ಸಂವಿಧಾನ ಬದಲಾವಣೆಯ ಆತಂಕ; ‘ಬಿಜೆಪಿ-ಎನ್‌ಡಿಎ’ಯಿಂದ ದೂರ ಸರಿಯುತ್ತಿದೆ ದಲಿತ ಸಮುದಾಯ

Date:

Advertisements

ತಮಿಳುನಾಡಿನ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷವನ್ನು ಹೊರತುಪಡಿಸಿ ‘ಇಂಡಿಯಾ’ ಮೈತ್ರಿಕೂಟದಲ್ಲಿ ಎಸ್‌ಸಿ/ಎಸ್‌ಟಿಗಳನ್ನು ಪ್ರತಿನಿಧಿಸುವ ಪಕ್ಷಗಳನ್ನು ಹೊಂದಿಲ್ಲ. ಆದರೂ, ಮೈತ್ರಿಕೂಟವು 2019ರ ಲೋಕಸಭಾ ಚುನಾವಣೆಗಿಂತ ಈ ಬಾರಿ ಅತೀ ಹೆಚ್ಚು ದಲಿತ ಮತಗಳನ್ನು ಪಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಪ್ರಮುಖ ಕಾರಣ, ಬಿಜೆಪಿಯ ಕೆಲ ನಾಯಕರು ಆಗಾಗ್ಗೆ ಹೇಳುತ್ತಿರುವ ‘ಸಂವಿಧಾನ ಬದಲಾವಣೆ ಮತ್ತು ಮೀಸಲಾತಿ ರದ್ದತಿ’ಯ ಹೇಳಿಕೆಗಳು ಎಂದು ಹೇಳಲಾಗುತ್ತಿದೆ.

ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಸೇರಿದಂತೆ ಕೆಲವು ಬಿಜೆಪಿ ನಾಯಕರು ಲೋಕಸಭೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತರಲಿದೆ. ಸಂವಿಧಾನವನ್ನು ಬದಲಿಸಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಸ್ವತಃ ಗೃಹ ಸಚಿವ ಅಮಿತ್ ಶಾ ಕೂಡ ಈ ಹಿಂದೆ, ಮೀಸಲಾತಿಯನ್ನು ರದ್ದುಗೊಳಿಸುವ ಹೇಳಿಕೆ ನೀಡಿದ್ದರು. ಇದೆಲ್ಲವೂ, ಆರ್‍‌ಎಸ್‌ಎಸ್‌ನ ಅಂಗಸಂಸ್ಥೆಯಾಗಿರುವ ಬಿಜೆಪಿ ಸಂವಿಧಾನದ ವಿರುದ್ಧ ಕಾರ್ಯಸೂಚಿ ಹೊಂದಿದೆ ಎಂಬುದನ್ನು ಸೂಚಿಸುತ್ತದೆ. ಅದಾಗ್ಯೂ, ಬಿಜೆಪಿ ಹೇಳುವ ರಾಷ್ಟ್ರೀಯತೆ ಮತ್ತು ಮುಸ್ಲಿಂ ಸಮುದಾಯದ ವಿರುದ್ಧದ ದ್ವೇಷದ ಕಾರಣಕ್ಕಾಗಿ ದಲಿತರೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದರು. ಇದೀಗ, ದಲಿತ ಸಂಘಟನೆಗಳು ಎಚ್ಚೆತ್ತುಕೊಂಡಿದ್ದು, ಸಂವಿಧಾನ ವಿರೋಧಿ ಬಿಜೆಪಿ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿವೆ.

ಪರಿಶಿಷ್ಟ ಸಮುದಾಯಗಳು ಮತ್ತು ಹಿಂದುಳಿದ ಸಮುದಾಯಗಳು ತಮ್ಮ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣಕ್ಕಾಗಿ ಸಂವಿಧಾನದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಅದರಲ್ಲಿಯೂ ಪರಿಶಿಷ್ಟ ಸಮುದಾಯಗಳ ಹೆಚ್ಚಾಗಿ, ಸಂವಿಧಾನವನ್ನೇ ಆಶ್ರಯಿಸಿವೆ. ಈ ಸಮುದಾಯಗಳು 2019ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಾಗಿ ಬಿಜೆಪಿಯತ್ತ ಒಲವು ಹೊಂದಿದ್ದರು. ಆದರೆ, ಬಿಜೆಪಿಗರ ಸಂವಿಧಾನ ಬದಲಿಸುವ ಹೇಳಿಕೆಗಳು ಈ ಸಮುದಾಯಗಳಲ್ಲಿ ಆತಂಕವನ್ನು ಹೆಚ್ಚು ಮಾಡುತ್ತಿದೆ.

Advertisements

ದೇಶಾದ್ಯಂತ ಹೆಚ್ಚಿನ ದಲಿತ ಸಂಘಟನೆಗಳು ಪರಿಶಿಷ್ಠ ಸಮುದಾಯಗಳಿಂದಲೇ ದೂರ ಉಳಿದಿವೆ. ಅವುಗಳು ಬಿಜೆಪಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಕೈಜೋಡಿಸಿವೆ. ಆದರೂ, ಎಚ್ಚೆತ್ತಿರುವ ಪರಿಸ್ಥಿತಿ ಸಮುದಾಯಗಳ ಜನರು ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳತ್ತ ತಮ್ಮ ಒಲವನ್ನು ವ್ಯಕ್ತಪಡಿಸುತ್ತಿದ್ದಾರೆ.

ಭರವಸೆಯಾಗಿ ನಿಲ್ಲದ ಬಿಎಸ್‌ಪಿ

ಪರಿಶಿಷ್ಟ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕೂಡ ಈ ಹಿಂದೆ ಬಿಜೆಪಿ ಜೊತೆ ಕೈಜೋಡಿಸಿದ್ದು, ದಲಿತರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಆದರೆ, ಈಗ ಬಿಎಸ್‌ಪಿ -ಎನ್‌ಡಿಎ ಮತ್ತು ಇಂಡಿಯಾ ಎರಡೂ ಕೂಟಗಳಿಂದ ಹೊರಗುಳಿದಿದೆ. ಅದಾಗ್ಯೂ, ಬಿಎಸ್‌ಪಿ ಪ್ರಬಲ ಅಸ್ತಿತ್ವವನ್ನು ಹೊಂದಿರದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಗುಜರಾತ್, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ದಲಿತರು ಕಾಂಗ್ರೆಸ್‌ಅನ್ನು ಪರ್ಯಾಯವಾಗಿ ನೋಡುತ್ತಿದ್ದಾರೆ.

ಅತಿ ಹೆಚ್ಚು ಎಸ್‌ಸಿ ಜನಸಂಖ್ಯೆ ಹೊಂದಿರುವ ನಿರ್ಣಾಯಕ ರಾಜ್ಯ ಉತ್ತರ ಪ್ರದೇಶದಲ್ಲಿಯೂ ದಲಿತರಿಗೆ ಬಿಎಸ್‌ಪಿ ಭರವಸೆಯಾಗಿ ಕಾಣುತ್ತಿಲ್ಲ. ದಲಿತರ ಆತಂಕಕ್ಕೆ ಪರ್ಯಾಯವಾಗಿ ಬಿಎಸ್‌ಪಿ ನಿಲ್ಲುವಲ್ಲಿ ವಿಫಲವಾಗಿದೆ. ಈ ಪರಿಸ್ಥಿತಿಯು ದಲಿತ ಮತಗಳು ‘ಇಂಡಿಯಾ’ ಮೈತ್ರಿಕೂಟದೆಡೆಗೆ ಬದಲಾಗುವ ನಿರೀಕ್ಷೆಯಿದೆ. ಉತ್ತರ ಪ್ರದೇಶದಲ್ಲಿ ದಲಿತರು 21.3% ಜನಸಂಖ್ಯೆಯನ್ನು ಹೊಂದಿದ್ದಾರೆ. ಅದರಲ್ಲಿ 60% ಜಾಟ್ಸ್‌ ಅಥವಾ ರವಿದಾಸ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಕೂಡ ಇದೇ ಸಮುದಾಯಕ್ಕೆ ಸೇರಿದವರು.

ಆಜಾದ್ ಸಮಾಜ ಪಕ್ಷದ ನಾಯಕ ಚಂದ್ರಶೇಖರ ಆಜಾದ್ ಕೂಡ ಇದೇ ಸಮುದಾಯದವರಾಗಿದ್ದು, ಅವರು ಬಿಎಸ್‌ಪಿಗೆ ಪರ್ಯಾಯವಾಗಿ ತಮ್ಮ ಪಕ್ಷವನ್ನು ಪ್ರಬಲಗೊಳಿಸಲು ಯತ್ನಿಸುತ್ತಿದ್ದಾರೆ. ಆದಾಗ್ಯೂ, ಅಜಾದ್ ಕೂಡ ‘ಇಂಡಿಯಾ’ ಒಕ್ಕೂಟದ ಭಾಗವಾಗಿಲ್ಲ.

ಉತ್ತರ ಪ್ರದೇಶದಲ್ಲಿ 17 ಎಸ್‌ಸಿ ಮೀಸಲು ಕ್ಷೇತ್ರಗಳಿವೆ. ‘ಇಂಡಿಯಾ‘ ಮೈತ್ರಿಯು ದಲಿತ ಸಮುದಾಯದ 19 ಮಂದಿಗೆ ಟಿಕೆಟ್‌ ನೀಡಿದೆ. ಸಮಾಜವಾದಿ ಪಕ್ಷವು ಫೈಜಾಬಾದ್ ಸಾಮಾನ್ಯ (ಜೆನರಲ್) ಕ್ಷೇತ್ರದಲ್ಲಿ ಹಿರಿಯ ದಲಿತ ನಾಯಕ ಅವಧೇಶ್ ಪ್ರಸಾದ್ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರವು ಅಯೋಧ್ಯ ಜಿಲ್ಲೆಯ ಭಾಗವಾಗಿದೆ.

ಅದೇ ರೀತಿ, ಮೀರತ್‌ ಕೂಡ ಎಸ್‌ಸಿ ಮೀಸಲು ಕ್ಷೇತ್ರವಾಗಿಲ್ಲ. ಆದರೂ, ಅಲ್ಲಿ, ಸಮಾಜವಾದಿ ಪಕ್ಷವು ದಲಿತ ಸಮುದಾಯಕ್ಕೆ ಸೇರಿದ ಮತ್ತೊಬ್ಬ ಮುಖಂಡೆ ಸುನೀತಾ ವರ್ಮಾ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಈ ಕ್ಷೇತ್ರದಲ್ಲಿ ದೂರದರ್ಶನದ ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಫೈಜಾಬಾದ್ ಮತ್ತು ಮೀರತ್‌ನಲ್ಲಿ ದಲಿತ ಅಭ್ಯರ್ಥಿಗಳನ್ನು ಹಾಕುವ ಮೂಲಕ ಧಾರ್ಮಿಕ ಪ್ರಭಾವಕ್ಕೆ ಸೆಡ್ಡು ಹೊಡೆಯಲು ‘ಇಂಡಿಯಾ’ ಕೂಟ ತಂತ್ರ ರೂಪಿಸಿದೆ. ಈ ತಂತ್ರವು ಯಶಸ್ವಿಯಾಗುವುದೇ ಅಥವಾ ಇಲ್ಲವೇ ಎಂಬುದನ್ನು ಫಲಿತಾಂಶವು ಹೇಳಲಿದೆ. ಏತನ್ಮಧ್ಯೆ, ದೇಶಾದ್ಯಂತ ಎಸ್‌ಸಿ ಮತ್ತು ಎಸ್‌ಟಿಗಳಲ್ಲಿ ಚಡಪಡಿಕೆ ಹೆಚ್ಚುತ್ತಿದೆ.

‘ಇಂಡಿಯಾ’ ಕೂಟದತ್ತ ಅಂಬೇಡ್ಕರ್‍‌ ವಾದಿಗಳು

ಮಹಾರಾಷ್ಟ್ರದಲ್ಲಿ, ರಾಮದಾಸ್ ಅಠವಾಲೆ ನೇತೃತ್ವದ ರಿಪಬ್ಲಿಕನ್ ಪಕ್ಷವು ಎನ್‌ಡಿಎ ಭಾಗವಾಗಿದೆ. ಮತ್ತೊಂದೆಡೆ, ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ (ವಿಬಿಎ) ಮಾತುಕತೆಗಳು ವಿಫಲವಾದ ನಂತರ ‘ಇಂಡಿಯಾ’ ಕೂಟದಿಂದ ಹೊರಗುಳಿದಿದೆ. ಪ್ರಾಸಂಗಿಕವಾಗಿ, ಮಹಾರಾಷ್ಟ್ರದಲ್ಲಿ ವಿಬಿಎ 36 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರಲ್ಲಿ ಒಬ್ಬರು ‘ಇಂಡಿಯಾ’ ಕೂಟದ ಅಭ್ಯರ್ಥಿಯನ್ನು ಬೆಂಬಲಿಸಿ, ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಆದರೂ, ಹಲವಾರು ಅಂಬೇಡ್ಕರ್ ಮತ್ತು ಬೌದ್ಧ ಸಂಘಟನೆಗಳು ‘ಇಂಡಿಯಾ’ ಕೂಟಕ್ಕೆ ತಮ್ಮ ಬೆಂಬಲ ಘೋಷಿಸಿವೆ. ಕೂಟದ ಪರವಾಗಿ ಬಹಿರಂಗ ಪ್ರಚಾರ ನಡೆಸುತ್ತಿವೆ. ಇದು, ‘ಇಂಡಿಯಾ’ ಕೂಟದ ಶಕ್ತಿಯನ್ನು ಹೆಚ್ಚಿಸುತ್ತಿದೆ.

ಈ ಬೆಳವಣಿಗೆಯು ಬಿಜೆಪಿಗೆ ತೀವ್ರ ಹೊಡೆತ ನೀಡಿದೆ. ಬಿಜೆಪಿಯ ಮಾಜಿ ಅಧ್ಯಕ್ಷ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಾಗ್ಪುರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.

ಬಿಹಾರದಲ್ಲಿ, ದಲಿತರನ್ನು ಪ್ರತಿನಿಧಿಸುವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ – ಎನ್‌ಡಿಎ ಭಾಗವಾಗಿವೆ. ಆದರೆ, ಇಲ್ಲಿಯೂ ಈ ಇಬ್ಬರು ನಾಯಕರ ಹಿಡಿತವು ಅವರ ಜಾತಿಗಳಾದ ಪಾಸ್ವಾನ್ ಮತ್ತು ಭೂಯಾನ್‌ಗಳಿಗೆ ಸೀಮಿತವಾಗಿದೆ. ಈ ಎರಡು ಜಾತಿಗಳು ರಾಜ್ಯದ ದಲಿತ ಜನಸಂಖ್ಯೆಯಲ್ಲಿ (19.6%) ಅರ್ಧದಷ್ಟು ಮಾತ್ರವೇ ಇವೆ. ಉಳಿದ ಅರ್ಧದಷ್ಟು ದಲಿತರು ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಓಲೈಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿವೆ. ‘ಇಂಡಿಯಾ’ ಬಣದ ಮೂರು ಕಮ್ಯುನಿಸ್ಟ್ ಪಕ್ಷಗಳು ದಲಿತ ಸಮುದಾಯದಲ್ಲಿ ಪ್ರಬಲ ಬೆಂಬಲವನ್ನು ಹೊಂದಿವೆ.

ಬಿಹಾರದ ಇನ್ನೊಂದು ಸಮಸ್ಯೆಯೆಂದರೆ, ಎಲ್‌ಜೆಪಿ ಮತ್ತು ಜನತಾ ದಳ (ಯುನೈಟೆಡ್) ನಡುವೆ ಭಾರೀ ದ್ವೇಷವಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಕಡಿಮೆ ಸ್ಥಾನಗಳನ್ನು ಗೆಲ್ಲಲು ಚಿರಾಗ್ ಪಾಸ್ವಾನ್ ಕಾರಣವೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ದೂಷಿಸಿದ್ದಾರೆ. ಆಗ ನಿತೀಶ್ ವಿರುದ್ಧ ಸಿಡಿದಿದ್ದ ಪಾಸ್ವಾನ್ ಜೆಡಿಯು ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಪಾಸ್ವಾನ್ ಕಣಕ್ಕಿಳಿಸಿದ್ದರು. ಅಲ್ಲದೆ, ಜೆಡಿಯುಗೆ ಯಾವುದೇ ಬೆಂಬಲವನ್ನು ನೀಡಿರಲಿಲ್ಲ. ಈ ದ್ವೇಷವು ಈಗಿನ ಲೋಕಸಭಾ ಚುನಾವಣೆಯಲ್ಲೂ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ಬಿಹಾರದ ದಲಿತರಲ್ಲಿ ದೊಡ್ಡ ವರ್ಗವು ಎನ್‌ಡಿಎಯಿಂದ ನಿರಾಸೆ ಅನುಭವಿಸಿದ್ದು, ಅವರು ‘ಇಂಡಿಯಾ’ದತ್ತ ಒಲವು ತೋರುತ್ತಿದ್ದಾರೆ.

ಕರ್ನಾಟಕದ ಸ್ಥಿತಿ

ಕರ್ನಾಟಕದಲ್ಲಿ ದಲಿತರನ್ನು ಪ್ರತಿನಿಧಿಸುವ ನಿರ್ಧಿಷ್ಟ ಪಕ್ಷವೆಂದು ಯಾವುದೇ ಪಕ್ಷವಿಲ್ಲ. ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ಸುಮಾರು 1.5 ಕೋಟಿ (2011ರ ಜನಗಣತಿ ಪ್ರಕಾರ) ಜನರಿದ್ದಾರೆ. ಈ ಸಮುದಾಯಗಳಲ್ಲಿ ಹೆಚ್ಚಿನವರು ಕಾಂಗ್ರೆಸ್‌ ಪರವಾಗಿದ್ದರೂ, ಕೆಲವು ದಲಿತರು ಬಿಜೆಪಿ-ಜೆಡಿಎಸ್‌ಅನ್ನು ಬೆಂಬಲಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ದಲಿತರು ಈ ಹಿಂದೆ ಜೆಡಿಎಸ್‌ ಎಡೆಗೆ ಒಲವು ಹೊಂದಿದ್ದರು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿ ಅಥವಾ ಜೆಡಿಎಸ್‌ನಿಂದ ಸಮುದಾಯದ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲ ಎಂಬುದನ್ನು ಸಮುದಾಯಗಳು ಗ್ರಹಿಸಿವೆ. ಹೀಗಾಗಿ, ಬಹುತೇಕ ದಲಿತರು ಕಾಂಗ್ರೆಸ್‌ ಪರವಾಗಿದ್ದಾರೆ. ಕೋಮುವಾದಿ, ಜಾತಿವಾದಿ ಬಿಜೆಪಿ-ಜೆಡಿಎಸ್‌ಅನ್ನು ಮಣಿಸಬೇಕೆಂದು ಮುಂದಾಗಿರುವ ದಲಿತ ಸಂಘಟನೆಗಳು ಕೂಡ ಕಾಂಗ್ರೆಸ್‌ಗೆ ಬೆಂಬಲ ನೀಡಿವೆ. ಪರಿಣಾಮ, ಈ ಚುನಾವಣೆಯಲ್ಲಿ ದಲಿತರ ಬಹುತೇಕ ಮತಗಳು ಕಾಂಗ್ರೆಸ್‌ ಪರವಾಗಿವೆ.

ದಲಿತ ಸಮುದಾಯ ಮತ್ತು ಮೀಸಲಾತಿ

ಪರಿಶಿಷ್ಟ ಸಮುದಾಯಗಳು ಸಂವಿಧಾನದ ತಿದ್ದುಪಡಿಯ ಬಗೆಗಿನ ಚರ್ಚೆಯಿಂದ ಆತಂಕಕ್ಕೊಳಗಾಗಿವೆ. ಅದಕ್ಕೆ, ಕೆಲವು ಬಲವಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳಿವೆ. ಸಂವಿಧಾನದಲ್ಲಿ ಖಾತ್ರಿಪಡಿಸಿರುವಂತೆ ಶಿಕ್ಷಣ, ಉದ್ಯೋಗಗಳು ಹಾಗೂ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿಯು ಸಮುದಾಯದ ಅರ್ಥಿಕ ಉಳಿವಿಗೆ ಬಹುಮುಖ್ಯವಾಗಿದೆ.

ಇದಲ್ಲದೆ, ಈ ಸಮುದಾಯಗಳು ಭಾರತದ ಸಂವಿಧಾನದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಸಂವಿಧಾನದ ಕತೃಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‍‌ ಪ್ರಮುಖರು ಎಂಬುದು ಸಮುದಾಯಗಳ ಭಾವನಾತ್ಮಕ ವಿಚಾರವಾಗಿದೆ. ಅಲ್ಲದೆ, ಆ ಸಂವಿಧಾನದಿಂದಲೇ ತಮ್ಮ ಉಳಿವು ಎಂದು ಸಮುದಾಯಗಳು ನಂಬಿವೆ.

ಸಮುದಾಯಗಳಲ್ಲಿ ಹೆಚ್ಚಿನವರು ಭೂರಹಿತದ್ದಾರೆ. ಅಲ್ಲದೆ, ಯಾವುದೇ ವ್ಯವಹಾರದ ಹಿನ್ನೆಲೆಯನ್ನೂ ಹೊಂದಿಲ್ಲ. ಹೀಗಾಗಿ, ಸರ್ಕಾರಿ ಉದ್ಯೋಗವೇ ಅವರಿಗೆ ಆಸರೆಯಾಗಿದೆ.

ಆದರೆ, ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ನಂತರ ಅವರ ಉದ್ಯೋಗಾವಕಾಶಗಳು ಈಗಾಗಲೇ ಕುಗ್ಗುತ್ತಿವೆ. ಇಂತಹ ಸಮಯದಲ್ಲಿ, ಸಂವಿಧಾನವನ್ನೇ ಬುಡಮೇಲು ಮಾಡುವ ಹುನ್ನಾರ ಹೊಂದಿರುವ ಬಿಜೆಪಿಯಿಂದ ಸಮುದಾಯಗಳ ದೂರ ಸರಿಯುತ್ತಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X