ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿ ಮೆರವಣಿಗೆ ಮಾಡಿದ ಅಮಾನುಷ ಪ್ರಕರಣದ ನೆನಪು ಮಾಸುವ ಮುನ್ನವೇ ಮತ್ತೊಂದು ಅದೇ ರೀತಿಯದ್ದೇ ಪ್ರಕರಣ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಇದರಲ್ಲಿ ಮಹಿಳೆಯನ್ನು ವಿವಸ್ತ್ರ ಮಾಡಿಲ್ಲದಿದ್ದರೂ, ಆಕೆಯ ಯಾವುದೇ ತಪ್ಪಿಲ್ಲದೆ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.
ಹಾವೇರಿ ಜಿಲ್ಲೆಯ ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಅರಮಲ್ಲಾಪುರ ಗ್ರಾಮದಲ್ಲಿ ಈ ಬರ್ಬರ ಘಟನೆ ನಡೆದಿದೆ. ಹನಮವ್ವ ದುರಗಪ್ಪ ಮೆಡ್ಲೆರಿ (50) ಹಲ್ಲೆಗೊಳಗಾದ ಮಹಿಳೆ. ಈಕೆಯ ಮಗ ಅದೇ ಗ್ರಾಮದ ಯುವತಿಯೊಬ್ಬಳ ಜೊತೆಗೆ ಪರಾರಿಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೆಲ ಗ್ರಾಮಸ್ಥರು ಮಹಿಳೆಯ ಮೇಲೆ ಹಲ್ಲೆ ನಡೆಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸುತ್ತಿರುವ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದೆ.
#Haveri police has arrested 6 people for tying a woman to an electric pole and assaulting her. Hanumavva (50)’s son ran away with a woman of another #caste. The girl’s family- tied the boy’s mother and assaulted her- when the couple didn’t return. #Karnataka pic.twitter.com/OwajOWCZHf
— Imran Khan (@KeypadGuerilla) May 3, 2024
ಯುವಕನ ಮಗ ಯುವತಿಯೊಬ್ಬಳನ್ನು ಅಪಹರಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಯುವತಿ ಕಡೆಯವರು ಥಳಿಸಿದ್ದಾರೆ. ಅದೇ ಗ್ರಾಮದ ಚಂದ್ರಪ್ಪ, ಗಂಗಪ್ಪ, ಗುತ್ತೆವ್ವ ಹಲ್ಲೆ ಮಾಡಿದ ಆರೋಪಿಗಳು. ಈಕೆಯ ಮಗ ಮಂಜುನಾಥ ಯುವತಿಯನ್ನು ಕರೆದುಕೊಂಡು ಹೋಗಿರುವ ಆರೋಪವಿದೆ. ಆತ ಯುವತಿಯನ್ನು ಬಲವಂತವಾಗಿ ಅಪಹರಿಸಿದ್ದಲ್ಲದೆ ಆಭರಣಗಳನ್ನೂ ದೋಚಿದ್ದಾನೆ ಎಂದು ಇವರು ದೂರಿದ್ದಾರೆ.
ಇದನ್ನು ಓದಿದ್ದೀರಾ? ಲೈಂಗಿಕ ದೌರ್ಜನ್ಯ ಪ್ರಕರಣ | ಪ್ರಜ್ವಲ್ ಯಾವುದೇ ದೇಶದಲ್ಲಿದ್ದರೂ ಹಿಡಿದು ತರುತ್ತೇವೆ: ಸಿಎಂ ಸಿದ್ದರಾಮಯ್ಯ
ಆರೋಪಿಗಳು ಮಹಿಳೆಯ ಮನೆಗೆ ನುಗ್ಗಿ, “ನಿನ್ನ ಮಗ ಎಲ್ಲಿದ್ದಾನೆ ಹೇಳು” ಎಂದು ಪೀಡಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಹನಮವ್ವಳಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಸಂಬಂಧ ಈವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
