ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಸಂಬಂಧ ಹಲವು ಗಂಭೀರ ಆರೋಪಗಳಿದ್ದರೂ, ಅವರ ಕಿರಿಯ ಪುತ್ರ ಕರಣ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಉತ್ತರ ಪ್ರದೇಶದ ಕೈಸರ್ ಗಂಜ್ ಲೋಕಸಭಾ ಕ್ಷೇತ್ರದಲ್ಲಿ ಕರಣ್ ಸಿಂಗ್ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ ನಿರ್ಧಾರವನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ. “ಬ್ರಿಜ್ ಭೂಷಣ್ ದೋಷಿ ಅಲ್ಲ, ಮಗನಿಗೆ ಟಿಕೆಟ್ ನೀಡಿದ್ದು ಪ್ರಶ್ನಾರ್ಹವಲ್ಲ” ಎಂದು ಹೇಳಿದ್ದಾರೆ.
“ತಂದೆ, ತಾಯಿ ಅಥವಾ ಚಿಕ್ಕಪ್ಪನ ಮೇಲೆ ಗಂಭೀರ ಅಪರಾಧದ ಆರೋಪಗಳಿರುವ ಎಷ್ಟು ಜನರು ಟಿಕೆಟ್ ಪಡೆದಿದ್ದಾರೆ. ಅಂತವರಿಗೆ ಎಲ್ಲ ಪಕ್ಷಗಳೂ ಟಿಕೆಟ್ ನೀಡುತ್ತವೆ. ಶಿಕ್ಷೆಗೊಳಗಾದವರ ಮಕ್ಕಳಿಗೂ ಟಿಕೆಟ್ ಸಿಗುತ್ತದೆ. ಇಲ್ಲಿ ಬ್ರಿಜ್ ಭೂಷಣ್ ವಿರುದ್ಧ ಇನ್ನೂ ಯಾವುದೇ ಆರೋಪಗಳುಸಾಬೀತಾಗಿಲ್ಲ. ಹಾಗಿದ್ದಲ್ಲಿ, ಅವರ ಮಗನಿಗೆ ಟಿಕೆಟ್ ನೀಡಿರುವುದನ್ನು ಹೇಗೆ ಪ್ರಶ್ನಿಸಲು ಸಾಧ್ಯ? ಅವರು ತಪ್ಪಿತಸ್ಥ ಎಂದು ನಾವು ಹೇಗೆ ನಿರ್ಧರಿಸಬಹುದು” ಎಂದು ನಿರ್ಮಲಾ ವಾದಿಸಿದ್ದಾರೆ.
ಬ್ರಿಜ್ ಭೂಷಣ್ ಸಿಂಗ್ ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷನಾಗಿ ತಮ್ಮ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ್ದಾರೆ ಎಂದು ವಿನೇಶ್ ಪೋಗಟ್ ಸೇರಿದಂತೆ ಆರು ಮಂದಿ ಕುಸ್ತಿಪಟುಗಳು ಆರೋಪಿಸಿದ್ದರು. ಅಪ್ರಾಪ್ತ ಕುಸ್ತಿಪಟು ಕೂಡ ಸಿಂಗ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಆರೋಪ ಮಾಡಿದ್ದರು. ಅಪ್ರಾಪ್ತ ಕುಸ್ತಿಪಟು ಕುಟುಂಬದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳ ನಡುವೆ, ಪೋಕ್ಸೋ ದೂರನ್ನು ಕುಟುಂಬವು ಹಿಂಪಡೆದಿತ್ತು.
ಅಲ್ಲದೆ, ಪೋಗಟ್ ಹಾಗೂ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರು ಸಿಂಗ್ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಬಂಧನಕ್ಕೆ ಒತ್ತಾಯಿಸಿದ್ದರು. ಅದಾಗ್ಯೂ, ಕೇಂದ್ರ ಸರ್ಕಾರ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬದಲಾಗಿ, ಪ್ರತಿಭಟನಾನಿರಕ ಮಹಿಳಾ ಕುಸ್ತಿಪಟುಗಳ ಮೇಲೆಯೇ ಪೊಲೀಸರು ಮೂಲಕ ದೌರ್ಜನ್ಯ ಎಸಗಿತ್ತು. ಇದೀಗ, ಆತನ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಿದೆ.
ಭಾರತೀಯ ಕುಸ್ತಿಪಟುಗಳು ಮತ್ತು ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರು ಕರಣ್ ಅವರನ್ನು ಕಣಕ್ಕಿಳಿಸುವ ಬಿಜೆಪಿ ನಿರ್ಧಾರವನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ.
ಬ್ರಿಜ್ ಭೂಷಣ್ ಅವರ ಹಿರಿಯ ಮಗ ಪ್ರತೀಕ್ ಭೂಷಣ್ ಸಿಂಗ್ ಉತ್ತರ ಪ್ರದೇಶದಲ್ಲಿ ಶಾಸಕರಾಗಿದ್ದಾರೆ. ಬ್ರಿಜ್ ಭೂಷಷ್ ಮತ್ತೊಬ್ಬ ಪುತ್ರನಿಗೆ ಲೋಕಸಭೆ ಟಿಕೆಟ್ ನೀಡಿದ್ದನ್ನು ಖಂಡಿಸಿ ಬಿಜೆಪಿಯ ಮಿತ್ರ ಪಕ್ಷ ಆರ್‌ಎಲ್‌ಡಿಯ ವಕ್ತಾರ ರೋಹಿತ್ ಜಾಕರ್ ರಾಜೀನಾಮೆ ನೀಡಿದ್ದಾರೆ.
ಬ್ರಿಜ್ ಭೂಷಣ್ ಪ್ರಕರಣದಲ್ಲಿ ಆರೋಪಿಯ ಪರವಾಗಿ ಬಿಜೆಪಿ ನಿಂತಿದೆ. ಮಾತ್ರವಲ್ಲ, ಹಲವಾರು ಪ್ರಕರಣಗಳಲ್ಲಿ ಅತ್ಯಾಚಾರ ಆರೋಪಿಳ ಪರವಾಗಿ ಬಿಜೆಪಿಗರು ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗಷ್ಟೇ, ಕರ್ನಾಟಕದ ಹಾಸನ ಸಂಸದ, ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಕೃತ್ಯಗಳ ಬಗ್ಗೆ ಮೊದಲೇ ತಿಳಿದಿದ್ದರೂ, ಆತನಿಗೆ ಟಿಕೆಟ್ ನೀಡಲು ಬಿಜೆಪಿ ಒಪ್ಪಿಕೊಂಡಿತ್ತು. ಮಾತ್ರವಲ್ಲದೆ, ಆತ ಪರವಾಗಿ ಪ್ರಧಾನಿ ಮೋದಿ ಮತ ಯಾಚಿಸಿದ್ದರು.