ಒಂದು ವಾರದಿಂದ, ಹಾಸನ ಸಂಸದ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಬಗ್ಗೆ ಚರ್ಚೆ ನಡೀತಾ ಇದೆ. ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತ ಆಗ್ತಿದೆ. ಪ್ರಕರಣವನ್ನ ಎಸ್‌ಐಟಿ ತನಿಖೆಗೆ ನೀಡಲಾಗಿದೆ. ಆದ್ರೆ, ಆರೋಪಿ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಆತನ ವಿರುದ್ಧ ಪ್ರತಿಭಟನೆಗಳು ನಡೀತಾ ಇವೆ.
ಆದ್ರೆ, ಕೆಲ ಕಿಡಿಗೇಡಿಗಳು ಒಂದೊಂದೇ ವಿಡಿಯೋಗಳನ್ನು ವಾಟ್ಸಾಪ್ ಮೂಲಕ ಹರಿಬಿಡ್ತಾ ಇದ್ದಾರೆ. ಇದು ಆ ವಿಡಿಯೋಗಳಲ್ಲಿರುವ ಸಂತ್ರಸ್ತ ಮಹಿಳೆಯ ಜೀವ-ಜೀವನದ ಮೇಲೆ ತುಂಬಾನೆ ಪರಿಣಾಮ ಬೀರ್ತಾ ಇದೆ. ಈಗಾಗಲೇ ಹೊರಬಂದ ವಿಡಿಯೋಗಳಲ್ಲಿದ್ದ ನಾಲ್ವರು ಮಹಿಳೆಯರು ಮತ್ತು ಓರ್ವ ಸಂತ್ರಸ್ತೆಯ ಪತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆ ವಿಡಿಯೋಗಳು ಹೊರ ಬರದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯ ಹೆಚ್ಚಿದೆ.
ಅಷ್ಟೇ ಅಲ್ಲ, ಸಂತ್ರಸ್ತ ಮಹಿಳೆಯೊಬ್ಬರ ಕುಟುಂಬದವರು ಸೋಮವಾರ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ತಮ್ಮದೇ ಮನೆಯ ಮಹಿಳೆಯ ಬಗ್ಗೆ ತೀರಾ ತುಚ್ಛವಾಗಿ ಮಾತನಾಡಿದ್ದಾರೆ. ಅವರೇ ಸ್ವತಃ ಬಂದು ಪತ್ರಿಕಾಗೋಷ್ಠಿ ನಡೆಸಿದ್ರೋ, ಅಥವಾ ಯಾರಾದ್ರು ಬಲವಂತವಾಗಿ ಅವರನ್ನ ಕರೆತಂದು ಪ್ರೆಸ್‌ಮೀಟ್ ಮಾಡಿಸಿದ್ರೋ, ಗೊತ್ತಿಲ್ಲ. ಆದ್ರೆ, ಆ ಕುಟುಂಬದ ಪ್ರತಿಯೊಂದು ಮಾತು ತಮ್ಮ ಕುಟುಂಬದ ಮಹಿಳೆಯ ವಿರುದ್ಧವೇ ಇತ್ತು. ಆಕೆಯ ನಡತೆಯನ್ನ ಅವಮಾನಿಸುತ್ತಿತ್ತು. ಆಕೆಯೇ ಸರಿಯಿಲ್ಲ ಎಂಬ ಅಭಿಪ್ರಾಯವನ್ನು ಜಗತ್ತಿಗೆ ಸಾರುತ್ತಿತ್ತು. ಆದ್ರೆ, ಆಕೆಯನ್ನು ಆ ಕೃತ್ಯದಲ್ಲಿ ದುರ್ಬಳಕೆ ಮಾಡಿಕೊಂಡ ವಿಕೃತ ಕಾಮುಕನ ಬಗ್ಗೆ ಆ ಕುಟುಂಬ ಒಂದೇ ಒಂದು ಮಾತನಾಡಲಿಲ್ಲ.
ಒಂದು ಕುಟುಂಬ ತಮ್ಮ ಮನೆಯ ಮಗಳ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡ್ಲಿಕ್ಕೆ ಕಾರಣವೇನು? ಆಕೆ ವಿರುದ್ಧ ಮಾತಾಡಿದ್ರೆ, ನೆರೆಹೊರೆಯವರು ತಮ್ಮ ಮನೆಯ ಬಗ್ಗೆ ಅಸಹ್ಯವಾಗಿ ಮಾತನಾಡೋದ್ರಿಂದ ತಪ್ಪಿಸಿಕೊಳ್ಳಬಹುದು ಅಂತ. ಆದ್ರೆ, ನಿನ್ನೆಯ ಪ್ರೆಸ್‌ಮೀಟ್ ಅಷ್ಟಕ್ಕೆ ಸೀಮಿತ ಆಗಿರಲಿಲ್ಲ. ಅವರು ಯಾರದ್ದೋ ರಾಜಕೀಯ ಒತ್ತಡದಿಂದ ಅಷ್ಟೊಂದು ತುಚ್ಚವಾಗಿ ಮಾತಾಡಿದ್ದಾರೆ ಅನ್ನೋದನ್ನ ಎತ್ತಿ ತೋರಿಸುತ್ತಿತ್ತು.
ಅದೇನೆ ಇರಲಿ, ಇಂತಹ ಪ್ರಕರಣಗಳು ನಡೆದಾಗ ಅಥವಾ ಬೆಳಕಿಗೆ ಬಂದಾಗ, ಸಂತ್ರಸ್ತ ಮಹಿಳೆಗೆ ಆಕೆಯ ಕುಟುಂಬ, ನ್ಯಾಯಾಂಗ ವ್ಯವಸ್ಥೆ ನೈತಿಕ ಬೆಂಬಲವಾಗಿ ನಿಲ್ಲಬೇಕು. ಆಕೆಯನ್ನು ಅಮಿಷವೊಡ್ಡಿಯೋ, ಬೆದರಿಸಿಯೋ ದುರ್ಬಳಕೆ ಮಾಡಿಕೊಂಡ ಕಾಮುಕನ ವಿರುದ್ಧ ಹೋರಾಟ ಮಾಡೋದಕ್ಕೆ ಆ ಮಹಿಳೆಗೆ ಆಕೆಯ ಕುಟುಂಬ ಜೊತೆಯಾಗಿ ನಿಲ್ಲಬೇಕು. ಸಾಂತ್ವನ ಹೇಳಬೇಕು. ನಿನ್ನ ಜೊತೆ ನಾವಿದ್ದೀವಿ ಅಂತ ಧೈರ್ಯ ಹೇಳಬೇಕು. ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಆಕೆಗೆ ರಕ್ಷಣೆ ನೀಡಬೇಕು. ನಾಗರಿಕ ಸಮಾಜ ಆಕೆಯ ನ್ಯಾಯಾಕ್ಕಾಗಿ ದನಿ ಎತ್ತಬೇಕು.
ಆದ್ರೆ, ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಇದಾವುದೂ ನಡೀತಿಲ್ಲ. ಯಾಕಂದ್ರೆ, ಇಲ್ಲಿ ಗಂಡುಕುಲ, ರಾಜಕೀಯ ಪ್ರಭಾವ ಮೇಲುಗೈ ಸಾಧಿಸುತ್ತಿದೆ. ಗಂಡನ್ನ ಸಮರ್ಥಿಸಿ, ಹೆಣ್ಣನ್ನೇ ಹೊಣೆಯನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರ ನಡೀತಾ ಇದೆ. ತಲೆತಗ್ಗಿಸಬೇಕಾದ ಗಂಡುಕುಲ ಹಲ್ಲು ಕಿರಿಯುತ್ತಿದೆ.
ದೇಶದ ಜವಾಬ್ದಾರಿ ಹೊತ್ತಿದ್ದ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬಂದ್ರೂ ಕೂಡ ಪ್ರಕರಣದ ಬಗ್ಗೆ ಮಾತಾಡಲಿಲ್ಲ. ನೂರಾರು ಸಂತ್ರಸ್ತ ಹೆಣ್ಣು ಮಕ್ಕಳಿಗೆ ಸಾಂತ್ವನ, ಧೈರ್ಯ ತುಂಬುವ ಮಾತನಾಡಲಿಲ್ಲ. ಇನ್ನು, ಗೃಹ ಸಚಿವ ಅಮಿತ್ ಶಾ, ‘ಪ್ರಜ್ವಲ್ ವಿರುದ್ಧದ ಆರೋಪಗಳು ಆಧಾರರಹಿತ. ಈ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ’ ಎಂದಷ್ಟೇ ಹೇಳಿದ್ದಾರೆ. ಮಹಿಳೆಯ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ವಿರುದ್ಧ ಬಿಜೆಪಿ ಎಂದಿಗೂ ಮಾತನಾಡುವುದಿಲ್ಲ. ಆ ಬಗ್ಗೆ ಈದಿನ ಯೂಟ್ಯೂಬ್ ಚಾನೆಲ್‌ನಲ್ಲಿ ಸೋಮವಾರ ವಿಡಿಯೋ ಪ್ರಕಟವಾಗಿದೆ. ನೀವು ಅದನ್ನು ನೋಡಬಹುದು.
ಅಂದ್ರೆ, ಬಿಜೆಪಿ, ಬಿಜೆಪಿ ನಾಯಕರು ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂತ್ರಸ್ತ ಮಹಿಳೆಯರನ್ನ ಅವಮಾನಿಸಿ, ಆರೋಪಿಗಳನ್ನ ರಕ್ಷಣೆ ಮಾಡ್ತಲೇ ಬಂದಿದೆ.
ಹಾಸನ ಪ್ರಕರಣ ಬೆಳಕಿಗೆ ಬಂದ ಬಳಿಕ, ಕೃತ್ಯದ ವಿಡಿಯೋಗಳು ಮತ್ತು ಚಿತ್ರಗಳು ಹರಿದಾಡಲು ಆರಂಭಿಸಿದ ಬಳಿಕ ನಾಲ್ವರು ಸಂತ್ರಸ್ತ ಮಹಿಳೆಯರು ಮಾನಸಿಕವಾಗಿ ನೊಂದಿದ್ದಾರೆ. ಅವಮಾನಕ್ಕೆ ಗುರಿಯಾಗಿದ್ದಾರೆ. ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಇಂತಹ ನೂರಾರು ಸಂತ್ರಸ್ತ ಮಹಿಳೆಯರು ಕೂಡ ತಾವಿರುವ ವಿಡಿಯೋಗಳು ಯಾವಾಗ ಹೊರಬರುತ್ತವೋ ಎಂಬ ಆತಂಕದಲ್ಲಿದ್ದಾರೆ. ಇಂತದ್ದೇ ಸಮಯದಲ್ಲಿ ಸಂತ್ರಸ್ತೆಯರ ಕುಟುಂಬಗಳ ಸಂತ್ರಸ್ತೆಯರ ವಿರುದ್ಧ ಮಾತನಾಡುವಂತೆ ಮಾಡ್ಲಾಗ್ತಾ ಇದೆ.
ಆದ್ರೆ, ಇಂತಹ ಕೃತ್ಯಗಳಲ್ಲಿ – ಪ್ರಕರಣಗಳಲ್ಲಿ ಸಂತ್ರಸ್ತೆಯರು ಧೈರ್ಯವಾಗಿರಬೇಕು. ಪ್ರಕರಣಗಳನ್ನ ಧೈರ್ಯವಾಗಿ ಎದುರಿಸಬೇಕು. ಸಂತ್ರಸ್ತೆಯರಿಗೆ ಆಕೆಯ ಕುಟುಂಬ ನೈತಿಕ ಬೆಂಬಲ ನೀಡಬೇಕು. ಆಕೆಗೆ ಧೈರ್ಯ ಹೇಳಬೇಕು. ನೆರೆಹೊರೆಯವರು ಕೂಡ ಸಂತ್ರಸ್ತೆಯ ಪರವಾಗಿ ಮಾತನಾಡಬೇಕು. ಕೃತ್ಯ ಎಸಗಿದ ವಿಕೃತ ಕಾಮುಕರು ಅಂಜುವಂತೆ ಮಾಡಬೇಕು. ಅಂತಹ ಕಾಮುಕರಿಗೆ ಶಿಕ್ಷೆ ವಿಧಿಸಬೇಕು.
ಅದಕ್ಕಾಗಿ, ಕುಟುಂಬಗಳು, ಸಮಾಜ ಸಂತ್ರಸ್ತೆಯರನ್ನು ಅವಮಾನಿಸೋದನ್ನ ಬಿಡಬೇಕು. ಪ್ರಕರಣದ ಕೃತ್ಯದ ಉಳಿದ ವಿಡಿಯೋಗಳು ಸಾಮಾಜಿಕ ಜಾಲತಾಣಕ್ಕೆ ಬಾರದಂತೆ ಸರ್ಕಾರ, ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು. ನಾಗರಿಕ ಸಮಾಜ ಇಂತಹ ಕೃತ್ಯಗಳನ್ನು ಎಸಗಿದ ವಿಕೃತ ಕಾಮಿಯ ವಿರುದ್ಧ ಹೋರಾಟ ನಡೆಸಬೇಕು..
ಮಾತ್ರವಲ್ಲ, ಸರ್ಕಾರಗಳು ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಲಿಕ್ಕೆ, ಸಂತ್ರಸ್ತೆಯರಿಗೆ ಕೌನ್ಸಿಲಿಂಗ್ ಸೆಶನ್ಸ್, ಸಹಾಯವಾಣಿ, ಆರೋಗ್ಯ ಚಿಕಿತ್ಸೆಗಳು, ಸುರಕ್ಷತೆ ಮತ್ತು ಇತರೆ ಕ್ರಮಗಳನ್ನ ಕೈಗೊಳ್ಳಬೇಕು. ಆದ್ರೆ, ಸರ್ಕಾರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಕೊಟ್ಟು, ಕೈತೊಳೆದುಕೊಂಡಿದೆ. ಸರ್ಕಾರ ಆ ಮಹಿಳೆಯರ ರಕ್ಷಣೆಗಾಗಿ ನಾನಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
ಇದೇ ಸಮಯದಲ್ಲಿ ಸಂತ್ರಸ್ತೆಯರು ಧೈರ್ಯವಾಗಿ ನಿಂತು ಹೋರಾಟ ನಡೆಸಬೇಕಿದೆ. ಅಂಜಬೇಕಾದ್ದು ನಾವಲ್ಲ – ಆ ವಿಕೃತ ಕಾಮಿ ಎಂಬುದನ್ನ ಅರಿತು – ಗಟ್ಟಿಯಾಗಿ ಮುನ್ನಡೆಬೇಕು.
ಅದೇನೆ ಆಗಿರಲಿ ಸಮಾಜ ಹೆಣ್ಣುಮಕ್ಕಳ ಪರವಾಗಿ ನಿಂತು ಅವರಿಗೆ ಆತ್ಮಸ್ಥರ್ಯ ತುಂಬಬೇಕು.ಮೊದಲು ಕುಟುಂಬ ಗಳು ಅವರ ಪರವಾಗಿ ನಿಲಗಲಬೇಕು. ಹೆಣ್ಣು ತಪ್ಪು ಮಾಡಿದ್ದಾಳೆ ಅಂದರೆ ಅದಕ್ಕೆ ಅವಳ ದುರ್ಬಲತೆ , ಪುರುಷ ದಬ್ಬಾಳಿಕೆ, ಅವಳ ಅಸಹಾಯಕತೆ ಕಾರಣ ಆಗಿರುತ್ತೆ..ಹಾಗಾಗಿ ಅವಳಿಗೆ ಬೆಂಬಲ ರಕ್ಷಣೆ ಕೊಡೋದು ಎಲ್ಲರ ಆದ್ಯ ಕರ್ತವ್ಯ.