ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾದ ನಂತರ ದೇಶದಲ್ಲಿ ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆಯಾಗಿದೆ ಎಂಬ ಮಾತುಗಳು ಹರಿಯಬಿಡಲಾಗುತ್ತದೆ. ಆದರೆ ವಾಸ್ತವ ಬೇರೆಯೇ ಇದೆ.
ದೇಶದಲ್ಲಿ ನಡೆದಿದ್ದ 2ಜಿ ಹಗರಣ, ಕಾಮನ್ವೆಲ್ತ್ ಹಗರಣದ ದೆಸೆಯಿಂದ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದೆಯೇ? ಈ ದೇಶದಲ್ಲಿ ಈಗ ಭ್ರಷ್ಟಾಚಾರ ಇಲ್ಲವೇ? ಎಂಬ ಪ್ರಶ್ನೆಗಳನ್ನು ನಮ್ಮ ಉತ್ತರ ಕರ್ನಾಟಕದ ಮಂದಿಯಲ್ಲಿ ಕೇಳಿದರೆ, ‘ಬಿಜೆಪಿ ಬಂದ ಬಳಿಕವೂ ಭ್ರಷ್ಟಾಚಾರ ಏನೂ ಕಡಿಮೆಯಾಗಿಲ್ಲ’ ಎನ್ನುತ್ತಿದ್ದಾರೆ.
ಇತ್ತೀಚೆಗೆ ಈ ದಿನ.ಕಾಮ್ ನಡೆಸಿದ ಉತ್ತರ ಕರ್ನಾಟಕ 14 ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.37ರಷ್ಟು ಮಂದಿ ಹತ್ತು ವರ್ಷಗಳ ಕಾಲ ಮೋದಿ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಮೋದಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಕಡಿಮೆಯಾಗಲಿದೆ ಎಂದು ಭಾವಿಸಿ ಇವರೆಲ್ಲರೂ ಮತ ಹಾಕಿದ್ದರು. ಆದರೆ, ಈ ದಿನ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದ ಅಂಶ ಏನೆಂದರೆ, ಮೋದಿ ಹಾಗೂ ಬಿಜೆಪಿ ಮತದಾರರಿಗೆ ಈ ನಿರಾಸೆ ಮೂಡಿಸಿದೆ.
ಭ್ರಷ್ಟಾಚಾರದ ವಿಚಾರದ ಬಗ್ಗೆ ನರೇಂದ್ರ ಮೋದಿಯವರು, “ನಾ ಖಾವೂಂಗ, ನಾ ಖಾನೇ ದೂಂಗಾ”(ನಾನು ತಿನ್ನಲ್ಲ, ಬೇರೆಯವರನ್ನು ತಿನ್ನಲು ಬಿಡಲ್ಲ) ಎಂಬ ತನ್ನ ಜನಪ್ರಿಯ ಘೋಷವಾಕ್ಯವೊಂದನ್ನು ತಮ್ಮ ಎಲ್ಲ ಭಾಷಣಗಳಲ್ಲಿ ಹೇಳುತ್ತಲೇ ಬಂದಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಹಾಗೂ ನರೇಂದ್ರ ಮೋದಿ ನಡೆದುಕೊಂಡು ಬಂದಿದ್ದಾರೆ.
ಅದಕ್ಕೆ ತಾಜಾ ಉದಾಹರಣೆ ಎಂದರೆ, ಇತ್ತೀಚೆಗೆ ಭ್ರಷ್ಟಾಚಾರ ವಿಚಾರದ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯು ಒಂದು ಸಂಶೋಧನಾ ವರದಿ ಪ್ರಕಟಿಸಿತ್ತು. ಇದರ ಪ್ರಕಾರ, 2014ರಿಂದೀಚೆಗೆ ಭ್ರಷ್ಟಾಚಾರದ ಆರೋಪದಲ್ಲಿ ಕೇಂದ್ರೀಯ ಸಂಸ್ಥೆಗಳಿಂದ ಕ್ರಮ ಎದುರಿಸುತ್ತಿದ್ದ ಸುಮಾರು 25 ಪ್ರಮುಖ ರಾಜಕಾರಣಿಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅದರಲ್ಲಿ 10 ಮಂದಿ ಕಾಂಗ್ರೆಸ್ ಪಕ್ಷದಿಂದ, ತಲಾ ನಾಲ್ವರು ಎನ್ಸಿಪಿ ಮತ್ತು ಶಿವಸೇನೆಯಿಂದ ಮತ್ತು ಮೂವರು ಟಿಎಂಸಿಯಿಂದ, ಇಬ್ಬರು ಟಿಡಿಪಿಯಿಂದ, ಎಸ್ಪಿ ಮತ್ತು ವೈಎಸ್ಆರ್ಸಿಪಿಯಿಂದ ತಲಾ ಒಬ್ಬರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎನ್ನುವುದನ್ನು ತಿಳಿಸಿತ್ತು. ಈ ಪಟ್ಟಿಯಲ್ಲಿರುವ ಆರು ರಾಜಕಾರಣಿಗಳು ಈ ವರ್ಷ ಎಂದರೆ ಸಾರ್ವತ್ರಿಕ ಚುನಾವಣೆಗೆ ಕೆಲವು ವಾರಗಳ ಮೊದಲು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಆ ಮೂಲಕ ‘ಬಿಜೆಪಿ ವಾಷಿಂಗ್ ಮೆಷಿನ್’ ಎಂಬ ಪದ ಬಳಕೆ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗಿತ್ತು.
ಉತ್ತರ ಕರ್ನಾಟಕ ಜನರ ಅಭಿಪ್ರಾಯ ಏನು?
ಸಮೀಕ್ಷೆ ನಡೆಸಿದ ‘ಈ ದಿನ’ ತಂಡ ಉತ್ತರ ಕರ್ನಾಟಕ ಜನರ ಬಳಿ ಹೋಗಿ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಕೇಳಿತ್ತು. ಅದಕ್ಕೆ ಶೇ. 36.93 ರಷ್ಟು ಮತದಾರರು ಬಿಜೆಪಿಯಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂದಿದ್ದಾರೆ. ಇದರಲ್ಲಿ ಕಾಂಗ್ರೆಸ್ನವರು ಪಾತ್ರವಿದೆಯೇ ಎಂದು ಕೇಳಿದ್ದಕ್ಕೆ ಶೇಕಡಾ 21.13ರಷ್ಟು ಮಂದಿ ಹೌದು ಎಂದಿದ್ದಾರೆ. ಇನ್ನು, 1.31 ಶೇಕಡಾದಷ್ಟು ಮಂದಿ ಜೆಡಿಎಸ್ ಕೂಡ ಕಾರಣ ಎಂದರೆ, 12.7 ಶೇಕಡಾದಷ್ಟು ಜನ ‘ಏನೂ ಹೇಳುವುದಕ್ಕೆ ಆಗುವುದಿಲ್ಲ’ ಎಂದಿದ್ದಾರೆ. ಆದರೆ, ಶೇ.10.89ರಷ್ಟು ಜನ ಮಾತ್ರ ಭ್ರಷ್ಟಾಚಾರ ಕಡಿಮೆ ಆಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೇ. 36.93 ರಷ್ಟು ಬಿಜೆಪಿಯೇ ಕಾರಣ ಎಂದಿದ್ದಾರೆ. ಕಾರಣ?
ಸಮೀಕ್ಷೆಯಲ್ಲಿ ಶೇ. 36.93 ರಷ್ಟು ಮಂದಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆ ಬಿಜೆಪಿಯೇ ಕಾರಣ ಎಂದಿದ್ದಾರೆ. ಇದಕ್ಕೆ ಕಾರಣವನ್ನು ಹುಡುಕಲು ಹೋದರೆ, ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯ ದುರಾಡಳಿತವೇ ಕಾರಣ ಎಂಬುದನ್ನು ಅರಿಯಬಹುದು.
ಕೋವಿಡ್ನ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಅಧಿಕಾರದಲ್ಲಿದ್ದರು. ಈ ವೇಳೆ ಆರೋಗ್ಯ ಸಚಿವರಾಗಿದ್ದ ಡಾ. ಸುಧಾಕರ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಅಲ್ಲದೇ, ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಆ ಬಳಿಕ ಬೊಮ್ಮಾಯಿಯವರು ಸಿಎಂ ಆಗಿದ್ದಾಗ ಗುತ್ತಿಗೆದಾರರ ಸಂಘವು ನೇರವಾಗಿ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಹೊರಿಸಿದ್ದರು. ಅಲ್ಲದೇ, 40 ಪರ್ಸೆಂಟ್ ಆರೋಪದ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಾಗಿತ್ತು. ಆದರೆ, ನಾ ಖಾವೂಂಗ, ನಾ ಖಾನೇ ದೂಂಗಾ ಎನ್ನುತ್ತಿದ್ದ ಮೋದಿಯವರು ಎಲ್ಲವೂ ಗೊತ್ತಿದ್ದರೂ, ಗೊತ್ತಿಲ್ಲದಂತೆ ನಡೆದುಕೊಂಡಿದ್ದರು. 40 ಪರ್ಸೆಂಟ್ ಆರೋಪದ ಸುದ್ದಿಯು ದೇಶಾದ್ಯಂತ ಸುದ್ದಿಯಾಗಿತ್ತು. ಅಲ್ಲದೇ, ಕಾಂಗ್ರೆಸ್ ಐಟಿ ಸೆಲ್ ಪೇಸಿಎಂ ಅಭಿಯಾನ ಕೂಡ ನಡೆಸಿತ್ತು. ಈ ಅಭಿಯಾನ ಕೂಡ 2023ರ ವಿಧಾನಸಭೆಯ ಚುನಾವಣೆಯ ಮೇಲೂ ಪರಿಣಾಮ ಬೀರಿತ್ತು. ಇದರಿಂದಾಗಿ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು.
ಇತ್ತೀಚೆಗೆ ಚುನಾವಣಾ ಬಾಂಡ್ ವಿಚಾರ ಕೂಡ ದೇಶದಲ್ಲಿ ಗದ್ದಲ ಎಬ್ಬಿಸಿದ್ದನ್ನು ಉತ್ತರ ಕರ್ನಾಟಕದ ಭಾಗದ ಮಂದಿ ಕೂಡ ಅರಿತುಕೊಂಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಭಾಷಣ ಬಿಗಿಯುತ್ತಿದ್ದ ಮೋದಿಯವರ ಪಕ್ಷವೇ ಖುದ್ದು ಜನರಿಗೆ ತಿಳಿಯದಂತೆ ಕಂಪೆನಿಗಳಿಂದ ಸಾವಿರಾರು ಕೋಟಿ ದುಡ್ಡು ಪಡೆದುಕೊಳ್ಳಲು, ದೊಡ್ಡ ದೊಡ್ಡ ಸರ್ಕಾರಿ ಯೋಜನೆ, ಕಾಮಗಾರಿಗಳನ್ನು ವಸೂಲಿ ದಂಧೆಯಂತೆ ಮಾಡುವ ಮೂಲಕ ವಿಶ್ವದಲ್ಲೇ ಅತ್ಯಂತ ದೊಡ್ಡ ಭ್ರಷ್ಟಾಚಾರ ಎಸಗಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಮತದಾರರು, ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಲು ಬಿಜೆಪಿಯೇ ಕಾರಣ ಎಂದು ಶೇ. 36.93 ರಷ್ಟು ಮಂದಿ ಈ ದಿನ ಸಮೀಕ್ಷೆಯಲ್ಲಿ ಹೌದು ಎಂದಿದ್ದಾರೆ.
