- ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ವಕೀಲ
- ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಈ ಘಟನೆ ನಡೆದಿದೆ
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಾದ ಮಂಡಿಸಿ ಹೊರ ಬಂದ ವಕೀಲರೊಬ್ಬರ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ. ಕಾಂಚನಾ ಎಂಬ ಮಹಿಳೆ ಹಲ್ಲೆ ಮಾಡಿದ್ದು, ಇವರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಕೀಲ ಕೃಷ್ಣಾರೆಡ್ಡಿ ಹಲ್ಲೆಗೊಳಗಾದವರು. ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಈ ಘಟನೆ ನಡೆದಿದೆ.
ಏನಿದು ಹಿನ್ನೆಲೆ?
ಕಾಂಚನಾ ನಾಲ್ಕು ವರ್ಷಗಳ ಹಿಂದೆ ಪೀಣ್ಯದ ನಿವಾಸಿ ಹರೀಶ್ ಹತ್ತಿರ ನಾಲ್ಕು ಲಕ್ಷ ಹಣವನ್ನು ಕೈ ಸಾಲವಾಗಿ ಪಡೆದಿದ್ದರು. ಪರಿಚಯಸ್ಥೆ ಎಂಬ ಹಿನ್ನೆಲೆ ಹರೀಶ್ ಸಾಲವನ್ನು ನೀಡಿದ್ದಾರೆ.
ಕೊಟ್ಟ ಸಾಲವನ್ನು ನಾಲ್ಕು ವರ್ಷಗಳಾದರೂ ಹಿಂತಿರುಗಿ ನೀಡಿರಲಿಲ್ಲ. ಈ ಬಗ್ಗೆ ಹರೀಶ್ ಕಾಂಚನಾಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಅವರಿಂದ ಚೆಕ್ ಪಡೆದಿದ್ದರು. ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ, ಹರೀಶ್ ತಮ್ಮ ವಕೀಲ ಕೃಷ್ಣಾರೆಡ್ಡಿ ಮೂಲಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಾಲಯದಲ್ಲಿ ಶುಕ್ರವಾರ ವಾದ-ಪ್ರತಿವಾದ ನಡೆದ ನಂತರ ಮುಂದಿನ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಲಾಲ್‌ಬಾಗ್‌ನ ವಾಯುವಿಹಾರಿಗಳಿಗೆ ಮತದಾನದ ಬಗ್ಗೆ ಜಾಗೃತಿ
ನ್ಯಾಯಾಲಯದಲ್ಲಿ ಕಲಾಪ ಮುಗಿಸಿ ಹೊರಬಂದ ಕೃಷ್ಣಾರೆಡ್ಡಿ, ಪ್ರತಿವಾದಿಯಾಗಿದ್ದ ಕಾಂಚನಾ, ನನ್ನ ವಿರುದ್ಧ ಕೇಸ್ ಮುಂದುವರೆಸುತ್ತೀಯಾ ಎಂದು ಹೇಳಿ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ, ಇಬ್ಬರ ನಡುವೆ ಸಂಘರ್ಷ ಹೆಚ್ಚಾಗಿದೆ. ಕಾಂಚನಾ ಚಾಕುವಿನಿಂದ ಕೃಷ್ಣಾರೆಡ್ಡಿ ಅವರ ಕಣ್ಣಿನ ಮೇಲ್ಬಾಗಕ್ಕೆ ಚುಚ್ಚಿದ್ದಾರೆ. ಗಾಯಗೊಂಡ ಕೃಷ್ಣಾರೆಡ್ಡಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಾಂಚನಾ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.