ಹಿಮಾಚಲ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ 9ನೇ ತರಗತಿ ಬಾಲಕಿಗೆ ಶಿಕ್ಷಕನೊಬ್ಬ ಬಲವಂತವಾಗಿ ಅಶ್ಲೀಲ ವಿಡಿಯೋವನ್ನು ತೋರಿಸಿ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶಿಮ್ಲಾದಿಂದ ಸುಮಾರು 20 ಕಿಮೀ ದೂರದ ಜುಂಗಾದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಡ್ರಾಯಿಂಗ್ ಶಿಕ್ಷಕ ವಿರುದ್ಧ ಬಾಲಕಿಯ ತಾಯಿ ಶುಕ್ರವಾರ ಧಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಯು ಮೇ 2 ರಂದು ಹೆಚ್ಚುವರಿ ತರಗತಿಗೆ ಬರುವಂತೆ ವಿದ್ಯಾರ್ಥಿನಿಗೆ ಹೇಳಿದ್ದಾನೆ. ಬಳಿಕ, ತನ್ನ ಫೋನ್‌ನಲ್ಲಿದ್ದ ಹುಡುಗಿಯ ನಗ್ನ ವೀಡಿಯೊವನ್ನು ಬಲವಂತವಾಗಿ ತೋರಿಸಿದ್ದಾನೆ. ಅಲ್ಲದೆ, ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿ ಶಿಕ್ಷಕನ ವಿರುದ್ಧ ಐಪಿಸಿ ಸೆಕ್ಷನ್ 354 ಮತ್ತು 354ಎ ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 10 ಮತ್ತು 12ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ದಾಖಲಿಸಿದ ಬಳಿಕ, ಆರೋಪಿಯನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.