ಮೂರು ಸಾವಿರಕ್ಕೂ ಹೆಚ್ಚಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ರಾಕ್ಷಸಿಕೃತ್ಯದಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ದೇಶದ ಮಾನ ಹರಾಜಾಗಿದೆ. ಪ್ರಕರಣದ ಸಂತ್ರಸ್ತೆಯರಿಗೆ ಅಪಾಯವಿರುವ ಕಾರಣ ಕೂಡಲೇ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಕೃತ್ಯದಲ್ಲಿ ಭಾಗಿಯಾದವರಿಗೆ ಕಾನೂನಿನ ಪ್ರಕರ ಶಿಕ್ಷೆ ವಿಧಿಸಬೇಕು ಎಂದು ʼಎದ್ದೇಳು ಕರ್ನಾಟಕʼ ಜಿಲ್ಲಾ ಸಂಯೋಜಕ ಜಗದೀಶ್ವರ ಬಿರಾದರ್ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ” ಹೆಣ್ಣು ಮಕ್ಕಳೊಂದಿಗೆ ಚೆಲ್ಲಾಟವಾಡಿ ಅದರ ವಿಡಿಯೋ ಚಿತ್ರಿಕರಣ ಮಾಡಿದ್ದಾನೆಂದರೆ ನಾಗರಿಕ ಸಮಾಜ ಎತ್ತ ಸಾಗುತ್ತದೆ ಎಂಬ ಪ್ರಶ್ನೆ ಕಾಡುತ್ತದೆ. ಈ ಘಟನೆಯಲ್ಲಿ ಭಾಗಿಯಾದ ಪ್ರಜ್ವಲ್‌ನನ್ನು ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಿ ವಿದೇಶಕ್ಕೆ ಓಡಿ ಹೋಗಲು ಕೇಂದ್ರ ಸರ್ಕಾರವೇ ವ್ಯವಸ್ಥೆ ಮಾಡಿದೆ. ಪ್ರಜ್ವಲ್ ರೇವಣ್ಣನನ್ನು ದೇಶಕ್ಕೆ ಕರೆತಂದು ತನಿಖೆಗೊಳಪಡಿಸಬೇಕು” ಎಂದು ಒತ್ತಾಯಿಸಿದರು.
ಮುಖಂಡ ಬಾಬುರಾವ್ ಪಾಸ್ವಾನ್ ಮಾತನಾಡಿ, “ಮಾಜಿ ಪ್ರಧಾನಿ ದೇವೆಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನ ಕರ್ಮಕಾಂಡದಿಂದ ರಾಜ್ಯದ ಮಾನ ಹರಾಜಾಗಿದೆ. ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಕಾರಣ ಜೆಡಿಎಸ್ ಪಕ್ಷ ತೆನೆಹೊತ್ತ ಚಿಹ್ನೆ ಇಟ್ಟುಕೊಳ್ಳಲು ಅವರ ಅರ್ಹವಲ್ಲ. ಪಕ್ಷದ ಚಿಹ್ನೆ ಬದಲಾಯಿಸಬೇಕು” ಎಂದು ಆಗ್ರಹಿಸಿದರು.
ಸಂಘಟನೆ ಮುಖಂಡ ಅನೀಲಕುಮಾರ್ ಬೆಲ್ದಾರ್ ಮಾತನಾಡಿ, “ಹುಬ್ಬಳಿಯಲ್ಲಿ ನೇಹಾ ಕೊಲೆಯಾದಾಗ ಬೀದಿಗಿಳಿದು ಹೋರಾಟ ನಡೆಸಿದ ಬಿಜೆಪಿ ಹಾಗೂ ಹಿಂದುತ್ವವಾದಿ ಸಂಘಟನೆಗಳು ಹಾಸನದಲ್ಲಿ ಒಬ್ಬ ಸಂಸದನಿಂದ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಬಗ್ಗೆ ಒಬ್ಬರೂ ಚಕಾರ ಎತ್ತುತ್ತಿಲ್ಲ. ಇವರು ಹಿಂದು ಮಹಿಳೆಯರು ಅಲ್ಲವೇ?” ಎಂದು ಪ್ರಶ್ನಿಸಿದರು.
ಅತ್ಯಂತ ಭಯಂಕರವಾದ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯನ್ನು ತಮ್ಮ ಅಭ್ಯರ್ಥಿಯನ್ನಾಗಿಸಿ ಕರ್ನಾಟಕದ ಮಹಿಳೆಯರನ್ನು ಮತ್ತು ಜನತೆಯನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದ ಬಿಜೆಪಿ-ಜೆಡಿಎಸ್ ಪಕ್ಷಗಳು ಬಹಿರಂಗ ಕ್ಷಮೆಯಾಚಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಿಯಂತ್ರಿಸುವ ಮಾರ್ಗಸೂಚಿ ಕ್ರಮಗಳಿಗಾಗಿ ಸರ್ಕಾರ ಕೂಡಲೇ ಉನ್ನತ ಮಟ್ಟದ ಸಮಿತಿ ರಚಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೋದಿ ಆಡಳಿತಾವಧಿ – ಬಿಕ್ಕಟ್ಟಿನಲ್ಲಿ ದೇಶದ ಪತ್ರಿಕಾ ಸ್ವಾತಂತ್ರ್ಯ!
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಓಂಪ್ರಕಾಶ ರೊಟ್ಟೆ, ಸಂದೀಪ ಕಾಂಟೆ, ಅಶೋಕ ಮಾಳಗೆ ಉಪಸ್ಥಿತರಿದ್ದರು.