“ಪ್ರಧಾನಿ ನರೇಂದ್ರ ಮೋದಿಯವರದ್ದು ಅತ್ಯಾಚಾರಿಗಳ ಪರಿವಾರ. ಬಿಜೆಪಿ ಅಂದರೆ ಬಲಾತ್ಕಾರಿ ಜನತಾ ಪಾರ್ಟಿ” ಎಂದು ಆರೋಪಿಸಿ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಂಬಾ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು, “ನೂರಾರು ಮಹಿಳೆಯರನ್ನು ದುರುಪಯೋಗ ಮಾಡಿಕೊಂಡು, ಅತ್ಯಾಚಾರ ಎಸಗಿರುವ ಪ್ರಜ್ವಲ್ ರೇವಣ್ಣನ ಬಗ್ಗೆ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತು. ಸ್ಥಳೀಯ ಬಿಜೆಪಿ ನಾಯಕರು ಹೈಕಮಾಂಡ್‌ಗೆ ಪತ್ರವನ್ನೂ ಬರೆದಿದ್ದರು. ಎಲ್ಲ ಗೊತ್ತಿದ್ದೂ ಆತನನ್ನು ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲಾಯಿತು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, “ಕೇಂದ್ರ ಸರ್ಕಾರದ ಜವಾಬ್ದಾರಿ ಏನು? ಮೋದಿಯವರು ವಿಶ್ವಗುರುಗಳಲ್ಲವೇ? ಅವರು ಒಂದೇ ಒಂದು ಫೋನ್ ಕಾಲ್ ಮಾಡಿದ್ರೆ ಇಲ್ಲಿಗೆ ಪ್ರಜ್ವಲ್‌ನನ್ನು ಕರೆತರಬಹುದು. ತಪ್ಪಿತಸ್ಥರನ್ನು ಸದೆಬಡಿಯಲು ಕಾನೂನುಗಳಿವೆ. ಪ್ರಜ್ವಲ್ ರೇವಣ್ಣ ಈ ಜಗತ್ತನ್ನು ಬಿಟ್ಟು ಹೋಗಿಲ್ಲ. ಈ ಪ್ರಪಂಚದಲ್ಲೇ ಇದ್ದಾರೆ. ಅವರು ತಪ್ಪಿಸಿಕೊಂಡು ಹೋಗಲು ಬಿಜೆಪಿ ಸರ್ಕಾರ ಮತ್ತು ಮೋದಿಯವರೇ ನೇರ ಕಾರಣ. ಎರಡು ಸಾವಿರ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದೆ. ಸಂತ್ರಸ್ತರ ಪರವಾಗಿ ಮೋದಿ ಇದ್ದಾರಾ? ಅತ್ಯಾಚಾರಿಗಳ ಪರ ಇದ್ದಾರಾ? ಮೋದಿ ಮತ್ತು ಬಿಜೆಪಿ ಸರ್ಕಾರ ಬಂದು ಉತ್ತರಿಸಲಿ” ಎಂದು ಆಗ್ರಹಿಸಿದರು.
“ಪ್ರಕರಣ ಕೆಲವು ತಿಂಗಳ ಹಿಂದೆಯೇ ಬೆಳಕಿಗೆ ಬಂದಿತ್ತು. ಆದರೆ ಸಾಕ್ಷಿಗಳ ಕೊರತೆಯಿಂದ ಪ್ರಕರಣ ದಾಖಲಿಸಲು ಸಾಧ್ಯವಾಗಿರಲಿಲ್ಲ. ಸಂತ್ರಸ್ತರು ಬಂದು ದೂರು ನೀಡಿದ ತಕ್ಷಣ ಪ್ರಕರಣ ದಾಖಲಾಗಿದೆ. ಇಡೀ ದೇಶದಲ್ಲಿ ನಡೆದಿರುವ ಅತಿ ದೊಡ್ಡ ಲೈಂಗಿಕ ಹಗರಣವಿದು” ಎಂದು ಅಭಿಪ್ರಾಯಪಟ್ಟರು.
“ಸಂತ್ರಸ್ತರ ಪರವಾಗಿ ಕಾಂಗ್ರೆಸ್ ನಿಲ್ಲುತ್ತದೆ. ನೀವು ಧೈರ್ಯವಾಗಿರಿ. ಯಾರೂ ತಮ್ಮ ಜೀವವನ್ನು ಕಳೆದುಕೊಳ್ಳುವ ಯೋಚನೆ ಮಾಡಬಾರದು. ಯಾವನೋ ಒಬ್ಬ ಪಾಪಿಷ್ಟನಿಂದ ನಿಮ್ಮ ಬದುಕಿಗೆ ತೊಂದರೆಯಾಗಿರಬಹುದು. ಆದರೆ ಇದೇ ಅಂತ್ಯವಲ್ಲ. ಬದುಕು ಸುಂದರವಾಗಿದೆ. ನಿಮ್ಮೊಂದಿಗೆ ಸದಾ ಈ ನಾಡಿನ ಸಮಸ್ತ ಜನರು ಜೊತೆಯಲ್ಲಿರುತ್ತೇವೆ” ಎಂದು ಧೈರ್ಯ ತುಂಬಿದರು.
ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಮಾತನಾಡಿ, “ಕುಮಾರಸ್ವಾಮಿಯವರು ಜೆಡಿಎಸ್ ರಾಜ್ಯಾಧ್ಯಕ್ಷರು. ಪ್ರಜ್ವಲ್ ರೇವಣ್ಣನಿಗೆ ಟಿಕೆಟ್ ಕೊಟ್ಟಿರುವುದು ಇದೇ ಕುಮಾರಸ್ವಾಮಿಯವರಲ್ಲವೇ? ಅಧ್ಯಕ್ಷರಾಗಿ ನೈತಿಕ ಜವಾಬ್ದಾರಿ ಹೊರಬೇಕು. ಪ್ರಜ್ವಲ್ ರೇವಣ್ಣನಿಗೂ ಜೆಡಿಎಸ್‌ಗೂ ಸಂಬಂಧವಿಲ್ಲ ಎನ್ನಲು ಸಾಧ್ಯವಿಲ್ಲ. ರಾಜ್ಯದ ಹೆಣ್ಣುಮಕ್ಕಳ ವಿಚಾರವಿದು. ಹೆಚ್ಚುಕಮ್ಮಿಯಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ” ಎಂದು ಎಚ್ಚರಿಸಿದರು.
ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸುಮಾ ಮಹೇಂದರ್ ಮಾತನಾಡಿ, “ಎರಡು ಸಾವಿರ ತಗೊಂಡು, ಎಲ್ಲೆಲ್ಲೋ ಹೆಂಗಸರು ಹೋಗುತ್ತಿದ್ದಾರೆಂದು ಬಿಜೆಪಿಯ ನಾಯಕಿಯರು ನಾಲಗೆ ಹರಿಬಿಡುತ್ತಿದ್ದಾರೆ. ಈಗ ಬಿಜೆಪಿ ನಾಯಕಿಯರು ಸಂತ್ರಸ್ತ ಹೆಣ್ಣುಮಕ್ಕಳನ್ನು ಭೇಟಿ ಮಾಡಿ ವಿಚಾರಿಸಿದ್ದಾರಾ? ಇಲ್ಲ. ಕಂಡವರ ಹೆಣ್ಣುಮಕ್ಕಳನ್ನು ಹಾಳು ಮಾಡಲಾಗಿದೆ. ಇದಕ್ಕೆ ನ್ಯಾಯ ಇಲ್ಲವಾ?” ಎಂದು ಪ್ರಶ್ನಿಸಿದರು.
“ಪ್ರಜ್ವಲ್ ರೇವಣ್ಣನ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳದೆ ತಪ್ಪಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆತ ಎಲ್ಲಿದ್ದರೂ ಬಂಧಿಸಲಾಗುವುದು. ನೇಹಾ ಎಂಬ ಹೆಣ್ಣುಮಗಳು ಕೊಲೆಯಾದಾಗ ರಾಜಕೀಯ ಮಾಡುತ್ತಾ ಕುಳಿತರು. ಈಗ ಏಕೆ ಸಂತ್ರಸ್ತ ಹೆಣ್ಣುಮಕ್ಕಳ ಪರ ಇವರು ಬರುತ್ತಿಲ್ಲ. ಬಿಜೆಪಿ ನಾಯಕರೇ ಏನು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದರು.
ಲೈಂಗಿಕ ಪ್ರಕರಣಗಳಲ್ಲಿ ಸಿಲುಕಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್, ಕುಲದೀಪ್ ಸಿಂಗ್ ಸೆಂಗಾರ್, ಸಂದೀಪ್ ಸಿಂಗ್ ಸೈನಿ, ಚಿನ್ಮಯಾನಂದ, ಪದ್ಮರಾಜನ್ ಕೆ, ರಾಮದುಲರ್ ಗೌರ್, ರಮೇಶ್ ಜಾರಕಿಹೊಳಿ ಅವರ ಫೋಟೋಗಳನ್ನು ಹೊಂದಿದ್ದ ’ಮೋದಿ ಕಾ ಪರಿವಾರ- ಬಲಾತ್ಕರಿ ಜನತಾ ಪಕ್ಷ’ ಎಂಬ ಪೋಸ್ಟರ್‌ಗಳನ್ನು ಮಹಿಳೆಯರು ಪ್ರದರ್ಶಿಸಿದರು.