ಕಾಂಗ್ರೆಸ್ ಪಾಪದ ಕೆಲಸಕ್ಕೆ ಕರ್ನಾಟಕದ ಜನತೆ ಲೋಕಸಭೆ ಚುನಾವಣೆಯಲ್ಲಿ ಸೂಕ್ತ ಉತ್ತರ ಕೊಡಬೇಕು. ಏಪ್ರಿಲ್ 26ರಂದು ನಡೆದಿರುವ ಮತದಾನದ ಬಳಿಕ ಕಾಂಗ್ರೆಸ್ ದಿಗಿಲುಗೊಂಡಿದೆ. ಅಧಿಕಾರಕ್ಕೆ ಬಂದರೆ ಸಾಕು ಲೂಟಿ ಮಾಡುವುದೇ ಅವರ ಕೆಲಸ. ಭ್ರಷ್ಟಾಚಾರ, ಜನವಿರೋಧಿ ನೀತಿಗೆ ಜನತೆ ಬೇಸತ್ತಿದ್ದು, ಬಿಜೆಪಿಗೆ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ದಾವಣಗೆರೆ ನಗರದ ಕೇಂದ್ರ ಭಾಗದಲ್ಲಿ ಬಾಲಕರ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹಾಗೂ ಹಾವೇರಿ -ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಪರ ಮತಯಾಚನೆ ನಡೆಸಿ ಮಾತನಾಡಿದರು.
“ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧ ಕೃತ್ಯಗಳು, ದೇಶದ್ರೋಹಿ ಘಟನೆಗಳು ನಡೆಯುತ್ತಿವೆ. ಬೆಂಗಳೂರು ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆಯಾಗಿದೆ. ಪೋಷಕರು ಹೆಣ್ಣು ಮಕ್ಕಳನ್ನು ಒಬ್ಬರೇ ಕಳುಹಿಸಲು ಭಯ ಪಡುವಂತಾಗಿದೆ” ಎಂದು ಆರೋಪಿಸಿದರು.
“ಕಾಂಗ್ರೆಸ್ ಸರ್ಕಾರವು ತುಷ್ಠೀಕರಣದ ಕಡೆ ಗಮನ ಕೊಡುತ್ತಿದೆಯೇ ಹೊರತು ನೇಹಾಳಂತ ಹೆಣ್ಣು ಮಕ್ಕಳ ಬಗ್ಗೆ ಕಾಂಗ್ರೆಸ್‌ಗೆ ಕಳಕಳಿ ಇಲ್ಲ. ಮತ ಬ್ಯಾಂಕ್‌ಗಾಗಿ ದೇಶ ವಿರೋಧಿ ಶಕ್ತಿಗಳ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ಪಿಎಫ್‌ಐನಂತಹ ಸಂಘಟನೆಗಳ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಪಕ್ಷ ಕಾಂಗ್ರೆಸ್, ಆದರೆ ಬಿಜೆಪಿ ಪಿಎಫ್‌ಐನ್ನು ನಿಷೇಧಿಸಿದೆ” ಎಂದು ತಿಳಿಸಿದರು.
“ದೇಶ ವಿರೋಧಿಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಸಿಂಹಸ್ವಪ್ನ. ಮತ ಬ್ಯಾಂಕ್‌ಗೆ ಮಹಿಳೆಯರು, ಯುವತಿಯರು, ಬಡವರು, ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಿದೆ. ಕಾಂಗ್ರೆಸ್ಸಿಗರು ನಿಮ್ಮ ಬ್ಯಾಂಕಿನ ಹಣ, ಆಸ್ತಿ, ಮಹಿಳೆಯರ ಬಳಿ ಇರುವ ಒಡವೆ ಎಲ್ಲವನ್ನೂ ಎಕ್ಸ್-ರೇ ಮಾಡಲಿದ್ದಾರೆ. ಮಂಗಳಸೂತ್ರವನ್ನೂ ಲಪಟಾಯಿಸುವ ಸಂಚು ನಡೆಸಿದ್ದಾರೆ. ಮುಂದೆ ನಿಮ್ಮ ಸಂಪತ್ತನ್ನು ಲೂಟಿ ಮಾಡಿ ಅದನ್ನು ಕಾಂಗ್ರೆಸ್‌ನ ಮತ ಬ್ಯಾಂಕ್‌ಗೆ ಕೊಡಲಿದ್ದಾರೆ ಎಚ್ಚರವಾಗಿರಿ” ಎಂದು ಹೇಳಿದರು.
“ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಒಬ್ಬೊಬ್ಬರಂತೆ ಐವರು ಪ್ರಧಾನಿಯಾಗಲಿದ್ದಾರೆ. ಏಕ ವ್ಯಕ್ತಿ ಐದು ವರ್ಷ ಪ್ರಧಾನಿಯಾಗಿರಬೇಕೋ ಅಥವಾ ಐವರು ಆಗಬೇಕೋ. ದೇಶದ ಸುರಕ್ಷತೆ, ಅಭಿವೃದ್ಧಿ, ಭದ್ರತೆಯೇ ಮೋದಿ ಗ್ಯಾರಂಟಿ. ಮೇ.7ರಂದು ಮತದಾನವಾಗುತ್ತದೆ. ಮಹಿಳೆಯರು, ಯುವತಿಯರು, ಮೊದಲ ಬಾರಿ ಮತ ಚಲಾಯಿಸುವವರು ಯೋಚನೆ ಮಾಡಿ ಯೋಗ್ಯರಿಗೆ ಮತ ನೀಡಿ” ಎಂದು ಕರೆ ನೀಡಿದರು.
“ಇವಿಎಂ ಯಂತ್ರದ ಬಗ್ಗೆ ಆರೋಪ ಮಾಡಿದ್ದ ಕಾಂಗ್ರೆಸ್‌ಗೆ ಸುಪ್ರೀಂಕೋರ್ಟ್ ಕಪಾಳಮೋಕ್ಷ ಮಾಡಿದೆ. ಕಳೆದ ಬಾರಿ ಸೋತಾಗ ಇವಿಎಂ ದೂಷಿಸಿದ್ದರು. ಈ ಬಾರಿ ಸೋತರೆ ಯಾವ ಕಾರಣ ನೀಡುತ್ತಾರೆ, ಯಾರನ್ನು ದೂಷಿಸುತ್ತಾರೆ. ದೇಶದ ಮಹಿಳೆಯರೇ ನನಗೆ ರಕ್ಷಾಕವಚ. ಅವರ ಆಶೀರ್ವಾದ ನನ್ನ ಮೇಲಿದೆ. ಹತ್ತು ವರ್ಷದಲ್ಲಿ ಮೋದಿ ಆಡಳಿತವನ್ನು ಜನರು ನೋಡಿದ್ದಾರೆ. ನನ್ನ ಮೇಲಿನ ಇಷ್ಟೊಂದು ಪ್ರೀತಿ, ವಿಶ್ವಾಸ, ಬಲ ನೀಡಿರುವುದು ನನ್ನ ಪೂರ್ವಜನ್ಮದ ಪುಣ್ಯ. ನನಗೆ ಆಶೀರ್ವದಿಸಿದ ದೇಶದ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ” ಎಂದು ನರೇಂದ್ರ ಮೋದಿ ಹೇಳಿದರು.
“ಬಿಜೆಪಿ ಸರ್ಕಾರ ದೇಶದ ಮುನ್ನಡೆಗೆ ಶ್ರಮಿಸುತ್ತಿದೆ. ಆದರೆ, ಇಲ್ಲಿನ ಸರ್ಕಾರ ಹಿಂದಕ್ಕೆ ಕೊಂಡೊಯ್ಯುತ್ತಿದೆ. ಮೋದಿ ಮಂತ್ರವು ವಿಕಸಿತ ಭಾರತಕ್ಕೆ ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ದೇಶದ ಏಕತೆ ಕೊನೆಗಾಣಿಸಿ, ಅಭಿವೃದ್ಧಿಗೆ ತಡೆ ಹಾಕಲು ಕಾಂಗ್ರೆಸ್ ಯತ್ನಿಸುತ್ತಿದೆ. ಎನ್‌ಡಿಎ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಿದೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಒಳಜಗಳ ನಡೆಯುತ್ತಿದೆ. ನೂತನ ಶಿಕ್ಷಣ ನೀತಿ ರದ್ದುಗೊಳಿಸುವ ಮೂಲಕ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ. ನಮ್ಮ ಮತ್ತು ಅವರ ರಾಜಕೀಯ ಏನೇ ಇರಲಿ, ಪೋಷಕರು ಮತ್ತು ಮಕ್ಕಳಿಗೆ ತೊಂದರೆ ಕೊಡುವುದು ಎಷ್ಟು ಸರಿ. ಜನರಿಗೆ ತೊಂದರೆ ಕೊಡುವ ಅಧಿಕಾರ ಇಲ್ಲ” ಎಂದು ಗುಡುಗಿದರು.
“ಬಸವಣ್ಣನವರ ನಾಡಿನಲ್ಲಿ ಕಾಂಗ್ರೆಸ್ ಬಹಳ ತಪ್ಪು ಮಾಡುತ್ತಿದೆ. ಭ್ರಷ್ಟಾಚಾರ ಮಿತಿಮೀರಿದೆ. ತನ್ನ ಭ್ರಷ್ಟಾಚಾರಕ್ಕೋಸ್ಕರ ಎಸ್‌ಸಿ/ಎಸ್‌ಟಿ, ಒಬಿಸಿ ಸಮುದಾಯಕ್ಕೆ ಮೀಸಲಾದ ಹಣವನ್ನು ಬಳಕೆ ಮಾಡುತ್ತಿದೆ. ಬಡವರು ಸೇರಿದಂತೆ ಎಲ್ಲ ವರ್ಗದವರಿಗೂ ದ್ರೋಹ ಬಗೆಯುತ್ತಿದೆ. ನಾವು ಒಂದು ರೂಪಾಯಿ ಕಳುಹಿಸಿದರೆ 15 ಪೈಸೆ ಮಾತ್ರ ಕರ್ನಾಟಕಕ್ಕೆ ಬಂದು ಮುಟ್ಟುತಿತ್ತು. ಲೂಟಿ ಹೊಡೆದ ಹಣವೆಲ್ಲಾ ಏನಾಯ್ತು? ಭ್ರಷ್ಟಾಚಾರ ನಡೆಸುವವರು ಬೇಕೋ ವಿಕಸಿತ ಭಾರತಕ್ಕೆ ಶ್ರಮಿಸುವವರು ಬೇಕೋ. ಯೋಚನೆ ಮಾಡಿ ಮತಚಲಾಯಿಸಿ” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ | ಅತಿದೊಡ್ಡ ಸುಳ್ಳಿನ ಬಗ್ಗೆ ಕೆಲವು ಪ್ರಶ್ನೆಗಳಿವೆ, ಉತ್ತರಿಸಿ ಮೋದಿ: ಸಿಎಂ ಸಿದ್ದರಾಮಯ್ಯ
ಸಮಾರಂಭದಲ್ಲಿ ಸಂಸದ ಡಾ. ಜಿ ಎಂ ಸಿದ್ದೇಶ್ವರ, ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯೆ ಸುಮಲತಾ ಅಂಬರೀಷ್, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ, ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಶಾಸಕ ಬಿ ಪಿ ಹರೀಶ್, ಮಾಜಿ ಸಚಿವ ಬಿ ಸಿ ಪಾಟೀಲ್, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಲೋಕಿಕೆರೆ ನಾಗರಾಜ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಇದ್ದರು.
