ಹಾಸನದ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸಂಬಂಧಿಸಿದ ಲೈಂಗಿಕ ಹಗರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿತ್ತು, “ಅಪ್ಪ ಮತ್ತು ಮಗ ಇಬ್ಬರಿಂದಲೂ ಲೈಂಗಿಕ ಕಿರುಕುಳ ನಡೆದಿದೆ” ಎಂದು ಸಂತ್ರಸ್ತೆಯೊಬ್ಬರು ದೂರು ನೀಡಿದ್ದಾರೆ.
ರಾಜ್ಯ ಮಹಿಳಾ ಆಯೋಗಕ್ಕೆ ಸಂತ್ರಸ್ತೆಯೊಬ್ಬರು ದೂರು ನೀಡಿದ್ದಾರೆ. “ತಂದೆ ಮತ್ತು ಮಗ ಇಬ್ಬರೂ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ” ಎಂದು ಆರೋಪಿಸಿರುವ ಸಂತ್ರಸ್ತೆ ಆಯೋಗದ ಮೊರೆ ಹೋಗಿದ್ದಾರೆ.
ಈ ದೂರಿನ ಸಂಬಂಧ ’ಈದಿನ.ಕಾಂ’ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರಿಗೆ ಕರೆ ಮಾಡಿದಾಗ, “ಪ್ರಭಾವಿ ರಾಜಕಾರಣಿಗಳಿಬ್ಬರ ಮೇಲೂ ದೂರು ಬಂದಿರುವುದು ಖಚಿತ. ಇದನ್ನು ಡಿಜಿಯವರ ಗಮನಕ್ಕೆ ತರಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಹಾಸನ ಪೆನ್‌ಡ್ರೈವ್ ಪ್ರಕರಣ ಸಂಬಂಧ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ನಾಗಲಕ್ಷ್ಮಿ ಅವರು, “ಪೆನ್ ಡ್ರೈವ್ ಆಯೋಗಕ್ಕೂ ತಲುಪಿದೆ. ಕಾನೂನು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಸಂತ್ರಸ್ತ ಹೆಣ್ಣುಮಕ್ಕಳಿಗೆ ಎಲ್ಲ ರೀತಿಯ ರಕ್ಷಣೆ ನೀಡಲಾಗುವುದು” ಎಂದು ತಿಳಿಸಿದ್ದರು. ಆಯೋಗದ ಆಗ್ರಹಕ್ಕೆ ಸ್ಪಂದಿಸಿರುವ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ನಿರ್ಧರಿಸಿದೆ.
ಹಾಸನದ ಹಲವೆಡೆ ಪೆನ್‌ಡ್ರೈವ್‌ಗಳು ಪತ್ತೆಯಾಗಿ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಹೆಣ್ಣುಬಾಕ ಲೈಂಗಿಕ ಹಗರಣ ಬಯಲಾಗಿತ್ತು. ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಪ್ರಭಾವಿ ಯುವ ರಾಜಕಾರಣಿ, ಅನೇಕ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿರುವುದು ಮತ್ತು ತಾನೇ ಅದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿರುವುದು ಬೆಳಕಿಗೆ ಬಂದಿದೆ.
