ಸುಳ್ಳು ಹೇಳುವುದು, ಸುಳ್ಳು ದಾಖಲೆ ನೀಡಿ ಸರ್ಕಾರಕ್ಕೆ ವಂಚಿಸಿ ಕೋಟಿ ಕೋಟಿ ಲೂಟಿ ಮಾಡುವುದೇ ಭಗವಂತ ಖೂಬಾ ಮತ್ತು ಸೋದರರ ಕಾಯಕವಾಗಿದ್ದು, ಇಡೀ ಖೂಬಾ ಕುಟುಂಬ ರಾಜ್ಯದಲ್ಲಿ ಹಗಲು ದರೋಡೆ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಆರೋಪಿಸಿದ್ದಾರೆ.
ಶನಿವಾರ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಕೇಂದ್ರ ಸಚಿವ ಭಗವಂತ ಖೂಬಾ 2 ಎಕರೆ ಯಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು, 8 ಎಕರೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ್ದು, ಕಲಬುರಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 25 ಕೋಟಿ ರೂ.ದಂಡ ವಿಧಿಸಿ ನೋಟಿಸ್ ನೀಡಿರುವ ಬೆನ್ನಲ್ಲೇ ಈಗ ಭಗವಂತ ಖೂಬಾ ಅವರ ಸೋದರ ಸಂಬಂಧಿ ಜಗದೀಶ್ ಖೂಬಾ ಕರ್ಮಕಾಂಡ ಬಯಲಾಗಿದೆ” ಎಂದು ತಿಳಿಸಿದ್ದಾರೆ.
“ಬೀದರ್ ಜೆಪಿ ನಗರ ನಿವಾಸಿಯಾಗಿರುವ ಭಗವಂತ ಖೂಬಾ ಸೋದರ ಸಂಬಂಧಿ ಜಗದೀಶ್ ಖೂಬಾ ತಮ್ಮ ಬಳಿ ನಿಗದಿತ ಅರ್ಹತೆ ಇಲ್ಲದಿದ್ದರೂ, ಸುಳ್ಳು ದಾಖಲೆ ನೀಡಿ ಪ್ರಥಮ ದರ್ಜೆ ಗುತ್ತಿಗೆದಾರರು ಎಂದು ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಪಡೆದಿದ್ದಾರೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಮುಖ್ಯ ಎಂಜಿನಿಯರ್ ಅವರು, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ ಇವರಿಗೆ ಪತ್ರ ಬರೆದಿದ್ದಾರೆ. ಇದರಿಂದ ಇವರ ಇಡೀ ಕುಟುಂಬ ಸುಳ್ಳು ದಾಖಲೆ ನೀಡಿ ಸರ್ಕಾರಕ್ಕೆ ವಂಚನೆ ಮಾಡುವುದು ಸಾಬೀತಾಗಿದೆ” ಎಂದು ಗಂಭೀರವಾಗಿ ಆರೋಪಿಸಿದರು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ 4 ಅಡಿ ಪ್ಯಾಕೇಜ್ 371 ಬೀದರ್ ಜಿಲ್ಲೆ, ಔರಾದ್ ತಾಲೂಕಿನ ಮಹಾರಾಷ್ಟ್ರ ಬಾರ್ಡರ್ -ಮುರ್ಕಿ-ಹಂದರ್ಕಿ ರಾಜ್ಯ ಹೆದ್ದಾರಿ 122 ಕಿ.ಮೀ 0.00ರಿಂದ ಕಿ.ಮೀ.18.00 ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿ ಪಡೆಯಲು ತಮ್ಮ ಬಳಿ ನಿಗದಿತ ಪ್ರಮಾಣದ ವಾಹನ ಮತ್ತು ಉಪಕರಣ ಇಲ್ಲದಿದ್ದರೂ ನಕಲಿ ದಾಖಲೆ ಕೊಟ್ಟು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ತಮ್ಮ ಬಳಿ ವಾಹನಗಳು ಇಲ್ಲದಿದ್ದರೂ ಕೊಟ್ಟಿ ದಾಖಲೆ ಸೃಷ್ಟಿಸಿ ಮೋಸ ಮಾಡಿ ಟೆಂಡರ್ ಪಡೆದಿದ್ದು, ಇದು ವಂಚನೆ ಪ್ರಕರಣವಾಗಿದೆ. ಇಲಾಖೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿ, ಸುಳ್ಳು ದಾಖಲೆ ಸೃಷ್ಟಿಸಿ, ಸರ್ಕಾರಕ್ಕೆ ವಂಚನೆ ಮಾಡಿರುವ ಜಗದೀಶ್ ಖೂಬಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುವುದಿಲ್ಲ : ಮಲ್ಲಿಕಾರ್ಜುನ ಖರ್ಗೆ
“ಭಗವಂತ ಖೂಬಾ ಮತ್ತೊಬ್ಬ ಸೋದರನಿಗೆ ಬ್ರಿಮ್ಸ್ ಆಸ್ಪತ್ರೆಯ ಹೊರಗುತ್ತಿಗೆ ನೌಕರರನ್ನು ಒದಗಿಸುವ ಗುತ್ತಿಗೆ ಕೊಡಿಸಿದ್ದು, ಬಡವರಿಗೆ, ದಲಿತರಿಗೆ ಕನಿಷ್ಠ ವೇತನ ನೀಡದೆ, ವಂಚಿತರ, ಶೋಷಿತರ ಸಂಬಳವನ್ನು ಗುಳಂ ಮಾಡಿರುವ ಖೂಬಾ ಕುಟುಂಬ ರಾಜ್ಯದ ಎಲ್ಲೆಡೆ ಇಂತಹ ದ್ರೋಹ, ವಂಚನೆ ಮಾಡುತ್ತಿದೆ. ಖೂಬಾ ಮತ್ತು ಸೋದರರ ಎಲ್ಲ ಗುತ್ತಿಗೆ, ಸರ್ಕಾರಿ ಕಾಮಗಾರಿಯ ಕುರಿತಂತೆ ಸಮಗ್ರ ತನಿಖೆ ಮಾಡಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.