ಲೋಕಸಭಾ ಚುನಾವಣೆ ಘೋಷಣೆಯಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ‘ಮೋದಿ ಕಿ ಗ್ಯಾರಂಟಿ’ ಹೆಸರಿನಲ್ಲಿ ತಮ್ಮ ಸರ್ಕಾರದ ಸಾಧನೆಗಳು ಮತ್ತು ಬಿಜೆಪಿ ಚುನಾವಣಾ ಭರವಸೆಗಳ ಬಗ್ಗೆ ಮಾತನಾಡುತ್ತಿದ್ದರು. ತಮ್ಮ ಸರ್ಕಾರವನ್ನು ತಾವೇ ಶ್ಲಾಘಿಸುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಅವರು ಭಾಷಣದ ಪರಿ ಬದಲಾಯಿತು. ಏಪ್ರಿಲ್ 21 ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ತಮ್ಮ ಭಾಷಣದ ಗೇರ್ ಬದಲಿಸಿದ ಮೋದಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯು ಮುಸ್ಲಿಂ ಲೀಗ್ ದಾಖಲೆಯಂತಿದೆ ಎಂಬ ಮಾತಿನೊಂದಿಗೆ ಅತ್ಯಂತ ಧ್ರುವೀಕರಣ ಹಾಘೂ ದ್ವೇಷ-ವಿಷ ಮಿಶ್ರಿತ ಭಾಷಣದ ಸುರಿಮಳೆಗೈದರು. ಅದೇ ಭಾಷಣದಲ್ಲಿ ಮುಸ್ಲಿಮರನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದು ಬಿಂಬಿಸಿದರು.
ಅಂದಿನಿಂದ, ಪ್ರಧಾನಿಯವರ ಭಾಷಣಗಳು ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ನಾನಾ ರೀತಿಯಲ್ಲಿ ಓಲೈಸುತ್ತಿದೆ. ಕಾಂಗ್ರೆಸ್ ಜನರ ಸಂಪತ್ತು ಮತ್ತು ರಾಜ್ಯದ ಸಂಪನ್ಮೂಲಗಳನ್ನು ಮುಸ್ಲಿಮರಿಗೆ ಹಂಚಲು ಯೋಜಿಸಿದೆ. ಪಾಕಿಸ್ತಾನದೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂದು ಕಾಂಗ್ರೆಸ್ ವಿರುದ್ಧ ಸುಳ್ಳುಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
ಮೋದಿಯ ಹೇಳಿಕೆಗಳನ್ನು ಕೇಂದ್ರದ ಸಚಿವರೂ, ಪಕ್ಷದ ನಾಯಕರೂ ತಮ್ಮ ಚುನಾವಣಾ ಪ್ರಚಾರಗಳಲ್ಲಿ ಪ್ರತಿಧ್ವನಿಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರಿಂದ ಹಿಡಿದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ವರೆಗೆ ಎಲ್ಲರೂ ಒಂದೇ ರಾಗ ಹಾಡುತ್ತಿದ್ದಾರೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಅಲ್ಪಸಂಖ್ಯಾತರು ಮತ್ತು ತೀವ್ರ ಎಡಪಂಥೀಯರಿಗೆ ಹೊರಗುತ್ತಿಗೆ ನೀಡಿದೆ ಎಂದು ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಆರೋಪಿಸಿದರೆ, ಅನುರಾಗ್ ಠಾಕೂರ್ ಹಿಮಾಚಲ ಪ್ರದೇಶದಲ್ಲಿ, “ನಿಮ್ಮ ಮಕ್ಕಳ ಆಸ್ತಿ ಅವರ ಬಳಿಯೇ ಇರಬೇಕೇ ಅಥವಾ ಮುಸ್ಲಿಮರ ಪಾಲಾಗಬೇಕೇ ನೀವು ನಿರ್ಧರಿಸಬೇಕು’ ಎಂದರು. ಇಂತಹ ಹೇಳಿಕೆಗಳು ಜೂನ್ 1ರಂದು ಚುನಾವಣೆಗೆ ತೆರೆ ಬೀಳುವವರೆಗೂ ಬಿಜೆಪಿ ಪ್ರಚಾರದಲ್ಲಿ ಮರುಕಳಿಸುತ್ತಲೇ ಇರುತ್ತದೆ. ಮೋದಿಯಿಂದ ಹಿಡಿದು ಬಿಜೆಪಿಯ ಸ್ಥಳೀಯ ನಾಯಕರವರೆಗೂ ಎಲ್ಲ ಬಾಯಿಯಲ್ಲೂ ದ್ವೇಷ ಭಾಷಣಗಳು ಉದುರುತ್ತಿರುತ್ತವೆ.
ಈ ಚುನಾವಣೆ ಮೋದಿಯ ನಿಜ ಸ್ವರೂಪವನ್ನು ಬಿಚ್ಚಿಡುತ್ತಿದೆ
ಮೋದಿಯವರು ತಮ್ಮ ಅಭಿವೃದ್ಧಿ ಕಾರ್ಯಗಳ ಪ್ರಚಾರದಿಂದ ವಿಮುಖರಾಗಿ, ಕ್ಷಮಿಸಲಾಗದ ಕೋಮು ಧೃವೀಕರಣದ ಭಾಷಣೆದೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಅವರ ಭಾಷಣದ ಸ್ವರೂಪವು ವಿರೋಧ ಪಕ್ಷಗಳು ಸೇರಿದಂತೆ ಹಲವರ ಸಿಟ್ಟಿಗೆ ಕಾರಣವಾಗಿದೆ. ಮೋದಿ ಅವರು ತಾವು ಹೊಂದಿರುವ ಪ್ರಧಾನಿ ಹುದ್ದೆಯ ಘಟನೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲ ಎರಡು ಹಂತದ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದ್ದು, ಮೋದಿ ಅವರನ್ನು ಆತಂಕಕ್ಕೆ ದೂಡಿದೆ. ಕಡಿಮೆ ಮತದಾನವು ಆಡಳಿತ ವಿರೋಧಿ ಅಲೆ ಮತ್ತು ಸರ್ಕಾರದ ಮೇಲಿನ ಅಸಹನೆಯ ಪ್ರತೀಕವಾಗಿದೆ. ಹೀಗಾಗಿ, ಮೋದಿ ತಮ್ಮ ತಂತ್ರವನ್ನು ಬದಲಿಸಿದ್ದಾರೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.
‘ಚಾರ್ ಸೋ ಪಾರ್’ ಎನ್ನುತ್ತಿದ್ದ ಮೋದಿಗೆ ತಾವು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ತಮ್ಮ ಗೆಲುವು ಸಾಧ್ಯವಿಲ್ಲ. ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳು ನೆಲದಲ್ಲಿ ಚರ್ಚೆಯಾಗುತ್ತಿರುವಾಗಿ, ವರ ಸಾಧನೆಯ ಪ್ರಚಾರಗಳು ಬಿಜೆಪಿಯ ಕೈಹಿಡಿಯುತ್ತಿಲ್ಲ ಎಂಬುದನ್ನು ಈ ಎರಡು ಹಂತದ ಮತದಾನವು ಸೂಚಿಸಿದೆ. ಇದರಿಂದ ಅತಂಕಕ್ಕೆ ಒಳಗಾಗಿರುವ ಮೋದಿ, ಬಿಜೆಪಿಯ ನಿಜ ಸ್ವರೂಪ-ಸಿದ್ದಾಂತ-ಸೂತ್ರದ ಮೂಲಕ ಮುಸ್ಲಿಂ ಸಮುದಾಯವನ್ನು ವೈರಿಗಳಾಗಿ ಚಿತ್ರಸುವುದು, ಪ್ರತಿಪಕ್ಷಗಳನ್ನು ಬೆದರಿಸುವುದು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರನ್ನು ಮುಸ್ಲಿಂ ಸಮುದಾಯದ ವಿರುದ್ಧ ಹುರಿದುಂಬಿಸುವ ಅಂಜೆಂಡಾವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.
ಆದರೆ, ಪ್ರಧಾನಿಯವರ ಧ್ರುವೀಕರಣದ ದ್ವೇಷ ಭಾಷಣದ ಬಗ್ಗೆ ಆಶ್ಚರ್ಯಪಡುವ ಅಗತ್ಯವೇ ಇಲ್ಲ. ಯಾಕೆಂದರೆ, ಮೋದಿ ಅವರು ತಮ್ಮ ರಾಜಕೀಯ ವೃತ್ತಿಜೀವನದಲ್ಲಿ ಮಾರ್ಗದರ್ಶಿ ಶಕ್ತಿಯಾಗಿರುವ ಆರ್‌ಎಸ್‌ಎಸ್‌ನ ಅಜೆಂಡಾವನ್ನು ಬಹಿರಂಗಪಡಿಸುತ್ತಿದ್ದಾರೆ. ಆರ್‌ಎಸ್‌ಎಸ್ 1925 ರಿಂದ ಹಿಂದೂ ಪಾರಮ್ಯದ ಸಿದ್ದಾಂತ ಮತ್ತು ಹಿಂದು ರಾಷ್ಟ್ರದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಕೆಳಮಟ್ಟಕ್ಕಿಳಿಸುವ ಅಜೆಂಡಾವನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಈ ಆರ್‌ಎಸ್‌ಎಸ್‌ನಲ್ಲಿ ಹಲವಾರು ವರ್ಷಗಳನ್ನು ಕಳೆದಿರುವ ಮೋದಿ ಅವರ ಸ್ವರೂಪವನ್ನು ಈ ಚುನಾವಣೆ ಬಹಿರಂಗಪಡಿಸುತ್ತಿದೆ.
ಈ ವರದಿ ಓದಿದ್ದೀರಾ?: ಮೋದಿ ರಾಜಕೀಯ ಇತಿಹಾಸ ‘ಹಿಂದು-ಮುಸ್ಲಿಂ ದ್ವೇಷ’ವನ್ನ ಆಧರಿಸಿದೆ: ದಿಗ್ವಿಜಯ ಸಿಂಗ್
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗ ದೇಶದ ಪ್ರಧಾನಿಯಾಗಿ ಮೋದಿ ಅವರು ಆರ್‌ಎಸ್‌ಎಸ್ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವಲ್ಲಿ ನಿರಂತರ ಪ್ರಯತ್ನದಲ್ಲಿದ್ದಾರೆ. 2002ರಲ್ಲಿ 1000ಕ್ಕೂ ಹೆಚ್ಚು ಮುಸ್ಲಿಮರನ್ನು ಕೊಂದ ಗೊದ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಮೋದಿ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆಯಾದರೂ, ಅಗ ಮೋದಿ ಅವರೇ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕುವ ಮೋದಿ ಸರ್ಕಾರದ ನಿರ್ಧಾರ, ಅಂತರ್-ಧರ್ಮೀಯ ವಿವಾಹಗಳ ವಿರುದ್ಧದ ಕ್ರಮ, ಅಯೋಧ್ಯೆಯಲ್ಲಿ ರಾಮ ನಿರ್ಮಾಣ ಮತ್ತು ಏಕರೂಪ ನಾಗರಿಕ ಸಂಹಿತೆಯ ಪರಿಚಯ ಇವೆಲ್ಲವೂ ಆರ್‌ಎಸ್‌ಎಸ್ ಪ್ರಚಾರಕರಾಗಿ ಮೋದಿ ಕಲಿತ ಪಾಠಗಳಿಗೆ ಅನುಗುಣವಾಗಿವೆ.
ಅತಿಯಾದ ಆತ್ಮವಿಶ್ವಾಸ?
ಮೋದಿಯವರ ಭಾಷಣಗಳು ಯಾವಾಗಲೂ ಮುಸ್ಲಿಮರನ್ನು ಜಿಹಾದಿಗಳು, ಪಾಕಿಸ್ತಾನಿ ಭಯೋತ್ಪಾದಕರ ಸಂಬಂಧಿಗಳು ಎಂಬ ಅರೋಪಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ. ಇತ್ತಿಚಿನ ಅವರ ಭಾಷಣಗಳು ಹೀಗೆ ಮಾತನಾಡಿದರೆ, ನಾವು ಗೆದ್ದೇ ಗೆಲ್ಲುತ್ತೇವೆಂಬ ಅತಿಯಾದ ಆತ್ಮವಿಶ್ವಾಸದಿಂದ ಕೂಡಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ನೆಲದಲ್ಲಿ ಮೋದಿ ಅಲೆ ಇಲ್ಲದಿದ್ದರೂ, ಮಾಧ್ಯಮಗಳು ಹಾಗೂ ಹಲವು ಸಮೀಕ್ಷೆಗಳು – 10 ವರ್ಷ ಆಡಳಿತ ನಡೆಸಿದ ನಂತರವೂ ಮೋದಿ ಜನಪ್ರಿಯತೆ ಕುಸಿದಿಲ್ಲ. ಈ ಚುನಾವಣೆಯಲ್ಲಿಯೂ ಅವರು ಗೆಲುವಿನ ಹಾದಿಯಲ್ಲಿದ್ದಾರೆ ಎಂದು ತೋರಿಸುವ ವರದಿಗಳಿಂದ ಮೋದಿ ಉತ್ತೇಜಿತರಾಗಿದ್ದಾರೆ. ಇದರೊಂದಿಗೆ, ಪತ್ರಿಪಕ್ಷಗಳ ಮೈತ್ರಿಯಲ್ಲಿ ಉಂಟಾಗಿದ್ದ ಅಸ್ತವ್ಯಸ್ತತೆಯು ಮೋದಿ ಅವರನ್ನು ಮತ್ತಷ್ಟು ಪ್ರೇರೇಪಿಸಿದೆ ಎಂದು ಹೇಳಲಾಗುತ್ತಿದೆ.
ಮೋದಿ ನೇತೃತ್ವದ ಬಿಜೆಪಿಯು ಕಾಂಗ್ರೆಸ್‌ಅನ್ನು ‘ಹಿಂದು ವಿರೋಧಿ ಮತ್ತು ಮುಸ್ಲಿಂ ಪರ’ ಎಂದು ಬಿಂಬಿಸುತ್ತಿದೆ. ಈ ಮೂಲಕ ಸ್ಪಷ್ಟವಾಗಿ, ಮೋದಿ ಅಜೇಯ ಎಂಬುದನ್ನು ಪ್ರದರ್ಶಿಸಲು ಬಿಜೆಪಿ ಯತ್ನಿಸುತ್ತಿದೆ.
ಆದರೆ, ನಿರುದ್ಯೋಗ, ಬಡತನ, ಬೆಲೆ ಏರಿಕೆ, ರೈತರ ಅತ್ಮಹತ್ಯೆಗಳು, ದುಬಾರಿ ಜೀವನ, ನಾನಾ ಸಂಕಷ್ಟಗಳಿಂದ ಬಳಲುತ್ತಿರುವ ದೇಶದ ಜನರು ಮೋದಿ ಅವರ ದ್ವೇಷ ಭಾಷಣಕ್ಕೆ ಮರಳಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಮೋದಿ ಆಡಳಿತದ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಕಳೆದ 2 ಹಂತಗಳ ಮತದಾನವು ಸೂಚಿಸಿದೆ. ಹೀಗಾಗಿ, ಈ ಬಾರಿ ಮೋದಿ ಅವರು ಹಿಂದುತ್ವ, ಮುಸ್ಲಿಂ ದ್ವೇಷವು ಬಿಜೆಪಿಗೆ ಅಧಿಕಾರ ನೀಡದು ಎಂಬುದು ಜನರ ಮಾತುಗಳಲ್ಲಿಯೂ ಸ್ಪಷ್ಟವಾಗಿ ಕೇಳಿಬರುತ್ತಿದೆ.