ರಾಜ್ಯ ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್ ಬಳಿಯಿರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಪ್ರಮುಖ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಎನ್‌ಐಎ ವಿಶೇಷ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅಬ್ದುಲ್ ಮತೀನ್ ಅಹ್ಮದ್ ತಾಹಾ (29) ಮತ್ತು ಮುಸ್ಸಾವಿರ್ ಹುಸೇನ್ ಶಝೀಬ್(30) ಬಂಧಿತ ಆರೋಪಿಗಳು. ಆರೋಪಿಗಳ ಎನ್‌ಐಎ ಕಸ್ಟಡಿ ಅಂತ್ಯದ ಹಿನ್ನೆಲೆ, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕೋರ್ಟ್ಗೆ ಆರೋಪಿಗಳನ್ನು ಹಾಜರುಪಡಿಸಿದ್ದರು. ಹಾಗಾಗಿ, ಎನ್‌ಐಎ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಒಬ್ಬರು ಆರೋಪಿಗಳನ್ನು ಎನ್‌ಐಎ ಅಧಿಕಾರಿಗಳು ಏ.12ರಂದು ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ನಂತರ ವಿಶೇಷ ನ್ಯಾಯಾಲಯಕ್ಕೆ ಶಂಕಿತರನ್ನು ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಆರೋಪಿಗಳ ಕಸ್ಟಡಿ ಅವಧಿ ಅಂತ್ಯವಾದ ಬಳಿಕ ಪುನಃ 7 ದಿನ ಕಸ್ಟಡಿಗೆ ಪಡೆಯಲಾಗಿತ್ತು. ಇದೀಗ, ಸೋಮವಾರ ಎನ್‌ಐಎ ಕಸ್ಟಡಿ ಅಂತ್ಯಗೊಂಡಿದೆ. ಹಾಗಾಗಿ ಎನ್‌ಐಎ ಅಧಿಕಾರಿಗಳು ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮಾಜಿ ಸಿಎಂ ಎಸ್.ಎಂ ಕೃಷ್ಣ ಆಸ್ಪತ್ರೆಗೆ ದಾಖಲು, ಆರೋಗ್ಯ ಸ್ಥಿರ
ಏನಿದು ಪ್ರಕರಣ?
ಮಾರ್ಚ್ 1ರಂದು ಮಧ್ಯಾಹ್ನ 12:55 ರ ಸುಮಾರಿಗೆ ವೈಟ್‌ಫೀಲ್ಡ್‌ನ ಬಳಿ ಇರುವ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರು ಸೇರಿದಂತೆ 9 ಜನರು ಗಾಯಗೊಂಡಿದ್ದರು. ಬಳಿಕ, ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಪ್ರಕರಣ ಸಂಬಂಧ ಹಲವೆಡೆ ಶೋಧ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಸುಮಾರು 40 ದಿನಗಳ ಬಳಿಕ ಕೋಲ್ಕೊತಾದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು.