ದಾವಣಗೆರೆ ನಗರದ ಹೊರವಲಯದಲ್ಲಿರುವ ಆವರಗೊಳ್ಳದ ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಆಕಸ್ಮಿಕವಾಗಿ ಕಸದ ರಾಶಿಗೆ ಗುರುವಾರ (ಮೇ.2) ಬೆಂಕಿ ತಗುಲಿದೆ.
ಅಪಾರ ಪ್ರಮಾಣದ ಕಸದ ರಾಶಿಗೆ ಬೆಂಕಿ ಬಿದ್ದಿರುವ ಕಾರಣ ಬೆಂಕಿಯ ಕೆನ್ನಾಲಿಗೆ ಕಸದ ರಾಶಿಗೆ ವ್ಯಾಪಿಸಿದ್ದು, ಎಲ್ಲೆಡೆ ದಟ್ಟ ಹೊಗೆ ಹರಡಿತ್ತು.
ಅಪಾರ ಪ್ರಮಾಣದ ಕಸದ ರಾಶಿಗೆ ಬೆಂಕಿ ಬಿದ್ದಿರುವ ಕಾರಣ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಳಗಿನ ಜಾವ ಬೆಂಕಿ ಬಿದ್ದಿದ್ದು, ರಾತ್ರಿಯವರೆಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಯಾವುದೇ ಹಾನಿಯಾಗಿಲ್ಲ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್‌ಕುಮಾರ್ ಬಿ.ಆರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬಿಸಿಲಿನ ತಾಪಕ್ಕೆ ಕಸದ ರಾಶಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಇಲ್ಲ ಆಕಸ್ಮಿಕವಾಗಿ ಬೆಂಕಿ ಬಿದ್ದಿರಲೂಬಹುದು. ಘಟಕ 16 ಎಕರೆ ಪ್ರದೇಶದಲ್ಲಿರುವ ಕಾರಣ ರಾತ್ರಿಯವರೆಗೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ. ಯಾವುದೇ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
