ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಆಗಿದ್ದರಿಂದ ಈ ಬಾರಿ ಜೆಡಿಎಸ್ ಮುಕ್ತ ಕರ್ನಾಟಕ ಆಗಲಿದೆ. ದೇಶದ ಹಿತಕ್ಕಾಗಿ ಜನರು ಬದಲಾವಣೆ ಬಯಸಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ ಸೊರಕೆ ಅಭಿಪ್ರಾಯಪಟ್ಟರು.
ವಿಜಯಪುರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಅನ್ಯಾಯ ಧೋರಣೆ ಮಾಡಿದ್ದು, ನಮಗೆ ತೆರಿಗೆಯಲ್ಲಿ ನ್ಯಾಯವಾಗಿ ಸಿಗಬೇಕಾದ ಪಾಲು ಸಿಗಲಿಲ್ಲ. ಬರಗಾಲ ಸಂದರ್ಭದಲ್ಲಿ ಪರಿಹಾರ ಕೊಡದೆ ಇರುವುದು, ದ್ವೇಷ ಹರಡುವುದು ರಾಜಕೀಯ ಲಾಭವನ್ನು ಪಡೆದುಕೊಳ್ಳುವುದು ಬಿಜೆಪಿಯ ಚಾಳಿಯಾಗಿದೆ” ಎಂದು ಟೀಕಿಸಿದರು.
“ನಾವು ಕೊಟ್ಟಿರುವ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿರುವುದು ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ. ಹಾಗಾಗಿ ಕರ್ನಾಟಕ ಭಾರತದಲ್ಲಿಯ ಅತಿ ಶ್ರೇಷ್ಟ 5 ಗ್ಯಾರಂಟಿಗಳನ್ನು ಜಾರಿ ಮಾಡಿ ಪ್ರತಿಯೊಬ್ಬ ಪ್ರಜೆಗೆ ತಲುಪುತ್ತಿರುವುದು ಸಾಧ್ಯವಾಗಿದೆ” ಎಂದರು.
“ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸದೃಢವಾಗಿದೆ. ಕೇಂದ್ರದಲ್ಲಿಯೂ ಮನಮೋಹನ್ ಸಿಂಗ್‌ರವರ ಸರ್ಕಾರ ಮಾಡಿದ ಸಾಧನೆ ನೋಡಿದರೆ ಈಗಿನ ಬಿಜೆಪಿ ಸರ್ಕಾರದ ಸರ್ವಾಧಿಕಾರ ಧೋರಣೆಯಿಂದ ಜನ ಬೇಸತ್ತು ಹೋಗಿದ್ದಾರೆ. ಸುಳ್ಳು ಭರವಸೆಗಳನ್ನು ನೀಡುತ್ತ ಜನರ ಭಾವನೆ ಕೆರಳಿಸಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್‌ನ ಅತಿ ಹೆಚ್ಚು ಸಂಸದರು ಜಯಶಾಲಿಗಳಾಗಲಿದ್ದಾರೆ” ಎಂದು ಹೇಳಿದರು.
“ರೈತರ, ಮಹಿಳೆಯರ, ಯುವಕರ ಹಾಗೂ ಶ್ರಮಿಕರ ಸಮಸ್ಯೆಗಳ ಬಗ್ಗೆ ನಾವು ಕೇಂದ್ರ ಪ್ರಣಾಳಿಕೆಯಲ್ಲಿ ಮಾನ್ಯತೆ ನೀಡುತ್ತಿದ್ದೇವೆ. ಅದನ್ನೂ ನಾವು ಕೊಡುತ್ತೇವೆ. ಎಂಎಸ್‌ಪಿ, ನಿರುದ್ಯೋಗ ಯುವಜನರಿಗೆ 2 ಕೋಟಿ ಉದ್ಯೋಗ ಕೊಡುವುದು, 15 ಲಕ್ಷ ರೂ ಕಪ್ಪುಹಣ ತರುವುದು ಸೇರಿದಂತೆ ಎಲ್ಲ ಆಶ್ವಾಸನೆಗೆ ನಮ್ಮ ಪ್ರಧಾನಿಗಳು ವಿಫಲರಾಗಿದ್ದಾರೆ. ಇವರ ಸಾಧನೆ ಶೂನ್ಯವಾಗಿದೆ. ಇಂದಿನ ಯುವಪೀಳಿಗೆ ಎಲ್ಲವನ್ನು ಅರಿತಿದ್ದು, ಈ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ” ಎಂದರು.
“ವಿಜಯಪುರ ಜಿಲ್ಲೆಯ ಹಿಂದಿನ ಬಿಜೆಪಿ ಸಂಸದರು ಒಂದೇ ಒಂದು ಬಾರಿಯೂ ಸಂಸತ್‌ನಲ್ಲಿ ಭಾಗಿಯಾಗಿಲ್ಲ. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಸ್ಮಾರ್ಟ್‌ಸಿಟಿ, ದತ್ತುಗ್ರಾಮದಂತಹ ಯೋಜನೆ ಅನುಷ್ಠಾನಗೊಳಿಸಿಲ್ಲ. 3 ಬಾರಿ ಸಂಸದರಾದರೂ ಕೇವಲ ಮೋದಿ ಹೆಸರು ಹೇಳಿ ಆರಿಸಿ ಬಂದು ಜಿಲ್ಲೆಯ ಜನತೆಗೆ ದ್ರೋಹ ಬಗೆದಿದ್ದಾರೆ” ಎಂದು ಆರೋಪಿಸಿದರು.
ನೀರಾವರಿಯಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಪ್ರವಾಸೋದ್ಯಮ ಬೆಳವಣಿಗೆ ಆಗಿಲ್ಲ. ಬರ ಹಣೆಪಟ್ಟಿ ಅಳಿಸುವಲ್ಲಿ ವಿಫಲರಾದ ಜಿಗಜಿಣಗಿ ಮತ್ತೇ ಮೋದಿ ಮುಖ ನೋಡಿ ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಹರಿಹಾಯ್ದರು.
“ನಾವು ವಿಜಯಪುರದಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನು ನೀಡಿದ್ದೇವೆ. ವಿಜಯಪುರದ ಅಭಿವೃದ್ಧಿ ಮಾಡುವುದೇ ಮುಖ್ಯ ಗುರಿಯಾಗಿದೆ. ರಾಜ್ಯದಲ್ಲಿ ಸಾಕಷ್ಟು ಮತದಾರರು ಬದಲಾವಣೆ ಬಯಸಿರುವುದನ್ನು ನಾವು ಕೇಳಿದ್ದೇವೆ. ಬಿಜೆಪಿಯ ಶೇ.10ರಿಂದ 15ರಷ್ಟು ಮತಗಳನ್ನು ನಾವು ಹೆಚ್ಚು ತೆಗೆದುಕೊಳ್ಳಲಿದ್ದೇವೆ. 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸನ್ನಿವೇಶವಿದೆ” ಎಂದು ವಿನಯಕುಮಾರ ಸೊರಕೆ ಹೇಳಿದರು.
ಕೆಪಿಸಿಸಿ ವಕ್ತಾರೆ ಹಾಗೂ ಮಾಜಿ ಸಂಸದ ತೇಜಶ್ವಿನಿ ಗೌಡ ಮಾತನಾಡಿ, “ರಾಜ್ಯದಲ್ಲಿ ನಾವು ನುಡಿದಂತೆ ೫ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದು, ಇದು ರಾಜ್ಯದ ಪ್ರತಿಯೊಬ್ಬರಿಗೂ ಪ್ರತಿ ಮನೆಗೂ ಯೋಜನೆಗಳು ತಲುಪುತ್ತಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶಕ್ಕೆ ಯತ್ನ: ಉದಯ ಕುಮಾರ್ ಶೆಟ್ಟಿ ಆರೋಪ
“ದೇವೆಗೌಡರು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುವ ಭರದಲ್ಲಿ ಜೆಡಿಎಸ್ ಅಸ್ತಿತ್ವವನ್ನೇ ಅಳಿಸಿ ಹಾಕಿದ್ದಾರೆ” ಎಂದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಲೋಣಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹ್ಮದ್ ರಫೀಕ್ ಟಪಾಲ್, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರುಕ್ಸಾನಾ ಉಸ್ತಾದ್, ಐ ಎಂ ಇಂಡಿಕರ ಇದ್ದರು.
