ಲೈಂಗಿಕ ಹಗರಣದ ಆರೋಪಿ, ಪರಾರಿಯಾಗಿರುವ ಜೆಡಿಎಸ್ ಸಂಸದ, ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ‘ಬ್ಲೂ ಕಾರ್ನರ್ ನೋಟಿಸ್’ ಜಾರಿ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ಮತ್ತು ಇತರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ, ಆ ಕೃತ್ಯಗಳನ್ನು ತಾನೇ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ಕೃತ್ಯದ ಸುಮಾರು 2,900 ವಿಡಿಯೋಗಳ ಪೆನ್‌ಡ್ರೈವ್‌ಗಳ ಹಾಸನದಲ್ಲಿ ಸಿಕ್ಕ ಬಳಿಕ, ಕೆಲ ವಿಡಿಯೋಗಳು ವೈರಲ್ ಆಗಿವೆ. ವಿಡಿಯೋಗಳು ಹೊರ ಬರುತ್ತಿದ್ದಂತೆಯೇ ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಿಸಿ, ಏಪ್ರಿಲ್ 28ರಂದು ಜರ್ಮನಿಗೆ ಓಡಿಹೋಗಿದ್ದಾರೆ.
ಪ್ರಜ್ವಲ್ ಲೈಂಗಿಕ ಹಗರಣ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ, ಪ್ರಜ್ವಲ್ ತಂದೆ ಎಚ್.ಡಿ ರೇವಣ್ಣ ಅವರನ್ನು ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ಬಂಧಿಸಿದೆ. ವಿಚಾರಣೆಗೆ ಒಳಪಡಿಸುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ಈಗಾಗಲೇ 3 ನೋಟಿಸ್ ನೀಡಲಾಗಿದ್ದು, ಆತ ಎಸ್‌ಐಟಿ ಮುಂದೆ ಹಾಜರಾಗಿಲ್ಲ. ಆತನನ್ನು ಬಂಧಿಸಿ, ಕರೆತರಲು ಗೃಹ ಇಲಾಖೆ ‘ಬ್ಲೂ ಕಾರ್ನರ್ ನೋಟಿಸ್’ ಜಾರಿ ಮಾಡಿದೆ.
ಬ್ಲೂ ಕಾರ್ನರ್ ನೋಟಿಸ್ ಪ್ರಜ್ವಲ್‌ನನ್ನು ಮರಳಿ ಕರೆತರುತ್ತದೆಯೇ ಎಂಬ ಪ್ರಶ್ನೆ ಈಗ ಮುನ್ನೆಲೆಯಲ್ಲಿದೆ. ಭಾನುವಾರ ಸಂಜೆ ಪ್ರಜ್ವಲ್ ಬೆಂಗಳೂರಿಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಆತ ಬಂದಿಲ್ಲ. ಹೀಗಾಗಿ, ಬ್ಲೂ ಕಾರ್ನರ್ ನೋಟಿಸ್ ಮೂಲಕವೇ ಆತನನ್ನು ಬಂಧಿಸುವ ಸಾಧ್ಯತೆಗಳಿವೆ.
ಏನಿದು ಇಂಟರ್ಪೋಲ್‌ನ ಬಣ್ಣ-ಸಂಕೇತದ ನೋಟಿಸ್‌ಗಳು
ನೀಲಿ ಅಥವಾ ‘ಬ್ಲೂ ಕಾರ್ನರ್ ನೋಟಿಸ್’ – ಇಂಟರ್‌ಪೋಲ್‌ನ ವರ್ಣ-ಸಂಕೇತ ನೋಟೀಸ್‌ಗಳಲ್ಲಿ ಒಂದಾಗಿದೆ. ಸಿಬಿಐ ವೆಬ್‌ಸೈಟ್‌ನ ಪ್ರಕಾರ, ‘ಜಗತ್ತಿನಾದ್ಯಂತ ಮಾಹಿತಿಗಾಗಿ ಎಚ್ಚರಿಕೆಗಳು ಮತ್ತು ಮನವಿಗಳನ್ನು ರವಾನಿಸಲು’ ಈ ನೋಟಿಸ್‌ಅನ್ನು ಬಳಸಲಾಗುತ್ತದೆ. ಅಂತಾರಾಷ್ಟ್ರೀಯವಾಗಿ ಹರಡಿರುವ ಅಪರಾಧ ಚಟುವಟಿಕೆಗಳನ್ನು ನಿಭಾಯಿಸಲು, ಆರೋಪಿಗಳ ಬಗ್ಗೆ ಮತ್ತೊಂದು ದೇಶಕ್ಕೆ ಮಾಹಿತಿ ನೀಡಲು ಈ ನೋಟಿಸ್ ನೆರವಾಗುತ್ತದೆ.
ಏಳು ವಿಧದ ನೋಟಿಸ್‌ಗಳಿವೆ – ರೆಡ್ ನೋಟಿಸ್, ಎಲ್ಲೋ ನೋಟಿಸ್, ಬ್ಲೂ ನೋಟಿಸ್, ಬ್ಲ್ಯಾಕ್ ನೋಟಿಸ್, ಗ್ರೀನ್ ನೋಟಿಸ್, ಆರೆಂಜ್ ನೋಟಿಸ್ ಹಾಗೂ ಪರ್ಪಲ್ ನೋಟಿಸ್. ಈ ಪ್ರತಿಯೊಂದೂ ನೋಟಿಸ್‌ಗಳು ವಿಭಿನ್ನವಾದ ಅರ್ಥವನ್ನು ಹೊಂದಿವೆ.
ರೆಡ್ ನೋಟಿಸ್: ಪ್ರಾಸಿಕ್ಯೂಷನ್ ಅಥವಾ ಶಿಕ್ಷೆಗೆ ಗುರಿಪಡಿಸಲು ಬೇಕಾದ ಅರೋಪಿಗಳ ಸ್ಥಳ ಗುರುತಿಸಲು ಮತ್ತು ಅತನನ್ನು ಬಂಧಿಸಲು.
ಎಲ್ಲೋ ನೋಟಿಸ್: ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು – ಸಾಮಾನ್ಯವಾಗಿ ಅಪ್ರಾಪ್ತ ವಯಸ್ಕರು, ಅಥವಾ ತಮ್ಮ ಗುರುತನ್ನೇ ಗುರುತಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳನ್ನು ಹುಡುಕಲು ಬಳಸಲಾಗುತ್ತದೆ.
ಬ್ಲೂ ನೋಟಿಸ್: ಅಪರಾಧ ತನಿಖೆಗೆ ಸಂಬಂಧಿಸಿದಂತೆ ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು.
ಬ್ಲ್ಯಾಕ್ ನೋಟಿಸ್: ಅಪರಿಚಿತ ದೇಹಗಳ ಬಗ್ಗೆ ಮಾಹಿತಿ ಪಡೆಯಲು.
ಗ್ರೀನ್ ನೋಟಿಸ್: ವ್ಯಕ್ತಿಯ ಅಪರಾಧ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಲು. ಆತನಿಂದ ಸಾರ್ವಜನಿಕರಿಗೆ ಎದುರಾಗುವ ಸಂಭನೀಯ ಬೆದರಿಕೆಯ ಬಗ್ಗೆ ಮಾಹಿತಿ ನೀಡಲು.
ಆರೆಂಜ್ ನೋಟಿಸ್: ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆಯನ್ನು ಪ್ರತಿನಿಧಿಸುವ ಘಟನೆ, ವ್ಯಕ್ತಿ, ವಸ್ತು ಅಥವಾ ಪ್ರಕ್ರಿಯೆಯ ಬಗ್ಗೆ ಎಚ್ಚರಿಕೆ ನೀಡಲು.
ಪರ್ಪಲ್ ನೋಟಿಸ್: ಅಪರಾಧಿಗಳು ರೂಪಿಸುವ ತಂತ್ರ, ಬಳಸುವ ವಸ್ತುಗಳು, ಸಾಧನಗಳು ಮತ್ತು ತಪ್ಪಿಸಿಕೊಳ್ಳುವ ವಿಧಾನಗಳ ಕುರಿತು ಮಾಹಿತಿ ಹುಡುಕುವುದು ಅಥವಾ ಒದಗಿಸುವುದು.
ಇಂಟರ್‌ಪೋಲ್‌ನ ಸದಸ್ಯ ರಾಷ್ಟ್ರದ ‘ಇಂಟರ್‌ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ’ದ ಕೋರಿಕೆಯ ಮೇರೆಗೆ ‘ಇಂಟರ್‌ಪೋಲ್‌ನ ಜನರಲ್ ಸೆಕ್ರೆಟರಿಯೇಟ್’ನಿಂದ ಈ ನೋಟಿಸ್‌ಗಳನ್ನು ನೀಡಲಾಗುತ್ತದೆ. ಎಲ್ಲ ಸದಸ್ಯ ರಾಷ್ಟ್ರಗಳಿಗೆ ನೋಟಿಸ್ ಲಭ್ಯವಾಗುವಂತೆ ಮಾಡಲಾಗುತ್ತದೆ. ಇಂಟರ್‌ಪೋಲ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ‘ಇಂಟರ್‌ನ್ಯಾಶನಲ್ ಕ್ರಿಮಿನಲ್ ಪೊಲೀಸ್ ಸಂಸ್ಥೆ’ಯು ವಿಶ್ವಾದ್ಯಂತ ಪೊಲೀಸ್ ನೆರವು ಮತ್ತು ಅಪರಾಧ ನಿಯಂತ್ರಣಕ್ಕೆ ಸಹಕಾರ ನೀಡುತ್ತದೆ.
ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್
ತನಿಖೆಯು ತೀವ್ರವಾಗಿ ನಡೆಯುವಾಗಿ ತನಿಖಾ ಸಂಸ್ಥೆಗಳು ಆರೋಪಿಯು ದೇಶದ ಹೊರಗಿದ್ದರೆ, ಆತನನ್ನು ದೇಶಕ್ಕೆ ಕರೆತಲು ಬ್ಲೂ ನೋಟಿಸ್‌ಗಳು ನೆರವಾಗುತ್ತವೆ.
ಭಾರತದಲ್ಲಿ ಸಿಬಿಐ ವೆಬ್‌ಸೈಟ್‌ನಲ್ಲಿ ಈ ನೋಟಿಸ್‌ಅನ್ನು ‘ಬಿ ಸರಣಿ ನೋಟಿಸ್’ ಅಥವಾ ‘ವಿಚಾರಣೆ ನೋಟಿಸ್’ ಎಂದು ಉಲ್ಲೇಖಿಸಿದೆ. ಇವುಗಳನ್ನು ‘ಆರೋಪಿ ಗುರುತನ್ನು ಪರಿಶೀಲಿಸಲು; ವ್ಯಕ್ತಿಯ ಕ್ರಿಮಿನಲ್ ದಾಖಲೆಯ ವಿವರಗಳನ್ನು ಒದಗಿಸಲು ಮತ್ತು ಪಡೆಯಲು; ಕಾಣೆಯಾಗಿರುವ ಅಥವಾ ಗುರುತಿಸಲ್ಪಟ್ಟ ಅಥವಾ ಗುರುತಿಸಲಾಗದ ಅಂತರರಾಷ್ಟ್ರೀಯ ಅಪರಾಧಿಯ ಬಂಧನ; ಸಾಮಾನ್ಯ ಕ್ರಿಮಿನಲ್ ಕಾನೂನಿನನ್ನು ಉಲ್ಲಂಘಿಸಿದ ಆರೋಪಿಯನ್ನು ಪತ್ತೆ ಹಚ್ಚಿಲು ಮತ್ತು ದೇಶಕ್ಕೆ ಹಸ್ತಾಂತರಿಸಲು ಮನವಿ ಮಾಡಲು ಬಳಸಲಾಗುತ್ತದೆ.
ಇಂಟರ್‌ಪೋಲ್‌ನ ಎಲ್ಲ ನೋಟಿಸ್‌ಗಳು ಸಂಪೂರ್ಣವಾಗಿ ವಿವೇಚನೆಯಿಂದ ಕೂಡಿರುತ್ತವೆ; ಅಂದರೆ ಇಂಟರ್‌ಪೋಲ್ ಸ್ವತಃ ಕಾನೂನು ಜಾರಿ ಅಧಿಕಾರಿಗಳನ್ನು ನಿರ್ದಿಷ್ಟ ಸೂಚನೆಯ ಮೇಲೆ ಕಾರ್ಯನಿರ್ವಹಿಸಲು ಒತ್ತಾಯಿಸುವುದಿಲ್ಲ. ಅಲ್ಲದೆ, ನೋಟಿಸ್‌ಗಳ ಮೇಲೆ ತೆಗೆದುಕೊಳ್ಳಲಾಗುವ ಕ್ರಮವು ಎರಡು ದೇಶಗಳ ನಡುವಿನ ಸಂಬಂಧಗಳ ಮೇಲೆ ಆಧಾರವಾಗಿರುತ್ತದೆ. ಪ್ರಜ್ವಲ್ ಪಲಾಯನ ಮಾಡಿರುವ ಜರ್ಮನಿಯೊಂದಿಗೆ ಭಾರತವು ಸೌಹಾರ್ದ ಸಂಬಂಧ ಹೊಂದಿದ್ದು, ಈ ಪ್ರಕರಣವನ್ನು ಪರಿಹರಿಸಲು ಭಾರತಕ್ಕೆ ಜರ್ಮನ್ ಉತ್ತಮವಾಗಿ ಸಹಕರಿಸುತ್ತದೆ ಎಂಬುದು ಸ್ಪಷ್ಟ.
ಈ ಹಿಂದೆ, 2020ರಲ್ಲಿ ಇಂಟರ್ಪೋಲ್ ಬ್ಲೂ ಕಾರ್ನ್ ನೋಟಿಸ್ ಜಾರಿ ಮಾಡಿತ್ತು. 2019ರಲ್ಲಿ ದೇಶಬಿಟ್ಟು ಪರಾರಿಯಾಗಿದ್ದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಆರೋಪಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಬಂಧನಕ್ಕಾಗಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಆತನನ್ನು ಬಂಧಿಸಲಾಗಿಲ್ಲ.