿಂಗ್ ಮಾನಸಿಕವಾಗಿ ಸ್ಥಿರನಾಗಿದ್ದಾರೆ, ನಾವು ಅವರನ್ನು ಹುಡುಕುತ್ತಿದ್ದೆವು. ಆದರೆ ಈಗ ನಾವು ನಾಪತ್ತೆ ದೂರು ದಾಖಲಿಸುತ್ತಿದ್ದೇವೆ” ಎಂದು ಗುರುಚರಣ್ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಓಹಿಯೋದಲ್ಲಿ ಶವವಾಗಿ ಪತ್ತೆ: ಈ ವರ್ಷದಲ್ಲಿ 11ನೇ ಪ್ರಕರಣ
ಸೋಮವಾರ ರಾತ್ರಿ ಪಾಲಂ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ ಅವರು ರಸ್ತೆ ದಾಟುತ್ತಿರುವುದು ಕಂಡುಬಂದಿದೆ.
“ಸೋಮವಾರ ರಾತ್ರಿ 8.30 ಕ್ಕೆ ಅವರ ವಿಮಾನವನ್ನು ನಿಗದಿಪಡಿಸಲಾಗಿತ್ತು, ಆದರೆ ಅವರು ರಾತ್ರಿ 9.14 ರ ಸುಮಾರಿಗೆ ಪಾಲಂನ ಟ್ರಾಫಿಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.