ಬಿಜೆಪಿ ರಾಜ್ಯ ನಾಯಕರ ಸಭೆ ನಡೆಸಿದ ಅಮಿತ್ ಶಾ
ಚುನಾವಣಾ ರಣತಂತ್ರ, ಲಿಂಗಾಯತರ ಒಲೈಕೆಗೆ ಕ್ರಮ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಂಬೆರಡು ಹೆಸರುಗಳು ಬಿಜೆಪಿ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡತೊಡಗಿವೆ.
ಅದರಲ್ಲೂ ಬಿಜೆಪಿ ಚುನಾವಣಾ ಚತುರನೆಂದೇ ಬಿಂಬಿತವಾಗಿರುವ ಅಮಿತ್ ಶಾ ಪಾಲಿನ ನಿದ್ದೆಯನ್ನು ಈ ಜೋಡಿ ಕದ್ದಿರುವುದು ಸುಳ್ಳಲ್ಲ.
ಒಂದು ಕಾಲದಲ್ಲಿ ತಮ್ಮ ಚುನಾವಣಾ ಕಾರ್ಯ ಯೋಜನೆ ಭಾಗವಾಗಿದ್ದ ಆಪರೇಷನ್ ಕಮಲದ ಸಂದರ್ಭದಲ್ಲಿ ಈ ಇಬ್ಬರೂ ನಾಯಕರು ಪ್ರಮುಖ ಪಾತ್ರವಹಿಸಿದ್ದರು.
ಅವರೇ ಈಗ ವಿರೋಧಿ ಪಾಳಯದ ಪ್ರಮುಖರಾಗಿ ಗುರುತಿಸಿಕೊಳ್ಳುತ್ತಿರುವುದು ದೆಹಲಿ ನಾಯಕನ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಷ್ಟು ಸಾಲದೆನ್ನುವಂತೆ ಹೋದವರಿಬ್ಬರೂ ಪಕ್ಷದೊಳಗಿನ ಆಂತರಿಕ ರಾಜಕೀಯದ ಒಳಗುಟ್ಟುಗಳನ್ನು ರಟ್ಟು ಮಾಡಿದ್ದೂ ಅಲ್ಲದೆ, ಲಿಂಗಾಯತ ಸಮುದಾಯವನ್ನೇ ಇವರು ಕಡೆಗಣಿಸುತ್ತಾರೆಂದು ಸಿಡಿಸಿದ ಬಾಂಬ್ ಅಕ್ಷರಶಃ ಬಿಜೆಪಿ ಬುಡವನ್ನೇ ಅಲ್ಲಾಡಿಸಿದೆ.
ಆರ್ಎಸ್ಎಸ್ ಮುಖಂಡ ಬಿ ಎಲ್ ಸಂತೋಷ, ಮಾಜಿ ಸಿಎಂ, ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಮುಂದಿಟ್ಟು ರಾಜ್ಯ ಲಿಂಗಾಯತ ಸಮುದಾಯವನ್ನು ಸೆಳೆಯಲು ಮಾಡಿದ ಪ್ರಯತ್ನಗಳು ಅದೇಕೋ ಕೈ ಹಿಡಿಯುವ ಲಕ್ಷಣ ಕಾಣದಿರುವ ಹಿನ್ನೆಲೆ ಅಮಿತ್ ಶಾ ತಾವೇ ಖುದ್ದು ಅಖಾಡಕ್ಕಿಳಿದಿದ್ದಾರೆ.
ರಾಜ್ಯ ರಾಜಕಾರಣದ ಜಾತಿ ಲೆಕ್ಕಾಚಾರದ ಜಾಡಿನ ಹಿಡಿತವಿಲ್ಲದಿದ್ದರೂ ಜಾತಿ ಪ್ರಮುಖರ ಜೊತೆ ಕೂತು ಎಚ್ಚರಿಕೆ ಹೆಜ್ಜೆ ಇಡಬಲ್ಲ ಚತುರನಾಗಿರುವ ಅಮಿತ್ ಶಾ, ಇದೆ ಉಮೇದಿನ ಮೇಲೆ ಗುರುವಾರ(ಏ 21) ಬಿಜೆಪಿ ಪ್ರಮುಖರ ಸಭೆ ನಡೆಸಿದರು.
ಮಳೆಕಾರಣ ದೇವನಹಳ್ಳಿಯಲ್ಲಿ ನಡೆಯಬೇಕಿದ್ದ ರೋಡ್ ಶೋ ರದ್ದುಗೊಂಡಿದ್ದೇ ತಡ ಅಮಿತ್ ಶಾ ತಾವು ತಂಗಲು ನಿಗದಿಯಾಗಿದ್ದ ತಾಜ್ ವೆಸ್ಟ್ಎಂಡ್ ಹೊಟೇಲ್ನಲ್ಲಿ ರಾಜ್ಯ ನಾಯಕರಿಗೆ ಬುಲಾವ್ ನೀಡಿ, ಚುನಾವಣಾ ರಣತಂತ್ರದ ಬಗ್ಗೆ ಸಭೆಗೆ ಮುಂದಾದರು.
ಅದರಂತೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅರುಣ್ ಸಿಂಗ್ ಸೇರಿದಂತೆ ಚುನಾವಣಾ ಪ್ರಚಾರ ಸಮಿತಿ ಮತ್ತು ನಿರ್ವಹಣಾ ಸಮಿತಿ ಸೇರಿ ಸುಮಾರು 54 ಜನರೊಂದಿಗೆ ಸಭೆ ನಡೆಸಿದರು.
ಈ ವೇಳೆ ಜಗದೀಶ್ ಶೆಟ್ಟರ್, ಸವದಿ ಪಕ್ಷ ಬಿಟ್ಟ ವಿಚಾರ, ಇತರ ಪಕ್ಷಕ್ಕೆ ಹೋದವರನ್ನು ಸೋಲಿಸುವ ಟಾಸ್ಕ್, ಲಿಂಗಾಯತ ಪಾಲಿಟಿಕ್ಸ್, ಬಂಡಾಯ ವಿಚಾರ ಮತ್ತು ಮೋದಿ ಪ್ರಚಾರ ಹೇಗಿರಬೇಕು ಎನ್ನುವುದರ ಬಗ್ಗೆ ಕೂಲಂಕುಶ ಚರ್ಚೆ ನಡೆಸಿದರು.
ಈ ಸುದ್ದಿ ಓದಿದ್ದೀರಾ?:ಲಿಂಗಾಯತರಿಗೆ ಕಾಂಗ್ರೆಸ್ ಮನ್ನಣೆ : ಬಸವ ಜಯಂತಿ ದಿನದಂದು ರಾಹುಲ್ ಗಾಂಧಿ ಕಾರ್ಯಕ್ರಮ
ಎಲ್ಲರಿಗೂ ಒಂದೊಂದು ಜವಾಬ್ಧಾರಿ ನೀಡಿದ ಅಮಿತ್ ಶಾ ಅದರಲ್ಲೂ ಪ್ರಮುಖವಾಗಿ ಸವದಿ, ಶೆಟ್ಟರ್ ಜೋಡಿ ರಾಜಕೀಯ ಚಲನವಲನ, ಚುನಾವಣಾ ನಡೆ, ಬೆಂಬಲಿಗರ ಸಭೆಗಳ ಮೇಲೆ ಕಣ್ಣಿಟ್ಟು ಅವರನ್ನು ಕಟ್ಟಿ ಹಾಕಲು ಸೂಚನೆ ನೀಡಿದ್ದಾರೆ.
ಹಾಗೆಯೇ ಶತಾಯುಗತಾಯ ಲಿಂಗಾಯತ ಸಮುದಾಯದ ಜೊತೆ ಇತರೆ ಹಿಂದುಳಿದ ವರ್ಗಗಳನ್ನು ಜೊತೆಗೆ ಸಾಗುವಂತೆ ನೋಡಿಕೊಳ್ಳುವ ಬಗ್ಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಹಾಗೆಯೇ ಈಗ ನೀಡಿರುವ ಟಾಸ್ಕ್ಗಳನ್ನು ರಾಜ್ಯ ನಾಯಕರುಗಳು ನೋಡಿಕೊಂಡರೆ ಉಳಿದದ್ದನ್ನು ತಮ್ಮ ಮುಂದಿನ ಪ್ರವಾಸದ ವೇಳೆ ತಾವು ನಿಭಾಯಿಸುವುದಾಗಿಯೂ ಶಾ ಭರವಸೆ ನೀಡಿದ್ದಾರೆನ್ನುವುದು ಮೂಲಗಳ ಮಾಹಿತಿ.
ಉಳಿದಂತೆ ನಾಳೆ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಪರ ಅವರು ಪ್ರಚಾರ ನಡೆಸಲಿದ್ದಾರೆ.