ರಾಯಚೂರು ಕ್ಷೇತ್ರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿ ಸೋಮಣ್ಣ ಬೇರೆ ಜಿಲ್ಲೆಯವರೆಂದು ಹೇಳಿದ್ದರು. ಆದರೆ, ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬೇರೆ ಜಿಲ್ಲೆಯರನ್ನು ಕಣಕ್ಕಿಳಿಸಿದ್ದಾರೆ. ಇದಕ್ಕೆ ಏನು ಹೇಳುತ್ತಾರೆ ಎಂದು ಮಾಜಿ ಸಚಿವ ಹಾಗೂ ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪ್ರಶ್ನಿಸಿದರು.
ರಾಯಚೂರಿನಲ್ಲಿ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಲೋಕಸಭಾ ಚುನಾವಣೆ ದೇಶದ ಚುನಾವಣೆಯಾಗಿದ್ದು ಸಮರ್ಥ, ದೂರದೃಷ್ಟಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ತರಲು ಬಿಜೆಪಿ ಬೆಂಬಲಿಸಬೇಕಿದೆ. ಸರಳ, ಸಜ್ಜನಿಕೆ ಅಭ್ಯರ್ಥಿಯಾಗಿರುವ ರಾಜಾ ಅಮರೇಶ್ವರನಾಯಕರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಐಎಎಸ್ ಅಧಿಕಾರಿಯಾಗಿರುವ ಜಿ.ಕುಮಾರನಾಯಕ ಸರ್ಕಾರಿ ಸೇವಾ ನಿವೃತ್ತಿ ನಂತರ ಜಿಲ್ಲೆಗೆ ಆಗಮಿಸಿ ಸ್ಪರ್ಧಿಸಿದ್ದಾರೆ. ಜಿಲ್ಲೆಗೆ ಅವರ ಕೊಡುಗೆ ಏನು ಇಲ್ಲ. ಸ್ಥಳೀಯರಾದ ಬಿಜೆಪಿ ಅಭ್ಯರ್ಥಿಯನ್ನು ಜನತೆ ಆರ್ಶೀವಾದ ಮಾಡಬೇಕೆಂದರು.
ಏಮ್ಸ್ ಮಂಜೂರಾತಿ ವಿಷಯದಲ್ಲಿ ಕೇಂದ್ರದ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ಅಮರೇಶ್ವರನಾಯಕ ಮಾಡಿದ್ದಾರೆ. ಕರ್ನಾಟಕಕ್ಕೆ ಏಮ್ಸ್ ಮಂಜೂರು ಬಜೆಟ್‌ನಲ್ಲಿ ಆಗಿದೆ. ಮುಂದಿನ ದಿನಗಳಲ್ಲಿ ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತೆವೆ ಎಂದು ಹೇಳಿದರು.
14 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದು ಉತ್ತಮ ಫಲಿತಾಂಶದ ದೊರೆಯುವ ವಿಶ್ವಾಸವಿದೆ. ಎರಡನೇ ಹಂತದಲ್ಲಿ ನಡೆಯಲಿರುವ 14 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಇವರು ಬಿಜೆಪಿಯನ್ನು ಬೇಂಬಲಿಸುವ ಮೂಲಕ ದೇಶಕ್ಕಾಗಿ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜಪಾಟೀಲ್, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯಂ, ಅಭ್ಯರ್ಥಿ ರಾಜಾ ಅಮರೇಶ್ವರನಾಯಕ, ಎನ್. ಶಂಕರಪ್ಪ, ಕಡಗೋಳ ಆಂಜಿನೇಯ್ಯ, ರಾಘವೇಂದ್ರ ಉಟ್ಕೂರು, ರಾಜಕುಮಾರ ಉಪಸ್ಥಿತರಿದ್ದರು.
