ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡ್‌ನಿಂದ ಸ್ಪರ್ಧಿಸಿರುವ ರಾಹುಲ್ ಗಾಂಧಿ, ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರಕ್ಕೆ ರಾಹುಲ್ ಅಭ್ಯರ್ಥಿಯೆಂದು ಕಾಂಗ್ರೆಸ್ ಘೋಷಿಸಿದೆ. ರಾಹುಲ್ ಎರಡು ಕ್ಷೇತ್ರಗಳ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡಿರುವ ಪ್ರಧಾನಿ ಮೋದಿ, “ರಾಹುಲ್ ಗಾಂಧಿ ಹೆದರಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಓಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬರ್ಧಮಾನ್-ದುರ್ಗಾಪುರ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ, “ವಯನಾಡಿನಲ್ಲಿ ಶೆಹಜಾದಾ ಸೋಲುತ್ತಾರೆಂದು ನಾನು ಹೇಳಿದ್ದೆ. ಈಗ ಅವರು ಸೀಟು ಕೈ ತಪ್ಪುವ ಭೀತಿಯಲ್ಲಿ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಪಕ್ಷದ ನಾಯಕರು ಅವರು ಅಮೇಥಿಗೆ ಬರುತ್ತಾರೆ ಎಂದು ಹೇಳುತ್ತಿದ್ದರು. ಆದರೆ, ಅವರು ತುಂಬಾ ಹೆದರಿ ರಾಯ್ ಬರೇಲಿಯಲ್ಲಿ ತಮ್ಮ ದಾರಿ ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಇಂಥವರು ಜನರಿಗೆ ‘ಡರೋ ಮತ್ (ಹೆದರಬೇಡಿ)’ ಎಂದು ಹೇಳುತ್ತಾರೆ. ಇಂದು ನಾನು ನನ್ನ ಹೃದಯದಿಂದ ಅವರಿಗೆ ಹೇಳುತ್ತೇನೆ, ‘ಅರೇ ಡರೋ ಮತ್, ಭಾಗೋ ಮತ್’ (ಭಯಪಡಬೇಡ ಮತ್ತು ಓಡಿಹೋಗಬೇಡ)” ಎಂದಿದ್ದಾರೆ.
ಇದೇ ವೇಳೆ, ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, “ಪಶ್ಚಿಮ ಬಂಗಾಳದಲ್ಲಿ ಹಿಂದುಗಳನ್ನು ‘ಎರಡನೇ ದರ್ಜೆಯ ಪ್ರಜೆ’ಗಳಾಗಿ ಮಾಡಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ನಡೆಸಿರುವುದು ಟಿಎಂಸಿಗೆ ಸಮಸ್ಯೆಯಾಗಿದೆ. ಸಂದೇಶಖಾಲಿಯಲ್ಲಿ, ನಮ್ಮ ದಲಿತ ಸಹೋದರಿಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಆದರೆ, ಆರೋಪಿಗಳನ್ನು ರಕ್ಷಿಲು ಟಿಎಂಸಿ ಯತ್ನಿಸಿತು. ಆರೋಪಿಯ ಹೆಸರು ಷಹಜಹಾನ್ ಶೇಖ್ ಎಂಬುದೇ ಆತನ ರಕ್ಷಣೆಗೆ ಕಾರಣವೇ” ಎಂದಿದ್ದಾರೆ.