ಪೇಟಿಎಂನ ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ಕಂಪನಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಪೇಟಿಎಂ ಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರಿಗೆ ಕಳುಹಿಸಿದ್ದು, “ವೈಯಕ್ತಿಕ ಕಾರಣಗಳಿಂದಾಗಿ ವೃತ್ತಿಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ” ಎಂದು ತಿಳಿಸಿದ್ದಾರೆ.
ನಾಯಕತ್ವ ಬದಲಾವಣೆಯ ಭಾಗವಾಗಿ, ಫಿನ್ಟೆಕ್ ಸಂಸ್ಥೆ ಪೇಟಿಎಂ ರಾಕೇಶ್ ಸಿಂಗ್ ಅವರನ್ನು ಪೇಟಿಎಂ ಮನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿರುವುದಾಗಿ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
ಪೇಟಿಎಂ ಮನಿ ಮುಖ್ಯಸ್ಥರಾಗಿದ್ದ ವರುಣ್ ಶ್ರೀಧರ್ ಅವರನ್ನು ಮ್ಯೂಚುವಲ್ ಫಂಡ್ ಮತ್ತು ಇತರ ಸಂಪತ್ತು ನಿರ್ವಹಣಾ ಉತ್ಪನ್ನಗಳ ವಿತರಣೆಯಲ್ಲಿ ವ್ಯವಹರಿಸುವ ಪೇಟಿಎಂ ಸರ್ವೀಸಸ್ ನ ಸಿಇಒ ಆಗಿ ವರ್ಗಾಯಿಸಲಾಗಿದೆ.
🚨 BREAKING: #Paytm COO and President Bhavesh Gupta has resigned pic.twitter.com/WwRV3IVuDR
— Chandra R. Srikanth (@chandrarsrikant) May 4, 2024
“ಪಾವತಿ ಮತ್ತು ಸಾಲ ನೀಡುವ ವ್ಯವಹಾರಗಳ ಮೇಲ್ವಿಚಾರಣೆ ನಡೆಸುತ್ತಿದ್ದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ವೈಯಕ್ತಿಕ ಕಾರಣಗಳಿಂದಾಗಿ ವೃತ್ತಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಅವರು ಸಲಹಾ ಪಾತ್ರಕ್ಕೆ ಪರಿವರ್ತನೆಗೊಳ್ಳಲಿದ್ದು ವರ್ಷದ ಅಂತ್ಯದವರೆಗೆ ಪೇಟಿಎಂನ ಬೆಳವಣಿಗೆಯ ಉಪಕ್ರಮಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ” ಎಂದು ಪೇಟಿಎಂ ಹೇಳಿಕೆಯಲ್ಲಿ ತಿಳಿಸಿದೆ.
ಪೇಟಿಎಂ ಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಭವೇಶ್ ಅವರ ಕೊಡುಗೆಗಳಿಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಪಾವತಿಗಳು ಮತ್ತು ಸಾಲ ನೀಡುವಿಕೆಯ ಮೇಲೆ ನಮ್ಮ ಗಮನವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮತ್ತು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ನಮ್ಮ ಪ್ರತಿಯೊಂದು ವ್ಯವಹಾರಗಳಲ್ಲಿ ನಾವು ಹೊಂದಿರುವ ಅನುಭವಿ ನಾಯಕರೊಂದಿಗೆ ನಾನು ಕೆಲಸ ಮುಂದುವರಿಸಲಿದ್ದೇನೆ” ಎಂದಿದ್ದಾರೆ.
