“ರಾಜ್ಯ ಸರ್ಕಾರವು ಎಚ್.ಡಿ.ರೇವಣ್ಣನವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ” ಎಂದು ಎಸ್.ಬಾಲನ್ ಆರೋಪಿಸಿದರು
ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದ 3976 ವಿಡಿಯೊ ಕ್ಲಿಪ್‌ಗಳಿವೆ ಎಂದು ಹೇಳಲಾಗುತ್ತಿದೆ. ಮುನ್ನೂರಕ್ಕೂ ಹೆಚ್ಚು ಮಹಿಳೆಯರು ಸಂತ್ರಸ್ತರೆಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಪ್ರತ್ಯೇಕವಾಗಿ ಮುನ್ನೂರು ಪ್ರಕರಣಗಳನ್ನು ಪ್ರಜ್ವಲ್ ವಿರುದ್ಧ ದಾಖಲಿಸಬೇಕು ಎಂದು ಹೈಕೋರ್ಟ್ ವಕೀಲರಾದ ಎಸ್.ಬಾಲನ್ ಆಗ್ರಹಿಸಿದರು.
ಒಂದು ದಿನಕ್ಕೆ ಒಂದು ಕ್ಲಿಪ್ ಎಂದರೆ ಒಂಬತ್ತು ವರ್ಷಗಳ ಕಾಲ ಈ ಕೃತ್ಯ ನಡೆದಿವೆ. ಯಾವ ಹೋಟೆಲ್‌ನಲ್ಲಿ, ಯಾವ ಮನೆಯಲ್ಲಿ, ಯಾವ ರೆಸಾರ್ಟ್‌ನಲ್ಲಿ ಈ ವಿಡಿಯೊಗಳಾಗಿವೆ ಎಂಬುದನ್ನು ತನಿಖೆ ಮಾಡಬೇಕು. ಒಂದೊಂದು ವಿಡಿಯೊ ಮೇಲೂ ಒಂದೊಂದು ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಹುಲ್ ಗಾಂಧಿಯವರು ಮಾತನಾಡುತ್ತಾ, ನಾಲ್ಕು ನೂರು ಮಹಿಳೆಯರು ನೊಂದಿರುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳ ಪ್ರಕಾರ ಮುನ್ನೂರು ನೊಂದ ಮಹಿಳೆಯರಿದ್ದಾರೆ. ಅಂದರೆ ಮುನ್ನೂರು ಮೊಕದ್ದಮೆ ದಾಖಲಾಗಬೇಕಿದೆ. ಬೆಂಗಳೂರಿನಲ್ಲಿ ಘಟನೆ ಆಗಿದ್ದರೆ ಬೆಂಗಳೂರಿನಲ್ಲಿ ಎಫ್‌ಐಆರ್ ಆಗಬೇಕು; ಹಾಸನ, ಹೊಳೆ ನರಸೀಪುರದಲ್ಲಿ ಘಟನೆಗಳಾಗಿದ್ದರೆ, ಅಲ್ಲಿಯೇ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕು ಎಂದರು.
ಪ್ರಕರಣ ದಾಖಲಾದಾಗ ಬಿಗಿಯಾದ ಸೆಕ್ಷನ್‌ಗಳನ್ನು ಸೇರಿಸಿರಲಿಲ್ಲ. ಈಗ ಸೆಕ್ಷನ್ 376 ಹಾಕಿದ್ದಾರೆಂದು ಗೊತ್ತಾಯಿತು. ಅಂದರೆ ಇದು ರೇಪ್ ಕೇಸ್. ಒಂದಲ್ಲ, ಮುನ್ನೂರು ಕೇಸ್ ಆಗಬೇಕು. ಡಿಎನ್‌ಎಗೆ ಸಂಬಂಧಿಸಿದ ಸಂಗತಿಗಳನ್ನು ಕಲೆಹಾಕಬೇಕಿದೆ. ಬೆವರು, ಮೂತ್ರ, ರಕ್ತ, ದೇಹದ ಯಾವುದೇ ಭಾಗದ ಸಾಕ್ಷಿಗಳನ್ನು ಸಂತ್ರಸ್ತರಿಂದಲೂ ಆರೋಪಿಯಿಂದಲೂ ಕಲೆಕ್ಟ್ ಮಾಡಬೇಕು. ಡಿಜಿಟಲ್ ಎವಿಡೆನ್ಸ್ ಸಂಗ್ರಹಿಸಬೇಕು ಎಂದು ವಿವರಿಸಿದರು.
ಹಾಸನದಲ್ಲಿ ಪ್ರತ್ಯೇಕ ರಾಜ್ಯಾಂಗ: ಬಾಲನ್
ಹೊಳೆನರಸೀಪುರ, ಹಾಸನದಲ್ಲಿ ಪ್ರತ್ಯೇಕವಾಗಿ ರಾಜ್ಯಾಂಗವಿದೆ. ಅಲ್ಲಿ ಅವರೇ ರಾಜರು, ಮಹಾಪ್ರಭುಗಳು. ಆ ಭಾಗದಲ್ಲಿ ಪೊಲೀಸ್ ಇಲಾಖೆಯೂ ಅವರದ್ದೇ, ಜಿಲ್ಲಾಧಿಕಾರಿಯೂ ಅವರಿಗೆ ಬೇಕಾದವರೇ, ಅರಣ್ಯ ಇಲಾಖೆಯೂ ಅವರದ್ದೇ, ಜಮೀನುಗಳೂ ಅವರದ್ದೇ, ಊರಿನ ಹೆಣ್ಣುಮಕ್ಕಳೆಲ್ಲ ಅವರಿಗೆಯೇ ಸೇರಿದವರು. ಈ ರೀತಿ ಮಹಾಪ್ರಭು ಆಗಿದ್ದಾರೆ. ಈ ರಾಜ್ಯಾಂಗದಲ್ಲಿ ಮಂತ್ರಿ ಯಾರು? ಕಂತ್ರಿ ಯಾರು? ಎಂಬುದನ್ನೆಲ್ಲ ಪರಿಗಣಿಸಿ ಕೇಸ್ ಹಾಕಬೇಕು” ಎಂದು ಎಸ್.ಬಾಲನ್ ಹೇಳಿದರು.
ನೊಂದ ಮಹಿಳೆಯರು ಹೆಚ್ಚಿನದಾಗಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಕ್ಕೆ ಸೇರಿರುವ ಸಾಧ್ಯತೆ ಇದೆ. ಹಿಂದುಳಿದ ವರ್ಗಗಳ ಎಷ್ಟು ಮಹಿಳೆಯರಿದ್ದಾರೆ, ಅಲ್ಪಸಂಖ್ಯಾತರು ಎಷ್ಟು ಮಂದಿ ಇದ್ದಾರೆ, ಬಾಲಕಿಯರು ಎಷ್ಟು ಮಂದಿ ಇದ್ದಾರೆಂದು ಲೆಕ್ಕ ಹಾಕಬೇಕು. ಪೋಕ್ಸೋ ಮತ್ತು ಎಸ್‌ಸಿ ಎಸ್‌ಟಿ ಅಟ್ರಾಸಿಟಿ ಆಕ್ಟ್ ವ್ಯಾಪ್ತಿಯಲ್ಲೂ ಪ್ರಕರಣವನ್ನು ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಎಚ್.ಡಿ.ರೇವಣ್ಣನಿಗೆ ಸರ್ಕಾರದಿಂದ ರಕ್ಷಣೆ
ಅತ್ಯಾಚಾರ ಪ್ರಕರಣದ ಆರೋಪಿ ಎಚ್.ಡಿ.ರೇವಣ್ಣನವರನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ರಕ್ಷಣೆ ಮಾಡುತ್ತಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಎಸ್.ಬಾಲನ್ ಆರೋಪಿದರು.
ಜಾಮೀನು ರಹಿತ ಆರೋಪಗಳು ಅವರ ಮೇಲಿಲ್ಲ, ಅಂತಹ ಸೆಕ್ಷನ್‌ಗಳನ್ನು ಹಾಕುವುದಿಲ್ಲ ಎಂದು ರಾಜ್ಯ ಸರ್ಕಾರದ ವಕೀಲರು ರೇವಣ್ಣನವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎಂದು ದೂರಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ಮೂರು ತಿಂಗಳ ಹಿಂದೆಯೇ ಹೊರಗೆ ಬಂದಿತ್ತು. ವಕೀಲರ ಕೈಗೆ ವಿಡಿಯೊಗಳು ಹೋಗಿದ್ದವು. ಅವರು ತಕ್ಷಣ ಪೊಲೀಸರಿಗೆ ವರದಿ ಕೊಡಬೇಕಿತ್ತು. ಮೊಕದ್ದಮೆ ಹೂಡಬೇಕಿತ್ತು. ಆದರೆ ಮೂರು ತಿಂಗಳು ತಡವಾಗಿದ್ದು ಏಕೆ? ಎಂದು ಪ್ರಶ್ನಿಸಿದರು.
600 ತಡೆಯಾಜ್ಞೆಗಳಿವೆ, ರಾಜಕಾರಣಿಗಳ ಬಣ್ಣ ಬಯಲಾಗಿದೆ: ಬಾಲನ್
“ಪೆನ್‌ಡ್ರೈವ್, ಸಿಡಿ ಇದ್ಯಾವುದನ್ನೂ ಬಿಡುಗಡೆ ಮಾಡಬಾರದೆಂದು ಪ್ರಜ್ವಲ್ ರೇವಣ್ಣನವರು ಕೋರ್ಟ್‌ನಲ್ಲಿ ತಡೆಯಾಜ್ಞೆ ತೆಗೆದುಕೊಂಡಿದ್ದರು. ಇವರೊಬ್ಬರೇ ಅಲ್ಲ. ರಾಜ್ಯದಲ್ಲಿ ಒಟ್ಟು ಆರು ನೂರು ತಡೆಯಾಜ್ಞೆಗಳಿವೆ” ಎಂದು ಬಾಲನ್ ಮಾಹಿತಿ ನೀಡಿದರು.
“ಈಶ್ವರಪ್ಪನ ಮಗ, ಲೇಔಟ್ ಕೃಷ್ಣಪ್ಪನ ಮಗ ಪ್ರಿಯ ಕೃಷ್ಣ ಅವರೂ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ಈ ರೀತಿಯ ಆರು ನೂರು ಆರ್ಡರ್‌ಗಳಿವೆ. ತಡೆಯಾಜ್ಞೆ ತೆಗೆದುಕೊಂಡಿರುವ ಎಲ್ಲರೂ ಎಂ.ಎಲ್.ಎ, ಎಂ.ಪಿ., ಮಂತ್ರಿಗಳು. ನ್ಯಾಯಾಲಯಗಳೂ ಸುಲಭವಾಗಿ ತಡೆಯಾಜ್ಞೆ ಕೊಡುತ್ತವೆ. ಇವರು ಏನಾದರೂ ಮಾಡಿಕೊಳ್ಳಬಹುದು, ಆದರೆ ಅದು ಮಾಧ್ಯಮಗಳಲ್ಲಿ ಬರಬಾರದು ಅಷ್ಟೇ. ಅಂದಹಾಗೆ ಆರು ನೂರು ಪೆನ್‌ಡ್ರೈವ್, ಸಿಡಿಗಳು ಇವೆ ಎಂಬ ಅನುಮಾನಗಳಿವೆ. ಇಲ್ಲವಾದರೆ ಇವರೆಲ್ಲ ಯಾಕೆ ತಡೆಯಾಜ್ಞೆ ತೆಗೆದುಕೊಳ್ಳುತ್ತಾರೆ. ಎಲ್ಲ ಸ್ಟೇಗಳನ್ನು ಹೈಕೋರ್ಟ್ ರದ್ದು ಮಾಡಬೇಕು. ಜನರಿಗೆ ಮಾಹಿತಿ ತಿಳಿಯಬೇಕು” ಎಂದರು.
ನಟ ಚೇತನ್ ಅಹಿಂಸಾ, ಹೋರಾಟಗಾರರಾದ ಎ.ಹರಿರಾಮ್, ಬಿ.ಆರ್.ಭಾಸ್ಕರ ಪ್ರಸಾದ್, ರಾಜಣ್ಣ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದಾರು.
