ದೆಹಲಿಯಲ್ಲಿ ಮತದಾನಕ್ಕೆ ಕೇವಲ 20 ದಿನಗಳ ಮೊದಲು ಇತ್ತೀಚೆಗೆ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅರವಿಂದರ್ ಸಿಂಗ್ ಲವ್ಲಿ ಕೆಳಗಿಳಿದಿದ್ದು, ಶನಿವಾರ ಲವ್ಲಿ ಅವರು ಇತರ ನಾಲ್ವರು ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆ ಆಗಿದ್ದಾರೆ.
“ನಾವು ಎಲ್ಲಾ 70 ದೆಹಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಸಂಪರ್ಕ ಹೊಂದಿದ್ದೇವೆ. ರಾಜೀನಾಮೆ ನೀಡಿದ ನಂತರ ಪ್ರಾಮಾಣಿಕವಾಗಿ ಮನೆಯಲ್ಲಿ ಕುಳಿತುಕೊಳ್ಳಲು ಯೋಚಿಸಿದ್ದೆ. ಆದರೆ ಅವರೆಲ್ಲರೂ ದೆಹಲಿ ಮತ್ತು ದೇಶಕ್ಕಾಗಿ ಹೋರಾಡಲು ನಾನು ಬಲವಾದ ಪಕ್ಷವನ್ನು ಸೇರಬೇಕೆಂದು ಹೇಳಿದರು” ಎಂದು ಬಿಜೆಪಿ ಸೇರಿದ ಬಳಿಕ ಲವ್ಲಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಕಾಂಗ್ರೆಸ್‌ಗೆ ‘ಕೈ’ ಕೊಟ್ಟ ಮಾಜಿ ಮೇಯರ್ ಕವಿತಾ ಸನಿಲ್; ಬಿಜೆಪಿ ಸೇರ್ಪಡೆ
“ನಾವು ಐವರು ಮಾತ್ರವಲ್ಲ ಇನ್ನೂ ಹಲವಾರು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲಿದ್ದಾರೆ. ಮುಂಬರುವ ದಿನಗಳಲ್ಲಿ ದೆಹಲಿಯ ಜನರ ಪರವಾಗಿ ಹೋರಾಡಲು ಹಲವಾರು ನಾಯಕರು ಈಗಾಗಲೇ ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಸೇರಲಿದ್ದಾರೆ” ಎಂದು ತಿಳಿಸಿದರು.
ಕೇಂದ್ರ ಸಚಿವ ಹರ್ದೀಪ್ ಪುರಿ ಅವರ ಸಮ್ಮುಖದಲ್ಲಿ ಮಾಜಿ ಕಾಂಗ್ರೆಸ್ ಶಾಸಕರಾದ ರಾಜ್‌ಕುಮಾರ್ ಚೌಹಾಣ್, ನೀರಜ್ ಬಸೋಯಾ, ನಸೀಬ್ ಸಿಂಗ್ ಬಿಜೆಪಿ ಸೇರಿದ್ದಾರೆ. ದೆಹಲಿ ಯುವ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಮಲಿಕ್ ಕೂಡಾ ಬಿಜೆಪಿ ಸೇರಿದ್ದಾರೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ದೆಹಲಿ ಕಾಂಗ್ರೆಸ್‌ನ ಬಲ ಕ್ಷೀಣ?
ಕಾಂಗ್ರೆಸ್‌ನಲ್ಲಿದ್ದ ಲವ್ಲಿ 2017 ರಲ್ಲಿ ಬಿಜೆಪಿ ಸೇರಿದ್ದು ಬಳಿಕ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ. ಅವರು 2023 ರಲ್ಲಿ ನಗರ ಘಟಕದ ಮುಖ್ಯಸ್ಥರಾಗಿದ್ದರು. ಆದರೆ ಇತ್ತೀಚೆಗೆ ಆ ಸ್ಥಾನವನ್ನು ತೊರೆದಿದ್ದ ಲವ್ಲಿ ಈಗ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಬಿಜೆಪಿ ಸೇರಿದ್ದಾರೆ.
ಕಾಂಗ್ರೆಸ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ದಶಕದಲ್ಲಿ ಯಾವುದೇ ವಿಧಾನಸಭೆ ಚುನಾವಣೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ. ಈಗ ಕಾಂಗ್ರೆಸ್ ನಾಯಕರು ಬಿಜೆಪಿಗೆ ಪಳಾಯನ ಆಗುತ್ತಿರುವುದು ಕಾಂಗ್ರೆಸ್ ಬಲವನ್ನು ಮತ್ತಷ್ಟು ಕುಗ್ಗಿಸುವ ಸಾಧ್ಯತೆಯಿದೆ.