ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಮಧ್ಯಂತರ ಅಧ್ಯಕ್ಷರಾಗಿ ದೇವೇಂದರ್ ಯಾದವ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಇಂದು ನೇಮಿಸಿದೆ.
ದೇವೇಂದರ್ ಯಾದವ್ ಅವರನ್ನು ಪಂಜಾಬ್‌ನ ಎಐಸಿಸಿ ಉಸ್ತುವಾರಿಯಾಗಿ ಕೂಡ ನೇಮಿಸಲಾಗಿದೆ.
ಅರವಿಂದರ್ ಸಿಂಗ್ ಲವ್ಲಿ ದೆಹಲಿ ಕಾಂಗ್ರೆಸ್ ಹುದ್ದೆಗೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ಅರವಿಂದರ್ ಸಿಂಗ್ ರಾಜೀನಾಮೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಾಟ್ಸ್ಯಾಪ್ ಯೂನಿವರ್ಸಿಟಿಯ ಭಕ್ತರೂ ಮತ್ತು ಮಹಾಪ್ರಭು ಮೋದಿಯೂ
“ಕಾಂಗ್ರೆಸ್ ಅಧ್ಯಕ್ಷರು ದೇವೇಂದರ್ ಸಿಂಗ್ ಅವರನ್ನು ದೆಹಲಿ ಕಾಂಗ್ರೆಸ್ ಸಮಿತಿಯ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿದ್ದು,ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ. ಇವರು ಪಂಜಾಬ್‌ನ ಎಐಸಿಸಿ ಉಸ್ತುವಾರಿಯಾಗಿ ಕೂಡ ಮುಂದುವರಿಯಲಿದ್ದಾರೆ” ಎಂದು ಕಾಂಗ್ರೆಸ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರವಿಂದರ್ ಸಿಂಗ್ ಲವ್ಲಿ ಅವರು ಎಎಪಿ ಮೈತ್ರಿಯ ಜೊತೆಗೆ ಕನ್ಹಯ್ಯ ಕುಮಾರ್ ಹಾಗೂ ಉದಿತ್ ರಾಜ್ ಅವರನ್ನು ದೆಹಲಿ ಕ್ಷೇತ್ರಗಳಿಂದ ಕಣಕ್ಕಿಳಿಸಿರುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.
ದೆಹಲಿ ಲೋಕಸಭಾ ಚುನಾವಣೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ 3 ಹಾಗೂ ಎಎಪಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಪಂಜಾಬ್‌ನಲ್ಲಿ ಎರಡೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿವೆ.