ಲೋಕಸಭಾ ಚುನಾವಣೆಯ ಮತದಾನ ನಡೀತಾ ಇದೆ. ಪ್ರಧಾನಿ ಮೋದಿ ಅವರು ಮತ್ತೆ-ಮತ್ತೆ ಕರ್ನಾಟಕಕ್ಕೆ ಭೇಟಿ ಕೊಡ್ತಿದ್ದಾರೆ. ತಮ್ಮ ಸಾಧನೆಗಳ ಬಗ್ಗೆ ಹೇಳೋದಕ್ಕಿಂತ ಪ್ರತಿಪಕ್ಷಗಳ ಬಗ್ಗೆ ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಇಷ್ಟೇ. ತಮ್ಮ ಸಾಧನೆಗಳನ್ನು ಹೆಚ್ಚಾಗಿ ಹೇಳಿಕೊಳ್ಳಲು ಏನೂ ಇಲ್ಲ. ಕರ್ನಾಟಕಕ್ಕೆ ಅವರ ಮಲತಾಯಿ ಧೋರಣೆ ಅನುಸರಿಸಿದ್ದೇ ಹೆಚ್ಚು. ಹೀಗಾಗಿ, ರಾಜ್ಯಕ್ಕೆ ಇಷ್ಟೊಂದು ಕೊಡುಗೆ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಮೋದಿ ಅವರಿಗೆ ಮುಖವಿಲ್ಲ.
ಅಂದಹಾಗೆ, ಮೋದಿ ಅವರು ‘ಎಲೆಕ್ಷನ್ ಪ್ರಧಾನಿ’ ಎಂದೂ ಖ್ಯಾತಿ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಮೋದಿ ಅವರು ಭಾರತದ ಬಹುತೇಕ ರಾಜ್ಯಗಳಿಗೆ ಭೇಟಿ ನೀಡುವುದು ಚುನಾವಣಾ ಸಮಯದಲ್ಲಿ ಮಾತ್ರ.
ಕರ್ನಾಟಕದ ಕತೆಯನ್ನೇ ನೋಡಿ, ರಾಜ್ಯದಲ್ಲಿ ಬರ ಎದುರಾದಾಗ ಮೋದಿ ಬರಲಿಲ್ಲ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಪ್ರವಾಹ ಉಂಟಾಗಿ, ನೆರೆ ಪರಿಸ್ಥಿತಿ ಇತ್ತು. ಆಗಲೂ ಮೋದಿ ಬರಲಿಲ್ಲ. ಆದರೆ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತ್ತೆ-ಮತ್ತೆ ಬಂದು ಪ್ರಚಾರ ಮಾಡಿದ್ದರು. ಈಗ, ಲೋಕಸಭೆಯ ಚುನಾವಣಾ ಪ್ರಚಾರಕ್ಕೂ ಬರುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದು ಹೋಗುತ್ತಿದ್ದಾರೆ.
ಬರ-ನೆರೆ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ನೆರವಾಗದ ಪ್ರಧಾನಿ ಮೋದಿ
ಈ ವರ್ಷ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಈ ಬಾರಿ ಎದುರಾಗಿರುವ ಬರವನ್ನು ಕಳೆದ 122 ವರ್ಷಗಳಲ್ಲಿಯೇ ಅತ್ಯಂತ 3ನೇ ಭೀಕರ ಬರವೆಂದು ತಜ್ಞರು ಬಣ್ಣಿಸಿದ್ದಾರೆ. ರಾಜ್ಯದಲ್ಲಿ 30,000 ಕೋಟಿಯಷ್ಟು ಬೆಳೆ ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ 2023ರ ಸೆಪ್ಟೆಂಬರ್‌ನಲ್ಲೇ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ. ಮಾತ್ರವಲ್ಲದೆ, ಎನ್‌ಡಿಆರ್‌ಎಫ್ ನಿಧಿಯಿಂದ ರಾಜ್ಯಕ್ಕೆ 18,174 ಕೋಟಿ ರೂ. ಬರ ಪರಿಹಾರ ನೀಡಬೇಕೆಂದು ಬೇಡಿಕೆಯನ್ನೂ ಇಟ್ಟಿತ್ತು. ಆದರೆ, ಆರು ತಿಂಗಳಾದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡಲಿಲ್ಲ. ಕೊನೆಗೆ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಕೇಂದ್ರದಿಂದ ಪರಿಹಾರ ತರಬೇಕಾಯಿತು. ಆದರೂ, ರಾಜ್ಯ ಬೇಡಿಕೆ ಇಟ್ಟಿದ್ದ ¼ ಭಾಗದಷ್ಟು ಮಾತ್ರವೇ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಿದೆ. ಇದೀಗ, ರಾಜ್ಯ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಅಷ್ಟೇ ಅಲ್ಲ, ಇಂತಹ ಭೀಕರ ಬರ ಎದುರಾದರೂ, ಪ್ರಧಾನಿ ಮೋದಿ ಕರ್ನಾಟಕಕ್ಕೆ ಭೇಟಿ ನೀಡಲ್ಲ. ಬರ ಪರಿಸ್ಥಿತಿಯನ್ನ ಅವಲೋಕಿಸಲಿಲ್ಲ. ರಾಜ್ಯದ ಜನರ ಅಳಲನ್ನು ಆಲಿಸಲಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಲಿಲ್ಲ.
ಇನ್ನು, 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉರುಳಿಸಿ, ಬಿಜೆಪಿ ಅಧಿಕಾರಕ್ಕೇರಿತ್ತು. ಸಚಿವ ಸಂಪುಟವನ್ನು ರಚಿಸಲಾಗದೆ ಯಡಿಯೂರಪ್ಪ ಏಕ ಚಕ್ರಾಧಿಪತ್ಯ ನಡೆಸುತ್ತಿದ್ದರು. ಅದೇ ಸಮಯದಲ್ಲಿ, ರಾಜ್ಯದಲ್ಲಿ ಸುರಿದ ಭಾರೀ ಮಳೆಯ ಕಾರಣ ರಾಜ್ಯವು ನೆರೆಗೆ ತುತ್ತಾಗಿತ್ತು. ಅತಿವೃಷ್ಟಿಯಿಂದ ಬೆಳೆ ನಾಶವಾದರೆ, ಜನರ ಮನೆಗಳೂ ಕುಸಿದು ಬಿದ್ದಿದ್ದವು. ಜನಜೀವನ ಅಸ್ತವ್ಯಸ್ತವಾಗಿ, ಅತಂತ್ರವಾಗಿತ್ತು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರೇ ಎಲ್ಲೆಡೆ ಓಡಾಡಿದರೂ, ಪರಿಸ್ಥಿತಿಯನ್ನು ನಿಭಾಯಿಸಲು ಅವರಿಂದ ಆಗಲೇ ಇಲ್ಲ.
ಆಗಲೂ, ಪ್ರಧಾನಿ ಮೋದಿ ರಾಜ್ಯಕ್ಕೆ ಬರಲಿಲ್ಲ. ಪರಿಹಾರ ತರಲಿಲ್ಲ. 2019ರಲ್ಲಿ ಎದುರಾದ ನೆರೆಯಿಂದ ಸುಮಾರು 38,000 ಕೋಟಿ ರೂ. ಹಾನಿಯಾಗಿತ್ತು. ಆದರೆ, ಕೇಂದ್ರ ಸರ್ಕಾರ ಕೊಟ್ಟಿದ್ದು ಮಾತ್ರ, ಕೇವಲ 2,069.95 ಕೋಟಿ ರೂ. ಮಾತ್ರ.
ತೆರಿಗೆ ಹಂಚಿಕೆಯಲ್ಲೂ ಕರ್ನಾಟಕಕ್ಕೆ ಅನ್ಯಾಯ
ದೇಶದಲ್ಲಿ ಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಿಂದ ಪ್ರತಿ ವರ್ಷ 4.30 ಲಕ್ಷ ಕೋಟಿ ರೂ. ತೆರಿಗೆ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತದೆ. ಆದರೂ, ತೆರಿಗೆ ಹಂಚಿಕೆಯಲ್ಲಿ ಕೇಂದ್ರವು ರಾಜ್ಯಕ್ಕೆ ದ್ರೋಹ ಮಾಡುತ್ತಿದೆ. ರಾಜ್ಯಗಳ ತೆರಿಗೆ ಹಂಚಿಕೆ ಕಡಿತದಿಂದಾಗಿ ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ 62,098 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ರಾಜ್ಯ ಸರ್ಕಾರದ ಅಂಕಿಅಂಶಗಳು ಹೇಳುತ್ತಿವೆ.
ಮಾತ್ರವಲ್ಲದೆ, ಜಿಎಸ್‌ಟಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ ಪಾಲನ್ನು 15ನೇ ಹಣಕಾಸು ಆಯೋಗವು 4.72%ನಿಂದ 3.64%ಗೆ ಕಡಿತ ಮಾಡಿದೆ. ಪರಿಣಾಮವಾಗಿ, ರಾಜ್ಯಕ್ಕೆ ಸುಮಾರು 73,600 ಕೋಟಿ ರೂ. ನಷ್ಟವಾಗಿದೆ ಎಂಬುದು ಕಠೋರ ಸತ್ಯ.
ಅಲ್ಲದೆ, 15ನೇ ಹಣಕಾಸು ಆಯೋಗವು ತನ್ನ ಮೊದಲನೇ ವರದಿಯಲ್ಲಿ ಕರ್ನಾಟಕ್ಕೆ 5,493 ಕೋಟಿ ರೂ. ವಿಶೇಷ ಅನುದಾನ ನೀಡಬೇಕು. ಜೊತೆಗೆ, ಬೆಂಗಳೂರಿನ ಪೆರಿಫೆರಲ್ ರಸ್ತೆ ಮತ್ತು ಕೆರೆಗಳ ಅಭಿವೃದ್ಧಿಗಾಗಿ ಸುಮಾರು 6,000 ಕೋಟಿ ರೂ. ಕೊಡಬೇಕು (ಒಟ್ಟೂ 11,493 ಕೋಟಿ ರೂಪಾಯಿಗಳು) ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ, ಈ ಹಣವನ್ನೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿಲ್ಲ.
ಹೀಗಾಗಿಯೇ, ತೆರಿಗೆ ಹಂಚಿಕೆಯಲ್ಲಿ ನ್ಯಾಯಯುತವಾಗಿ ರಾಜ್ಯಕ್ಕೆ ಧಕ್ಕಬೇಕಿದ್ದ ಪಾಲನ್ನು ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೂ, ಮೋದಿ ಅವರು ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಪಾಲನ್ನು ನೀಡಿಲ್ಲ.
ವಿಫಲವಾದ ಹಲವಾರು ಭರವಸೆಗಳು
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಡಬಲ್ ಎಂಜಿನ್ ಸರ್ಕಾರ ರಾಜ್ಯವನ್ನ ಅಭಿವೃದ್ಧಿ ಮಾಡುತ್ತದೆ ಎಂದು ಮೋದಿ ಮತ್ತು ರಾಜ್ಯ ಬಿಜೆಪಿ ನಾಯಕರು ಅಬ್ಬರದ ಭಾಷಣಗಳನ್ನ ಮಾಡಿದ್ದರು. ನಾನಾ ಭರವಸೆಗಳನ್ನೂ ನೀಡಿದ್ದರು. ಅದರಲ್ಲಿ, ಮಹಿಳಾ ಕೋ- ಆಪರೇಟಿವ್ ಸೊಸೈಟಿಗಳೂ ಒಂದು.
- ರಾಜ್ಯದಲ್ಲಿ ಮಹಿಳಾ ಕೋ- ಆಪರೇಟಿವ್ ಸೊಸೈಟಿಗಳನ್ನು ಸ್ಥಾಪಿಸಲಾಗುತ್ತದೆ. ಅದರ ಅಡಿಯಲ್ಲಿ ‘ಸ್ತ್ರೀ ಉನ್ನತಿ ಸ್ಟೋರ್’ಗಳನ್ನೂ ತೆರೆಯಲಾಗುತ್ತದೆ ಅಂತ ಮೋದಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಯಾವ ಸೊಸೈಟಿಗಳು ಆರಂಭವಾಗಲಿಲ್ಲ.
- ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯನ್ನು ತುರ್ತಾಗಿ ಮುಗಿಸೋದಾಗಿ ಹೇಳಿದ್ದ ಕೇಂದ್ರ ಸರ್ಕಾರ, ಯೋಜನೆಗೆ ಅನುದಾನವನ್ನೇ ಕಡಿತ ಮಾಡಿದೆ. ಅಲ್ಲದೆ, ಕೊಡಗಿಗೆ ಕ್ರೀಡಾ ವಿವಿ ಮಂಜೂರು ಮಾಡೋದಾಗಿ ಹೇಳಿತ್ತು. ಆದ್ರೆ, ಅದೂ ಕೂಡ ಮಂಜೂರಾಗಿಲ್ಲ.
- ಕೋಲಿ ಮತ್ತು ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡೋದಾಗಿ ಪ್ರಧಾನಿ ಮೋದಿ ಅವರೇ ಖುದ್ದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅವರು ಮೀಸಲಾತಿ ಬಗ್ಗೆ ತುಟಿ ಬಿಚ್ಚಿಲ್ಲ.
- 2022ರ ಒಳಗೆ ಮನೆಯಿಲ್ಲದ ಎಲ್ಲ ಬಡವರಿಗೆ ಮನೆ ನೀಡುವುದಾಗಿ ಮೋದಿ ಘೋಷಿಸಿದ್ದರು. ಆದರೆ, ಘೋಷಣೆಯ ಅವಧಿ ಮುಗಿದು 2 ವರ್ಷಗಳು ಕಳೆದಿವೆ. ಈಗಲೂ, ರಾಜ್ಯದಲ್ಲಿ ಸರಿಸುಮಾರು 18 ಲಕ್ಷ ಕುಟುಂಬಗಳು ಮನೆ ಇಲ್ಲದೆ, ತಾಟು, ಶೀಟಿನ ಗುಡಿಸಲಿನಲ್ಲಿ ವಾಸಿಸುತ್ತಿವೆ. ಮೋದಿ ಸರ್ಕಾರ ಬಡವರಿಗೆ ಮನೆ ಕೊಡದೆ, ಮೋಸ ಮಾಡಿದೆ.
- ಬೆಂಗಳೂರಿಗರಿಗೆ ‘ಕೆಂಪೇಗೌಡರ’ ಬೆಂಗಳೂರನ್ನು ಪುನಃ ಸೃಷ್ಟಿಸಿ ಕೊಡುತ್ತೇವೆ ಅಂತ 2018ರಲ್ಲಿ ಮೋದಿ ಆಶ್ವಾಸನೆ ನೀಡಿದ್ದರು. ಅಂದ್ರೆ, ಮಳೆ ನೀರು ನಿಲ್ಲದಂತೆ ಕ್ರಮ, ಪರಿಸರ ರಕ್ಷಣೆ, ಸುಗಮ ಸಂಚಾರ. ಆದರೆ, 2022ರಲ್ಲಿ ಸುರಿದ ಭಾರಿ ಮಳೆಗೆ ಇಡೀ ಬೆಂಗಳೂರು ಕೆರೆಯಾಗಿ ಮಾರ್ಪಟ್ಟಿತ್ತು. ಅಲ್ಲದೆ, ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲೂ ಬೆಂಗಳೂರು ಆಯ್ಕೆಯಾಗಿದೆ. 2023ರ ವೇಳೆಗೆ ಬೆಂಗಳೂರು ಸ್ಮಾರ್ಟ್ ಆಗಬೇಕಿತ್ತು. ಆದರೆ, ಯಾವುದೇ ಆಯಾಮದಲ್ಲೂ ಬೆಂಗಳೂರು ಸ್ಮಾರ್ಟ್ ಆಗಿಲ್ಲ.
- ಇನ್ನು, ಇಡೀ ದೇಶದಲ್ಲಿಯೇ ವಂದೇ ಭಾರತ್ ರೈಲು ಸಂಚರಿಸುತ್ತಿದ್ದರೂ ಕರ್ನಾಟಕಕ್ಕೆ ವಂದೇ ಭಾರತ್ ರೈಲು ಬಂದಿರಲಿಲ್ಲ. ಎಲ್ಲ ರಾಜ್ಯಗಳಿಗೂ ವಂದೇ ಭಾರತ್ ರೈಲು ಕೊಟ್ಟು, ಕಡೆಯದಾಗಿ ಮತ್ತು ತಡವಾಗಿ ಕರ್ನಾಟಕಕ್ಕೆ ವಂದೇ ಭಾರತ್ ರೈಲು ಬಂದಿತು.
- ಪ್ರಮುಖ ಯೋಜನೆಯಾದ ಜಲ್ ಜೀವನ್ ಮಿಷನ್ ಅಡಿಯಲ್ಲಿ ‘ಮನೆ-ಮನೆಗೂ ನಲ್ಲಿ’ ಕೊಡ್ತೇವೆ. ಎಲ್ಲರಿಗೂ ಶುದ್ಧ ಕುಡಿಯುವ ನೀರು ಕೊಡ್ತೇವೆ ಅಂತ ಮೋದಿ ಘೋಷಣೆ ಮಾಡಿದ್ದರು. ಆದ್ರೆ, ಈಗಲೂ ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಮನೆಗಳಿಗೆ ನಲ್ಲಿ ದೊರೆತಿಲ್ಲ. ಇನ್ನು, ನಲ್ಲಿ ಸಂಪರ್ಕ ದೊರೆತಿರುವ ಗ್ರಾಮಗಳ ಪೈಕಿ ಹಲವಾರು ಗ್ರಾಮಗಳಲ್ಲಿ ಆ ನಲ್ಲಿ ಮೂಲಕ ಒಂದು ಹನಿ ನೀರೂ ಬಂದಿಲ್ಲ.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದಾಗಲೂ, ರಾಜ್ಯದಲ್ಲಿ ಸರ್ಕಾರದ ಬದಲಾದಾಗಲೂ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆಯನ್ನೇ ಅನುಸರಿಸಿದೆ. ರಾಜ್ಯದಿಂದ ಕಿತ್ತುಕೊಂಡು ಉತ್ತರ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ. ಅದರಲ್ಲಿ, ಬೆಂಗಳೂರಿನಲ್ಲಿದ್ದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ‘ಎಚ್‌ಎಎಲ್’ನ ಏರ್‌ಶೋ ಅನ್ನೂ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಲು ಇದೇ ಮೋದಿ ಸರ್ಕಾರ ಮುಂದಾಗಿತ್ತು.
ಇಂತಹ ಹಲವಾರು ಸುಳ್ಳು ಭರವಸೆಗಳನ್ನು ನೀಡುವ ಮೂಲಕ, ರಾಜ್ಯದ ಆಸ್ತಿಯನ್ನು ಕಿತ್ತು ಬೇರೊಂದು ರಾಜ್ಯಕ್ಕೆ ಕೊಡುವ ಮೂಲಕ, ತೆರಿಗೆ ಹಂಚಿಕೆಯಲ್ಲಿ ವಂಚಿಸುವ ಮೂಲಕ ಮೋದಿ ಸರ್ಕಾರ ಕರ್ನಾಟಕಕ್ಕೆ ಮೋಸ ಮಾಡಿದೆ. ಇದನ್ನು ಕನ್ನಡಿಗರು ಅರಿತುಕೊಳ್ಳಬೇಕಿದೆ. ಚುನಾವಣೆಯಲ್ಲಿ ಪಾಠ ಕಲಿಸಬೇಕಿದೆ.