ದೆಹಲಿ ಮಹಿಳಾ ಆಯೋಗ ದ 223 ಉದ್ಯೋಗಿಗಳನ್ನು ಇಂದಿನಿಂದ ತಕ್ಷಣ ಜಾರಿಗೆ ಬರುವಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಜಾ ಮಾಡಿದ್ದಾರೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆದೇಶ ನೀಡಲಾಗಿದೆ.
2017ರಲ್ಲಿ ಲೆಫ್ಟಿನೆಂಟ್ ಗವರ್ನರ್‌ಗೆ ನೀಡಿದ ವಿಚಾರಣಾ ವರದಿಯ ಸಲ್ಲಿಕೆಯ ಆಧಾರದ ಮೇಲೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಅನುಮೋದಿಸಿದ ನಂತರ ಆದೇಶ ಜಾರಿಗೊಳಿಸಲಾಗಿದೆ.
ವರದಿಯ ಪ್ರಕಾರ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷರಾದ ಸ್ವಾತಿ ಮಲಿವಾಲ್ ಅವರು ಹಣಕಾಸು ಇಲಾಖೆ ಹಾಗೂ ಲೇಫ್ಟಿನೆಂಟ್ ಗವರ್ನರ್ ಅವರ ಅನುಮೋದನೆ ಪಡೆಯದೆ ಈ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೋಟಾವನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಲು ಇದು ಸಕಾಲ
ದೆಹಲಿ ಮಹಿಳಾ ಆಯೋಗದ ಕಾಯ್ದೆ ಪ್ರಕಾರ 40 ಹುದ್ದೆಗಳಿಗೆ ಮಾತ್ರ ಆದೇಶ ಮಂಜೂರಾತಿಗೊಳಿಸಬಹುದು. ಹೆಚ್ಚುವರಿ ಸದಸ್ಯರ ನೇಮಕಕ್ಕೆ ಅನುಮೋದನೆ ನೀಡಿರಲಿಲ್ಲ.
ಆದೇಶದಲ್ಲಿರುವಂತೆ ದೆಹಲಿ ಮಹಿಳಾ ಆಯೋಗವು ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ಅಧಿಕಾರ ಹೊಂದಿಲ್ಲ.
ದೆಹಲಿ ಮಹಿಳಾ ಆಯೋಗವು ಸಿಬ್ಬಂದಿಗಳ ನೇಮಕಾತಿಗೆ ಯಾವುದೇ ಕಾರ್ಯ ವಿಧಾನವನ್ನು ಅನುಸರಿಸಿರಲಿಲ್ಲ. ಹೆಚ್ಚುವರಿ ಸಿಬ್ಬಂದಿಯ ನಿಜವಾದ ಅವಶ್ಯಕತೆ ಹಾಗೂ ಪ್ರತಿ ಹುದ್ದೆಯ ಅರ್ಹತಾ ಮಾನದಂಡಗಳನ್ನು ಕೈಗೊಳ್ಳಲು ಯಾವುದೇ ಅಧ್ಯಯನ ಮಾಡಿರಲಿಲ್ಲ. ಅದಲ್ಲದೆ ನೇಮಕ ಮಾಡಿಕೊಳ್ಳಲಾದ ಉದ್ಯೋಗಿಗಳಿಗೆ ಯಾವುದೇ ಪಾತ್ರ ಹಾಗೂ ಜವಾಬ್ದಾರಿಗಳನ್ನು ನೀಡಿರಲಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
