ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸಂಸದ ಪ್ರಜ್ವಲ್ ರೇವಣ್ಣಗೆ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಕ್ಷಣೆಯನ್ನು ನೀಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಬೆಳಗಾವಿಯ ಸಂಕಮ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನರೇಂದ್ರ ಮೋದಿ ಮತ್ತು ಬಿಜೆಪಿಯ ನಾಯಕರು ಓರ್ವ ಅತ್ಯಾಚಾರಿಗೆ ರಕ್ಷಣೆ ನೀಡುತ್ತಿದ್ದಾರೆ. ಮೋದಿ ಅವರಿಗೆ ಬಿಜೆಪಿಯ ಮಿತ್ರ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಅತ್ಯಾಚಾರದ ಆರೋಪಿ ಮತ್ತು ದೋಷಿ ಎಂದು ಈ ಹಿಂದೆಯೇ ತಿಳಿದಿತ್ತು” ಎಂದು ಹೇಳಿದ್ದಾರೆ.
ಮೋದಿ ಸರ್ಕಾರಕ್ಕೆ ಹತ್ತು ಪ್ರಶ್ನೆಗಳು
ಹಾಗೆಯೇ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ಸುರ್ಜೇವಾಲ ಅವರು ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಹತ್ತು ಪ್ರಶ್ನೆಗಳಿಗೆ ಮೊದಲು ಪ್ರಧಾನಿ ಮೋದಿ ಉತ್ತರ ನೀಡಲಿ ಎಂದಿದ್ದಾರೆ.
“ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಎಂದು ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಜೆಪಿ ನಾಯಕರು 2023ರ ಡಿಸೆಂಬರ್ 22ರಂದು ಸಾಕ್ಷಿ ಸಮೇತವಾಗಿ ಮಾಹಿತಿ ನೀಡಿದ್ದರು. ಹಾಗಿರುವಾಗ ಬಿಜೆಪಿ ಮತ್ತು ಮೋದಿ ಜೆಡಿಎಸ್ ಜೊತೆ ಮೈತ್ರಿ ಮಾಡಿದ್ದು ಯಾಕೆ” ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.
“ಪ್ರಜ್ವಲ್ ರೇವಣ್ಣ ಅವರನ್ನೇ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯನ್ನಾಗಿಸಿದ್ದು ಯಾಕೆ. ಮೋದಿ ಅವರು ಹಾಸನಕ್ಕೆ ಹೋಗಿ ಪ್ರಜ್ವಲ್ ರೇವಣ್ಣ ಅವರ ಕೈ ಎತ್ತಿ ಪ್ರಜ್ವಲ್ ರೇವಣ್ಣ ಅವರ ಗೆಲುವಿನಿಂದಲೇ ಮೋದಿಗೆ ಶಕ್ತಿ ಸಿಗುತ್ತದೆ ಎಂದು ಹೇಳಿದ್ದು ಯಾಕೆ? ಈ ಅತ್ಯಾಚಾರ ಪ್ರಕರಣದ ಬಗ್ಗೆ ಮೋದಿ, ಬಿಜೆಪಿ, ಜೆಡಿಎಸ್‌ಗೆ ತಿಳಿದಿದ್ದರೂ ಈ ವಿಷಯವನ್ನು ಮುಚ್ಚಿಟ್ಟಿದ್ದು ಯಾಕೆ” ಎಂದು ಕೇಳಿದ್ದಾರೆ.
ಇದನ್ನು ಓದಿದ್ದೀರಾ? ಪ್ರಜ್ವಲ್ ಲೈಂಗಿಕ ಹಗರಣ | ಮಹಿಳೆಯರ ಘನತೆ ಕುಗ್ಗಿಸುತ್ತಿರುವ ಮೀಮ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ದೂರು
“ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಪರಾರಿಯಾಗುವಾಗ ಮೋದಿ ಅವರ ವಿದೇಶಾಂಗ ಸಚಿವಾಲಯಕ್ಕೆ ನೂರಾರು ಮಹಿಳೆಯರ ಅತ್ಯಾಚಾರ ಮಾಡಿದ ಆರೋಪಿ ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ ಎಂದು ತಿಳಿದಿರಲಿಲ್ಲವೇ ಮತ್ತು ಪ್ರಜ್ವಲ್ ದೇಶ ಬಿಟ್ಟು ಹೊರಗೆ ಹೋಗಲು ಮೋದಿ, ಅಮಿತ್ ಶಾ ಅವಕಾಶ ನೀಡಿದ್ದೇಕೆ” ಎಂದು ಪ್ರಶ್ನಿಸಿದರು.
“ಪರಾರಿಯಾದ ಪ್ರಜ್ವಲ್ ರೇವಣ್ಣ ಅವರನ್ನು ವಾಪಸ್ ಕರೆತರುವಂತೆ ಎಸ್‌ಐಟಿ ಕೇಂದ್ರದ ಸಿಬಿಐಗೆ ಪತ್ರ ಬರೆದಿದೆ. ಇದಕ್ಕೆ ಮೋದಿ ಮತ್ತು ಅಮಿತ್ ಶಾ ಅವರು ಉತ್ತರ ಯಾಕೆ ನೀಡಲ್ಲ? ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಈವರೆಗೂ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿಲ್ಲವೇಕೆ” ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣ | ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟರೆ ಸೈಬರ್ ಕ್ರೈಂಗೆ ದೂರು: ಬಾಳುಗೋಪಾಲ್ ಕಡಕ್ ಎಚ್ಚರಿಕೆ
“ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಬೇಕು ಎಂದು ಎಸ್‌ಐಟಿ ತಂಡ ಸಿಬಿಐಗೆ ಪತ್ರ ಬರೆದಿದೆ. ಈವರೆಗೂ ಬ್ಲ್ಯೂ ಕಾರ್ನರ್ ನೋಟಿಸ್ ಯಾಕೆ ಜಾರಿ ಮಾಡಿಲ್ಲ” ಎಂದೂ ಪ್ರಶ್ನಿಸಿದ್ದಾರೆ.
“ಓರ್ವ ವ್ಯಕ್ತಿ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ದೇಶ ಬಿಟ್ಟು ಪರಾರಿಯಾದರೆ ಆ ವ್ಯಕ್ತಿಯನ್ನು ವಾಪಸ್ ಕರೆತರುವ ಜವಾಬ್ದಾರಿ ಯಾರದ್ದು? ರಾಜ್ಯ ಸರ್ಕಾರದ್ದೆ ಅಥವಾ ಕೇಂದ್ರ ಸರ್ಕಾರದ್ದೆ” ಎಂದು ಪ್ರಶ್ನಿಸಿದ ಸುರ್ಜೇವಾಲ, “ಇದು ಕೇಂದ್ರ ಸರ್ಕಾರದ ಜವಾಬ್ದಾರಿ ಆಗಿರುವಾಗ ಮೋದಿಯವರು ಪ್ರಜ್ವಲ್‌ನನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಿದ್ದಾರೆ” ಎಂದು ಕೇಳಿದ್ದಾರೆ.
ಇದನ್ನು ಓದಿದ್ದೀರಾ? ಪ್ರಜ್ವಲ್-ರೇವಣ್ಣ ಲೈಂಗಿಕ ಹಗರಣ | ಶಾಸಕ ಎಚ್ ಡಿ ರೇವಣ್ಣ ಬಂಧನ
“ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರ ವಿರುದ್ಧ ಮೋದಿ ಆರೋಪ ಮಾಡುವ ಬದಲಾಗಿ ಸತ್ಯವನ್ನು ಯಾಕೆ ಹೇಳಲ್ಲ? ಈ ಹತ್ತು ಪ್ರಶ್ನೆಗಳಿಗೆ ಮೊದಲು ಪ್ರಧಾನಿ ಮೋದಿ ಉತ್ತರ ನೀಡಲಿ” ಎಂದಿದ್ದಾರೆ.
“ರಾಹುಲ್ ಗಾಂಧಿ ಅವರು ಸಿಎಂಗೆ ಪತ್ರ ಬರೆದು ಈ ಪ್ರಕರಣದಲ್ಲಿ ಆರೋಪಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಲು, ಸಂತ್ರಸ್ತೆಯರಿಗೆ ರಕ್ಷಣೆ ನೀಡಲು ತಿಳಿಸಿದ್ದಾರೆ. ಈ ಸಂತ್ರಸ್ತೆಯರಿಗೆ ಆರ್ಥಿಕ ಸಹಾಯದ ಭರವಸೆಯನ್ನು ಸಿಎಂ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಮಾತ್ರ ಪ್ರಜ್ವಲ್ ರೇವಣ್ಣ ಎಂಬ ಹೆಸರು ಹೇಳಲು ಕೂಡಾ ಭಯಪಡುವುದೇಕೆ” ಎಂದು ಪ್ರಶ್ನಿಸಿದರು.