ಅತ್ಯಾಚಾರದ ಆರೋಪಿಗಳಾದ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ʼನಾವೆದ್ದು ನಿಲ್ಲದಿದ್ದರೆ, ಕರ್ನಾಟಕʼ ಸಂಘಟನೆಯಡಿ ಹಲವು ಪ್ರಗತಿಪರ ಚಿಂತಕರು, ಹೋರಾಟಗಾರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ವಿಡಿಯೊ ಮಾಡಿದ್ದು ಅಕ್ಷಮ್ಯ. ಅಷ್ಟೇ ಅಲ್ಲ ಅಂತಹ ಅಶ್ಲೀಲ ವಿಡಿಯೊ, ಚಿತ್ರಗಳು ಬಹಿರಂಗಗೊಂಡು ಮಹಿಳೆಯರ ಘನತೆಗೆ ಧಕ್ಕೆಯಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
“ಹೊಳೆನರಸೀಪುರದ ದೂರಿಗೆ ಸಂಬಂಧಿಸಿದಂತೆ ಎ 1 ಆರೋಪಿ ಎಚ್ ಡಿ ರೇವಣ್ಣ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿ ವಾಪಸ್ ತೆಗೆದುಕೊಳ್ಳಲು ಕಾರಣವಾಗಿದ್ದು ಆತನನ್ನು ಬಂಧಿಸುವುದಿಲ್ಲ ಎಂದು ಕೋರ್ಟ್‌ಗೆ ಸರ್ಕಾರ ತಿಳಿಸಿದ್ದು. ಇದು ಅಕ್ಷಮ್ಯ, ಗಂಭೀರವಲ್ಲದ ಕಲಂನಡಿ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಸರ್ಕಾರ ರಕ್ಷಿಸುತ್ತಿದೆ” ಎಂದು ಎಂದು ಹೋರಾಟಗಾರ್ತಿ ಕೆ ಎಸ್ ವಿಮಲಾ ಆರೋಪಿಸಿದರು.
ಈ ದಿನ.ಕಾಮ್ ಜೊತೆ ಮಾತನಾಡಿದ ಹಿರಿಯ ಪತ್ರಕರ್ತೆ ಎಸ್ ಸತ್ಯಾ, ಎಚ್ ಡಿ ದೇವೇಗೌಡರ ಕುಟುಂಬದ ಫ್ಯೂಡಲ್ ಮನಸ್ಥಿತಿಯೇ, ರೇವಣ್ಣ ಮತ್ತು ಪ್ರಜ್ವಲ್ ಈ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲು ಕಾರಣ. ಪ್ರಜ್ವಲ್ ಸಂಸದ, ತಂದೆ ಶಾಸಕ, ಸಹೋದರ ಎಂಎಲ್‌ಸಿ, ತಾತ ಮಾಜಿ ಪ್ರಧಾನಿ, ಚಿಕ್ಕಪ್ಪ ಶಾಸಜ, ಮಾಜಿ ಮುಖ್ಯಮಂತ್ರಿ. ಇಷ್ಟೆಲ್ಲ ಅಧಿಕಾರ ತಮ್ಮ ಬಳಿ ಇರುವ ಕಾರಣ ಏನೇ ಮಾಡಿದರು ನಡೆಯುತ್ತದೆ ಎಂಬ ದರ್ಪ ಎದ್ದು ಕಾಣುತ್ತದೆ ಎಂದರು. ಈ ಪ್ರಕರಣದಲ್ಲಿ ಹಲವು ಮಹಿಳೆಯರ ವಿಡಿಯೋಗಳು ಸಾರ್ವಜನಿಕರಿಗೆ ಸಿಕ್ಕಿರುವುದು ಗಂಭೀರ ಲೋಪ. ಹದಿಹರೆಯದ ಯುವಕರು ಈ ವಿಡಿಯೊಗಳನ್ನು ನೋಡಿ ತಾವೂ ತಪ್ಪು ಹಾದಿಗೆ ಇಳಿಯುವ ಅಪಾಯವಿದೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಮಾತನಾಡಿ, ಮಹಿಳೆಯ ದೇಹ ನಿಮ್ಮ ರಾಜಕೀಯದ ರಣರಂಗವಲ್ಲ. ಮಹಿಳೆಯ ಒಪ್ಪಿಗೆ ಇಲ್ಲದೇ ನಡೆಸುವ ಲೈಂಗಿ, ಕ್ರಿಯೆ ಆತ್ಯಾಚಾರಕ್ಕೆ ಸಮ. ಈ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರರಾದ ಅಖಿಲಾ ವಿದ್ಯಾಸಂದ್ರ, ಜ್ಯೋತಿ ಅನಂತ ಸುಬ್ಬರಾವ್, ಸುರೇಂದ್ರ ರಾವ್, ನ್ಯಾಯವಾದಿ ವೆಂಕಟೇಶ್, ಕವಿ ದಾದಾಫಿರ್, ವಕೀಲೆ ಪೂರ್ಣಾ, ವಿಜ್ಞಾನಿ ಪ್ರಜ್ವಲಾ ಸೇರಿದಂತೆ ಹವಲರು ಉಪಸ್ಥಿತರಿದ್ದರು. ಲಿಂಗತ್ವ ಅಲ್ಪಸಂಖ್ಯಾತರು, ಹಲವು ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಅತ್ಯಾಚಾರಿಗಳನ್ನು ಬಂಧಿಸಿ ಎಂಬ ಘೋಷಣೆ ಕೂಗಲಾಯಿತು.
