“ಹಿಂದುಳಿದ ವರ್ಗಗಳ ಮೀಸಲಾತಿ(ಒಬಿಸಿ) ಪಟ್ಟಿಗೆ ಮುಸ್ಲಿಮರ ಸೇರ್ಪಡೆಯು ಮಂಡಲ್ ವರದಿಯನ್ನು ಆಧರಿಸಿ 30 ವರ್ಷಗಳ ಹಿಂದೆಯೇ ಆಗಿದೆ. ಇದನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಕೂಡ ಒಪ್ಪಿಕೊಂಡಿದೆ. ಈ ಸತ್ಯ ಮರೆಮಾಚಿ ನಮ್ಮ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಬಿಜೆಪಿ ಸುಳ್ಳು ಜಾಹೀರಾತು ನೀಡುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಬಿಜೆಪಿಯವರ ಈ ನಡೆಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು” ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ ನಗರದ ಗ್ರ್ಯಾಂಡ್ ಹೋಟೆಲ್ನಲ್ಲಿ 2024ರ ಎರಡನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮುಖ್ಯಮಂತ್ರಿ ಮಾತನಾಡಿದರು.
“ಮಂಡಲ್ ಆಯೋಗದ ವರದಿ ಜಾರಿಯಾದಾಗ ಮೀಸಲಾತಿಯನ್ನು ವಿರೋಧಿಸಿದವರು ಇದೇ ಬಿಜೆಪಿಯವರು. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ, ಅವಕಾಶ ವಂಚಿತರಾದವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನ ಹೇಳಿದೆ. ನರೇಂದ್ರ ಮೋದಿಯವರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಅವರಿಗೂ 10% ಮೀಸಲಾತಿ ನೀಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚನೆ ಮಾಡಿರುವ ಮೂಲ ಸಂವಿಧಾನದಲ್ಲಿ ಅದು ಇಲ್ಲ. ಆದರೂ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಿದೆ” ಎಂದರು.
ಮಹಿಳೆಯರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ನೀಡಿದ್ದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದು ಮಾತ್ರವಲ್ಲದೇ ಸ್ವತಃ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದವರು ಬಿಜೆಪಿಯ ರಾಜ್ಯಸಭಾ ಸದಸ್ಯರು, ರಾಜ್ಯ ಉಪಾಧ್ಯಕ್ಷರಾಗಿದ್ದ ರಾಮಾ ಜೋಯಿಸ್ ಅವರು.
ಮೀಸಲಾತಿ ವಿರೋಧಿ ಧೋರಣೆ ಬಿಜೆಪಿಯವರ ಹುಟ್ಟುಗುಣವಾಗಿದೆ. ಅಪರೂಪಕ್ಕೆ… pic.twitter.com/d9wUDqbFDO— Siddaramaiah (@siddaramaiah) April 27, 2024
“1992ರಲ್ಲಿ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠವು ಮಂಡಲ್ ಆಯೋಗದ ವರದಿಯ ಶಿಫಾರಸುಗಳನ್ನು ಒಪ್ಪಿಕೊಂಡಿದ್ದು, ಮೀಸಲಾತಿಯ ಸೀಲಿಂಗ್ ಎಷ್ಟಿರಬೇಕೆಂದು ಕೂಡ ಹೇಳಿದೆ. ಮೀಸಲಾತಿ ಶೇ. 50ಕ್ಕಿಂತ ಹೆಚ್ಚಿರಬಾರದು ಎಂದು ಹೇಳಿದ್ದಾರೆ. ಸಂವಿಧಾನದಲ್ಲಿಲ್ಲದಿದ್ದರೂ ಸೀಲಿಂಗ್ ನಿಗದಿ ಮಾಡಿದ್ದಾರೆ. ಮಂಡಲ್ ಆಯೋಗದ ವರದಿ ಜಾರಿಯಾಗಿದ್ದು, ಕೇಂದ್ರ ಮತ್ತು ರಾಜ್ಯಗಳಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಬೇಕೆಂದೂ ಹೇಳಿದೆ. ಮಂಡಲ್ ಆಯೋಗದ ವರದಿ ಜಾರಿಯಾದಾಗ ಮೀಸಲಾತಿ ವಿರೋಧಿಸಿದ್ದು, ಬಿಜೆಪಿಯವರು. ಶಾಲಾ ಕಾಲೇಜುಗಳ ಮಕ್ಕಳನ್ನು ಎತ್ತಿ ಕಟ್ಟಿ ಇದನ್ನು ವಿರೋಧಿಸಲು ಹೇಳಿ ಆತ್ಮಹತ್ಯೆಗೆ ಪ್ರೇರೇಪಿಸಿದ್ದರು” ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಯವರ ವಿರುದ್ಧ ಆಕ್ರೋಶ ಹೊರಹಾಕಿದರು.
“ಮಂಡಲ್ ಆಯೋಗದ ವರದಿ ಜಾರಿಯಾದಾಗ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರು ರಥಯಾತ್ರೆಯನ್ನು ಹಮ್ಮಿಕೊಂಡಿದ್ದರು. ಮೊದಲಿನಿಂದಲೂ ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಅರ್ಜುನ್ ಸಿಂಗ್ ಅವರು ಆಗ ಮಾನವ ಸಂಪನ್ಮೂಲ ಸಚಿವರಾಗಿದ್ದರು. ದೇಶಾದ್ಯಂತ. ಐಐಟಿ, ಐಐಎಂನಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿ ಮಾಡಿದರು. ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ 73, 74ನೇ ತಿದ್ದುಪಡಿ ಮಾಡಿದರು. 73ನೇ ತಿದ್ದುಪಡಿ ಮೂಲಕ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗೆ ಹಿಂದುಳಿದವರಿಗೆ ಮೀಸಲಾತಿ ತಂದರು. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ಬಂತು. ಒಬಿಸಿ 2 (ಎ) ಮತ್ತು (ಬಿ )ಎಂದು ಮೀಸಲಾತಿ ತಂದು ಮಹಿಳೆಯರಿಗೆ 33% ಮೀಸಲಾತಿ ತಂದೆವು. ಹಿಂದುಳಿದವರಿಗೆ 27.4% ಒಬಿಸಿ (ಎ) ಹಾಗೂ 6.6% ಒಬಿಸಿ (ಬಿ) ಯವರಿಗೆ ಮಾಡಲಾಯಿತು. ಒಬಿಸಿ (ಎ) ನಲ್ಲಿ ಮುಸಲ್ಮಾನರನ್ನು ಸೇರಿಸಲಾಗಿತ್ತು” ಎಂದು ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮೀಸಲಾತಿ ಜಾರಿಯಾದ ಇತಿಹಾಸವನ್ನು ಎಳೆಎಳೆಯಾಗಿ ಮಾಧ್ಯಮದವರಿಗೆ ವಿವರಿಸಿದರು.
ಸುಪ್ರೀಂ ಕೋರ್ಟ್ ಮೀಸಲಾತಿ ನೀಡಿಕೆಯನ್ನು ಎತ್ತಿಹಿಡಿದಿದೆ
ರಾಮ ಜೋಯಿಸರು ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದರು. ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ನೀಡಿರುವ ಮೀಸಲಾತಿಯನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಆ ಅರ್ಜಿ ತಿರಸ್ಕೃತಗೊಂಡಿತು. ಸುಪ್ರೀಂ ಕೋರ್ಟ್ ಕೂಡ ಈ ಮೀಸಲಾತಿಯನ್ನು ಎತ್ತಿಹಿಡಿಯಿತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಚಿನ್ನಪ್ಪ ರೆಡ್ಡಿ ವರದಿಯಂತೆ ಮೀಸಲಾತಿ ಶಿಫಾರಸ್ಸು ಮಾಡಲಾಗಿತ್ತು. ವೀರಪ್ಪ ಮೊಯಿಲಿಯವರು ಸಿಎಂ ಆಗಿದ್ದಾಗ ನಿರ್ಣಯ ತೆಗೆದುಕೊಳ್ಳಲಾಗಿತ್ತು. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಲಾಯಿತು” ಎಂದರು.
ಮುಸಲ್ಮಾನರಿಗೆ ನೀಡಿದ ಮೀಸಲಾತಿ ಧರ್ಮಾಧಾರಿತ ಅಲ್ಲ
ಮುಸಲ್ಮಾನರಿಗೆ ಮೀಸಲಾತಿ ಕಳೆದ 30 ವರ್ಷದಿಂದ ಜಾರಿಯಲ್ಲಿದೆ. ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಲು ಮುಸಲ್ಮಾನರಿಗಿದ್ದ ಮೀಸಲಾತಿಯನ್ನು ತೆಗೆದು ಹಾಕಿದರು. ಮುಸಲ್ಮಾನರಿಗೆ ನೀಡಿದ ಮೀಸಲಾತಿ ಧರ್ಮಾಧಾರಿತ ಅಲ್ಲ, ಸಂವಿಧಾನದ ಆರ್ಟಿಕಲ್ 15 ಹಾಗೂ 16 ನಂತೆ ನೀಡಲಾಗಿದೆ. ಬಸವರಾಜ ಬೊಮ್ಮಾಯಿಯವರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ, ಮುಸಲ್ಮಾನರಿಗೆ ನೀಡುವ ಮೀಸಲಾತಿಯನ್ನು ಮುಂದುವರೆಸುವುದಾಗಿ ಮುಚ್ಚಳಿಕೆಯನ್ನು ಬರೆದುಕೊಟ್ಟರು. ನರೇಂದ್ರ ಮೋದಿಯವರ ಹೇಳಿಕೆ ಹಾಗೂ ಬಿಜೆಪಿ ಪರ ಇರುವ ಜಾಹಿರಾತು ಸುಳ್ಳಿನಿಂದ ಕೂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
“ಮುಸಲ್ಮಾನರನ್ನು ಪ್ರತ್ಯೇಕಿಸಿ ಮತ ಧ್ರುವೀಕರಣ ಮಾಡುತ್ತಿರುವ ಮೋದಿಯವರ ಕಾರ್ಯ ಸಂವಿಧಾನ ಬಾಹಿರ. ಹಿಂದುಳಿದವರಿಗೆ ನೀಡಲಾದ ಮೀಸಲಾತಿಯ್ನು ರದ್ದುಪಡಿಸಿ ಮುಸಲ್ಮಾನರಿಗೆ ನೀಡಲಾಗುತ್ತದೆ ಎಂಬುದು ಅಪ್ಪಟ ಸುಳ್ಳು. ರಾಜಕೀಯವಾಗಿ ಬಿಜೆಪಿಯವರು ಈ ರೀತಿ ಮಾಡಲಾಗುತ್ತಿದೆ. ಮತಗಳನ್ನು ಧ್ರುವೀಕರಣ ಮಾಡುವ ಉದ್ದೇಶದಿಂದ ಮೋದಿಯವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ” ಎಂದು ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿಯವರ ಚುನಾವಣಾ ಹೇಳಿಕೆಗಳನ್ನು ಖಂಡಿಸಿದರು.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಇನ್ನುಳಿದ ಹಂತಗಳಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಹದಗೆಡಲಿದೆ: ಅಖಿಲೇಶ್ ಯಾದವ್
“ಎಲ್ಲ ಭಾರತೀಯರ ರಕ್ಷಣೆ ಮಾಡುವುದು ಪ್ರಧಾನಮಂತ್ರಿಗಳ ಕರ್ತವ್ಯ. ಮುಸಲ್ಮಾನರನ್ನು ಪ್ರತ್ಯೇಕಿಸಿ ಮತಗಳ ಧ್ರುವೀಕರಣ ಮಾಡುತ್ತಿರುವ ಮೋದಿಯವರ ಕಾರ್ಯ ಸಂವಿಧಾನ ಬಾಹಿರವಾದುದು. ಮೀಸಲಾತಿ ನೀಡಿಕೆ ಸಾಂವಿಧಾನಿಕವಾಗಿ ಸರಿಯೆಂದು ಸುಪ್ರೀಂ ಕೋರ್ಟ ತಿಳಿಸಿದ್ದರೂ, ಮೋದಿಯವರು ಹತಾಶೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೀಸಲಾತಿಯನ್ನು ವಿರೋಧಿಸುವ ಬಿಜೆಪಿಯವರ ಧೋರಣೆಯನ್ನು ನಾನು ಖಂಡಿಸುತ್ತೇನೆ. ಜನರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿರುವುದು ಸರಿಯಲ್ಲ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
