ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣನ ವಿರುದ್ಧ ಇಂಟರ್‌ಪೋಲ್ ಸಹಾಯದ ಮೂಲಕ ಭಾರತಕ್ಕೆ ಕರೆತರಲು ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಟರ್‌ಪೋಲ್ ಸಂಸ್ಥೆಯ ಮೂಲಕ ಬ್ಲೂ ಕಾರ್ನರ್ ನೋಟಿಸ್ ತಲುಪಿಸಲಾಗಿದೆ. ಆರೋಪಿಯ ಪತ್ತೆ, ಸ್ಥಳ ಅಥವಾ ಅಪರಾಧ ಸಂಬಂಧಿತ ಮಾಹಿತಿ ಬಗ್ಗೆ ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳು ಹೆಚ್ಚುವರಿ ಮಾಹಿತಿ ರವಾನಿಸಿ ಆರೋಪಿ ಬೇಕಾದ ರಾಷ್ಟ್ರಕ್ಕೆ ತಿಳಿಸುತ್ತವೆ.
ನಂತರ ಇಲ್ಲಿನ ಪೊಲೀಸರು ಅರೋಪಿಯಿರುವ ರಾಷ್ಟ್ರಕ್ಕೆ ತೆರಳಿ ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ಕರೆತರುತ್ತಾರೆ.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್ ಲೈಂಗಿಕ ಹಗರಣದ ಸಂತ್ರಸ್ತೆಯರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಆರ್ಥಿಕ ನೆರವು
“ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದ್ದು, ಇಂಟರ್‌ಪೋಲ್ ಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳಿಗೆ ಆರೋಪಿ ಪತ್ತೆಯ ಬಗ್ಗೆ ಮಾಹಿತಿ ನೀಡುತ್ತವೆ” ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಈಗಾಗಲೇ ರಚಿಸಲಾಗಿರುವ ವಿಶೇಷ ತನಿಖಾ ತಂಡ ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಪ್ರಜ್ವಲ್ ರೇವಣ್ಣನನ್ನು ಹೇಗೆ ಭಾರತಕ್ಕೆ ವಾಪಸ್ ಕರೆತರಬೇಕೆಂದು ನಿರ್ಧರಿಸುತ್ತವೆ. ತನಿಖಾ ಸಂಸ್ಥೆಯು ತನ್ನ ಕೆಲಸ ನಿರ್ವಹಿಸಲಿದ್ದು,ಕಾನೂನಿನ ಪ್ರಕಾರ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳಲಿದೆ ಎಂದು ಪರಮೇಶ್ವರ್ ತಿಳಿಸಿದರು.
ಪ್ರಜ್ವಲ್ ರೇವಣ್ಣನ ತಂದೆ ಹೆಚ್ ಡಿ ರೇವಣ್ಣ ಅವರನ್ನು ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ತಂಡ ಬಂಧಿಸಿದೆ. ಹೆಚ್ ಡಿ ರೇವಣ್ಣ ಅವರ ಮೇಲೆ ಕೂಡ ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣಗಳನ್ನು ದಾಖಲಿಸಲಾಗಿದೆ.
