ಮೋದಿ ಹಿಟ್ಲರ್ ಶಾಹಿ ಆಡಳಿತ ಕೊನೆಗೊಳ್ಳುವ ಸಮಯ ಬಂದಿದೆ, ಮೋದಿ ಈ ಸಲ ಬಹುಮತ ಪಡೆಯುವುದಿಲ್ಲ ಅವರ ದುರಾಡಳಿತ ಕೊನೆಗಾಣಿಸಬೇಕು ಎಂದು ಹಿರಿಯ ಕಮ್ಯುನಿಸ್ಟ್ ನಾಯಕ ಅಪ್ಪಾಸಾಹೇಬ ಯರನಾಳ ಹೇಳಿದರು.
ವಿಜಯಪುರ ಜಿಲ್ಲೆಯ ಸಮೀಪದ ಶಿವಣಗಿ, ಹಡಗಲಿ ಹಾಗೂ ಆಹೇರಿ ಸೇರಿ ಕೆಲವು ತಾಂಡಾಗಳಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಪರ ಮತಯಾಚಿಸಿದರು.
ವಿದ್ಯಾವಂತರಾದ ಆಲಗೂರರನ್ನು ಬೆಂಬಲಿಸಿದರೆ ಜಿಲ್ಲೆಗೆ ಅನುಕೂಲವಾಗಲಿದೆ. ಲೋಕಸಭೆ ಚುನಾವಣೆ ವಾತಾವರಣ ಬದಲಾಗಿದೆ. ಸುಳ್ಳು ಹೇಳಿ, ಭಾವನೆ ಕೆರಳಿಸುವ ಮೂಲಕ ಮೋದಿ ಅಧಿಕಾರ ನಡೆಸಿದ್ದಾರೆ. ಇವರ ಹಿಟ್ಲರ್ ಶಾಹಿ ಆಡಳಿತ ಕೊನೆಗೊಳಿಸಬೇಕು. ಬಡವರು, ಕೂಲಿಕಾರರಿಗೆ ಒಳ್ಳೆಯದಾಗಬೇಕು. ಮೇಲ್ವರ್ಗದ ಜನರ ಸಂಪೂರ್ಣ ಬೆಂಬಲಿವಿದೆ ಎಂದರು.
ಪಾಲಿಕೆ ಸದಸ್ಯ ರಾಜು ಜಾಧವ ಮಾತನಾಡಿ, ಸಂಸದ ಜಿಗಜಿಣಗಿಯವರು ಯಾವೊಂದು ಕೆಲಸ ಮಾಡಿಲ್ಲ. ಬೆಂಗಳೂರಿಗೆ ಒಂದು ಸರಿಯಾದ ರೈಲು ಮಾಡಲಿಲ್ಲ. ನಮ್ಮ ಲಂಬಾಣಿ ಸಮಾಜಕ್ಕೆ ಕನಿಷ್ಠ ಮರ್ಯಾದೆಯೂ ಕೊಡದೆ ನಮ್ಮ ಓಟೇ ಬೇಡ ಎಂದು ಹೇಳಿದ್ದಾರೆ. ಅವರಿಗೆ ಈ ಸಲ ಬುದ್ಧಿ ಕಲಿಸಬೇಕು ಎಂದರು.
ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಸಮುದಾಯಗಳ ಬಗ್ಗೆ ಗೌರವವಿಲ್ಲದ ಈಗಿನ ಸಂಸದರಿಂದ ಯಾವುದೇ ಉಪಯೋಗವಿಲ್ಲ. ಕಾಂಗ್ರೆಸ್‌ಗೆ ಮತ ನೀಡಿದರೆ ಅದು ವ್ಯರ್ಥವಾಗುವುದಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ಹಾಕಿಕೊಂಡಿದ್ದೇನೆ. ನಿಮ್ಮ ಸೇವಕನಾಗಿ ದುಡಿದು ವಿಶ್ವಾಸ ಉಳಿಸಿಕೊಳ್ಳುವೆ ಎಂದು ಹೇಳಿದರು.
ಖೀರು ಮಾಸ್ತರ ಅವರು ಮಾತನಾಡಿ, ತಾಂಡಾ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದೆ. ನಮ್ಮ ಹಿತ ಯಾವತ್ತೂ ಕಾಪಾಡಿದೆ. ನಾವು ನಿಮ್ಮ ಜತೆಗಿದ್ದೇವೆ ಎಂದರು.
ರಾಜಶೇಖರ ಅವಜಿ ಪ್ರಸ್ತಾವಿಕ ಮಾತನಾಡಿ, ಈ ಸಲ ಪ್ರಜ್ಞಾವಂತಿಕೆಯಿಂದ ನಾವು ಮತಚಲಾಯಿಸುವ ಸಂದರ್ಭ ಬಂದಿದೆ. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಬಡವರ ಪರ ರಾಹುಲ್ ಗಾಂಧಿಯವರು ಮಿಡಿದಿದ್ದಾರೆ ಎಂದರು.
ಜಗನು ಮಾಸ್ತರ, ಲಾಲು ಮೊಕದ್ದಮ್, ಪ್ರಫುಲ್ ಮಂಗಣ್ಣವರ, ಯುವರಾಜ ರಾಠೋಡ, ಅರ್ಜುನ್ ರಾಠೋಡ, ಅನಿಲ ಭಾಗು ರಾಠೋಡ ಅನೇಕರಿದ್ದರು.
