ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದ ಸಲ್ಮಾನ್ ಖಾನ್ ಸಿನಿಮಾ
ಪ್ರೇಕ್ಷಕರು, ವಿಮರ್ಶಕರಿಂದಲೂ ಮಿಶ್ರ ಪ್ರತಿಕ್ರಿಯೆ
ಈದ್ ಪ್ರಯುಕ್ತ ಶುಕ್ರವಾರ ಜಗತ್ತಿನಾದ್ಯಂತ ತೆರೆಕಂಡಿರುವ ಸಲ್ಮಾನ್ ಖಾನ್ ಅಭಿನಯದ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾ ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರದ ಮೊದಲ ದಿನದ ಗಳಿಕೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್, ಸಲ್ಮಾನ್ ಖಾನ್ ಅವರ ಈ ಹಿಂದಿನ ಚಿತ್ರಗಳ ಮೊದಲ ದಿನದ ಗಳಿಕೆ ದಾಖಲೆಯನ್ನು ಹಿಂದಿಕ್ಕುವಲ್ಲೂ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸೋತಿದೆ ಎಂದಿದ್ದಾರೆ.
ದೇಶಾದ್ಯಂತ 4,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾ ಮೊದಲ ದಿನ ಗಲ್ಲಾ ಪೆಟ್ಟಿಗೆಯಲ್ಲಿ ಕೇವಲ ₹15.81 ಕೋಟಿಗಳನ್ನು ಕಲೆ ಹಾಕಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದಲೂ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಲ್ಮಾನ್ ಖಾನ್ ಅವರ ತಾರಾ ವರ್ಚಸ್ಸಿಗೆ ಈ ಮೊತ್ತ ತೀರಾ ಕಡಿಮೆ ಎನ್ನಲಾಗುತ್ತಿದೆ.
ಕಳೆದ ಒಂದು ದಶಕದಲ್ಲಿ ಸಲ್ಮಾನ್ ನಟಿಸಿದ ಬಹುತೇಕ ಚಿತ್ರಗಳು ತೆರೆಕಂಡ ಮೊದಲ ದಿನ ₹20 ಕೋಟಿಗಿಂತ ಕಡಿಮೆ ಮೊತ್ತವನ್ನು ಕಲೆ ಹಾಕಿಲ್ಲ. 2012ರಲ್ಲಿ ತೆರೆಕಂಡಿದ್ದ ʼಏಕ್‌ಥಾ ಟೈಗರ್ʼ ಸಿನಿಮಾ ಮೊದಲ ದಿನ ಗಲ್ಲಾ ಪೆಟ್ಟಿಗೆಯಲ್ಲಿ ₹32.93 ಕೋಟಿ ಗಳಿಸಿತ್ತು. 2014ರಲ್ಲಿ ಬಿಡುಗಡೆಯಾಗಿದ್ದ ʼಕಿಕ್ʼ ಸಿನಿಮಾ ಮೊದಲ ದಿನ ₹26.40 ಕೋಟಿ ಕಲೆ ಹಾಕಿತ್ತು.
2015ರಲ್ಲಿ ತೆರೆಗೆ ಬಂದಿದ್ದ ʼಭಜರಂಗಿ ಭಾಯ್‌ಜಾನ್ʼ ಸಿನಿಮಾ ಮೊದಲ ದಿನ ಗಲ್ಲಾ ಪೆಟ್ಟಿಗೆಯಲ್ಲಿ ₹27.25 ಕೋಟಿ ಬಾಚಿಕೊಂಡರೆ, 2016ರಲ್ಲಿ ಬಿಡುಗಡೆಯಾಗಿದ್ದ ʼಸುಲ್ತಾನ್ʼ ಸಿನಿಮಾ ₹36.54 ಕೋಟಿ ಗಳಿಸಿತ್ತು. 2017ರಲ್ಲಿ ತೆರೆಗೆ ಬಂದ ʼಟ್ಯೂಬ್‌ಲೈಟ್ʼ ಸಿನಿಮಾ 21.15 ಕೋಟಿ, 2018ರಲ್ಲಿ ಬಿಡುಗಡೆಯಾಗಿದ್ದ ʼರೇಸ್ 3ʼ 29.17 ಕೋಟಿ, 2019ರಲ್ಲಿ ತೆರೆಕಂಡಿದ್ದ ʼಭಾರತ್ʼ ಸಿನಿಮಾ ಕೂಡ ಮೊದಲ ದಿನ ʼ42.30ʼ ಕೋಟಿ ಗಳಿಸಿತ್ತು. ಆದರೆ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾ ತೆರೆಕಂಡ ಮೊದಲ ದಿನ ಕೇವಲ ₹15.81 ಕೋಟಿ ಕಲೆ ಹಾಕಿದ್ದು, ಸಲ್ಮಾನ್ ಖಾನ್ ಅವರ ಈ ಹಿಂದಿನ ಚಿತ್ರಗಳ ದಾಖಲೆಯನ್ನು ಹಿಮ್ಮೆಟಿಸುವಲ್ಲಿಯೂ ವಿಫಲವಾಗಿದೆ.
ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಚಿತ್ರ ಪ್ರೇಮ ಕಥೆ ಮತ್ತು ಕೌಟುಂಬಿಕ ಕಥಾಹಂದರದ ಸುತ್ತ ಮೂಡಿ ಬಂದಿದೆ. ವೈರಿಗಳಿಂದ ನಾಯಕಿಯ ಕುಟುಂಬವನ್ನು ರಕ್ಷಿಸಲು ಹೋರಾಡುವ ಆ್ಯಕ್ಷನ್ ಹೀರೋ ಪಾತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಪೂಜಾ ಹೆಗ್ಡೆ ನಾಯಕಿಯ ಪಾತ್ರದಲ್ಲಿ ಮಿಂಚಿದ್ದು, ವಿಕ್ಟರಿ ವೆಂಕಟೇಶ್, ಜಗಪತಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಫರ್ಹಾದ್ ಸಮ್ಜಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾ ಖಾನ್ ಬಂಡವಾಳ ಹೂಡಿದ್ದಾರೆ. ಕನ್ನಡಿಗ, ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.