ಜೂನ್ 2 ರಿಂದ ಆರಂಭವಾಗುವ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ತಂಡದಲ್ಲಿ ಚಿಕ್ಕಮಗಳೂರಿನ ಕನ್ನಡಿಗ ನಾಸ್ತುಷ್ ಕೆಂಜಿಗೆ ಸ್ಥಾನ ಪಡೆದಿದ್ದಾರೆ. ಇವರು ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಗೆಳೆಯ, ಲೇಖಕ ಪ್ರದೀಪ್ ಕೆಂಜಿಗೆ ಅವರ ಪುತ್ರರಾಗಿದ್ದಾರೆ.
ಅಲ್‌ರೌಂಡರ್ ಆಗಿರುವ 33 ವರ್ಷದ ನಾಸ್ತುಷ್ ಕೆಂಜಿಗೆ 40 ಏಕದಿನ ಪಂದ್ಯವನ್ನಾಡಿ 38 ವಿಕೆಟ್ ಕಬಳಿಸುವುದರ ಜೊತೆ ಬ್ಯಾಟಿಂಗ್‌ನಲ್ಲಿ 357 ರನ್ ಕೂಡ ಬಾರಿಸಿದ್ದಾರೆ.
ತಮಿಳುನಾಡು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಹಲವು ಕ್ರಿಕೆಟ್ ಕ್ಲಬ್‌ಗಳಲ್ಲಿ ಆಟವಾಡಿದ್ದಾರೆ. ಉದ್ಯಾನ ನಗರಿಯ ಕ್ಲಬ್‌ಗಳಲ್ಲಿ ಆಟವಾಡುವ ಸಂದರ್ಭದಲ್ಲಿ ಟೀಂ ಇಂಡಿಯಾದ ಕ್ರಿಕೆಟಿಗರಾದ ರಾಬಿನ್ ಉತ್ತಪ್ಪ, ಮಾಯಾಂಕ್ ಅಗರ್‌ವಾಲ್ ಹಾಗೂ ಶ್ರೇಯಸ್ ಗೋಪಾಲ್ ಜೊತೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಹಂಚಿಕೊಂಡಿದ್ದಾರೆ.
ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿರುವ ಅವರು ಅಲ್ಲಿನ ಕ್ಲಬ್‌ಗಳಲ್ಲಿ ಕ್ರಿಕೆಟ್ ಆಡುತ್ತಿರುವ ಸಂದರ್ಭದಲ್ಲಿ ಆಯ್ಕೆಗಾರರ ಕಣ್ಣಿಗೆ ಬಿದ್ದು 2017ರಲ್ಲಿ ಅಮೆರಿಕ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಂಡರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ರಾಡಿಯಲ್ಲಿ ಕಳೆದು ಹೋದದ್ದು ಹೆಣ್ಣಿನ ಘನತೆ ಅಷ್ಟೇ ಅಲ್ಲ, ʼಸಾಮಾಜಿಕ ಶೀಲʼ ಬೀದಿಗೆ ಬಿದ್ದಿದೆ
ತಾಯ್ನಾಡು ಚಿಕ್ಕಮಗಳೂರಿಗೆ ಬಂದಾಗಲೆಲ್ಲ ಸ್ಥಳೀಯರ ಜೊತೆ ಕ್ರಿಕೆಟ್ ಆಡುತ್ತಾರೆ. 2021ರ ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಅಮೆರಿಕದ ಪರವಾಗಿ ಸ್ಕಾಟ್‌ಲ್ಯಾಂಡ್, ನಮೀಬಿಯಾ, ಜಿಂಬಾಬ್ವೆ ಸೇರಿದಂತೆ ಹಲವು ತಂಡಗಳ ವಿರುದ್ಧ ಆಡಿದ್ದಾರೆ.
ಪ್ರಸ್ತುತ ಅಮೆರಿಕ ತಂಡದಲ್ಲಿ ಬಹುತೇಕ ಭಾರತೀಯ ಮೂಲದ ಆಟಗಾರರೇ ಇದ್ದಾರೆ. ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿತೀಶ್ ಕುಮಾರ್, ಸೌರಭ್ ನೇತ್ರಾವಲ್ಕರ್ ಭಾರತೀಯ ಮೂಲದ ಆಟಗಾರರಾಗಿದ್ದಾರೆ.
ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ 2015ರ ಪುರುಷರ ವಿಶ್ವಕಪ್ ತಂಡದ ಕೋರಿ ಆ್ಯಂಡರ್ಸನ್ ಸಹ ಅಮೆರಿಕ ತಂಡದಲ್ಲಿ ಸ್ಥಾನ ನೀಡಲಾಗಿದೆ.
