ಬಿಜೆಪಿಗೆ ಮಾರಾಟವಾಗಿರುವ ಮಂದಕೃಷ್ಣ ಮಾದಿಗ ಇವರು ಸಮೂದಾಯವನ್ನು ಒಂದು ಪಕ್ಷಕ್ಕೆ ಒತ್ತೆಯಿಟ್ಟು ಮಾತನಾಡುವುದನ್ನು ನಿಲ್ಲಿಸಬೇಕು. ಸಂಘಟನೆ ಧ್ವಜವನ್ನು ಬಿಟ್ಟು ಬಿಜೆಪಿ ಧ್ವಜ ಹಾಕಿಕೊಳ್ಳಲಿ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಸಂಚಾಲಕ ಜೆ ಬಿ ರಾಜು ಎಚ್ಚರಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಸಮಾಜ ಸಂಘಟನೆ ಪ್ರತಿನಿಧಿಸಿ ಕಪ್ಪು ಬಣ್ಣದ ಶಾಲು ಹಾಕಿಕೊಂಡು ಮಾದಿಗರ ಸಮುದಾಯ ಬಿಜೆಪಿ ಬೆಂಬಲಿಸುತ್ತಾರೆಂದು ಹೇಳಿರುವದು ಖಂಡನೀಯ. ಸಮಾಜ ಯಾವುದೇ ರಾಜಕೀಯ ಪಕ್ಷದ ಸ್ವತ್ತಲ್ಲ. ವೈಯಕ್ತಿಕವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಒಳಮೀಸಲಾತಿ ಹೋರಾಟಕ್ಕೆ ಮಂದಕೃಷ್ಣ ಮಾದಿಗ ಇವರ ಕೊಡುಗೆ ಇಲ್ಲ. 1997ರಲ್ಲಿ ನಗರದ ಮಹಿಳಾ ಸಮಾಜದಲ್ಲಿ ನಡೆದ ಸಭೆಯಲ್ಲಿ ಒಳಮೀಸಲಾತಿ ಹೋರಾಟ ಹುಟ್ಟು ಪಡೆದುಕೊಂಡಿದೆ. ಉಸ್ಮಾನೀಯ ಯುನಿವರ್ಸಟಿಯ ಅನೇಕರು ಅಂದು ಭಾಗಿಯಾಗಿದ್ದರು. ಆಂಧ್ರದ ಹೋರಾಟದಿಂದ ರಾಜ್ಯದ ಜನರು ಕಲೆಯಬೇಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮಾದಿಗ ಸಮುದಾಯದ ಬಿಜೆಪಿ ಬೆಂಬಲಿಸಿದೆ. ಶಿಕ್ಷಣ, ಉದ್ಯೋಗ ದೊರೆಯುತ್ತದೆಂದು ಸುಳ್ಳು ಹೇಳಿದ್ದಾರೆ. ಕಳೆದ 10 ವರ್ಷದ ಬಿಜೆಪಿ ಆಡಳಿತದಲ್ಲಿ ಪರಿಶಿಷ್ಟ ಸಮುದಾಯಗಳ ಎಷ್ಟು ಮಂದಿಗೆ ಉದ್ಯೋಗ, ಶಿಕ್ಷಣ ದೊರೆತಿದೆಯೆಂದು ಅವರ ಹೇಳಲಿ” ಎಂದು ಸವಾಲು ಹಾಕಿದರು.
ಶೇ.30ರಷ್ಟು ಯುವಜನರಿಗೆ ಉದ್ಯೋವಿಲ್ಲದಂತಾಗಿದೆ. ರೈಲು, ಬಂದರು, ವಿಮಾನ ನಿಲ್ದಾಣ, ಸಾರ್ವಜನಿಕ ಆಸ್ತಿಯನ್ನು ಮೋದಿ ಸರ್ಕಾರ ಮಾರಾಟ ಮಾಡಿದೆ. 2012ರಲ್ಲಿ ಬಿಜೆಪಿ ಸರ್ಕಾರಕ್ಕೆ ಸದಾಶಿವ ಆಯೋಗ ವರದಿ ಸಲ್ಲಿಸಿತ್ತು. ನಿಜವಾದ ಕಾಳಜಿಯಿದ್ದರೆ ಏಕೆ ಮಂಡಿಸಲಿಲ್ಲ? ಮಾದಿಗ ಸಮಾಜ ಸೇರಿದಂತೆ ಪರಿಶಿಷ್ಟ ಜಾತಿಗಳು ಒಂದು ಪಕ್ಷವಾಗಿ ನಿಲ್ಲಲು ಸಾಧ್ಯವಿಲ್ಲ” ಎಂದರು.
ರಾಜ್ಯ ಮುಖಂಡ ಎಸ್ ಮಾರೆಪ್ಪ ಮಾತನಾಡಿ, “ಮಂದಕೃಷ್ಣ ಮಾದಿಗ ಒಬ್ಬ ಅನಕ್ಷರಸ್ಥ. ಆತನಿಗೆ ರಾಜ್ಯ ಪರಿಶಿಷ್ಟ ಒಳ ಮೀಸಲಾತಿ ಸಮಸ್ಯೆ ಅರಿವಿಲ್ಲ. ಸುಪ್ರಿಂಕೋರ್ಟಿನಲ್ಲಿ ರಚಿತವಾಗಿರುವ ಏಳು ಮಂದಿ ನ್ಯಾಯಮೂರ್ತಿಗಳ ಪೀಠ ನರೇಂದ್ರ ಮೋದಿ ಹೇಳಿದರೆ ರಚನೆಯಾಗಿಲ್ಲ. ಪಂಜಾಬ್ ಪ್ರಕರಣ ವಿಚಾರಣೆಯನ್ನು ನ್ಯಾಯಪೀಠ ವಿಚಾರಣೆ ನಡೆಸಿದೆ. ತೀರ್ಪಿನಿಂದ ರಾಜ್ಯದ ಪರಿಶಿಷ್ಟರಿಗೆ ಅನ್ವಯವಾಗುವದಿಲ್ಲ. 341 ಕಲಂ ತಿದ್ದುಪಡಿ ಅಗತ್ಯವಿಲ್ಲವೆಂದು ಹೇಳಿರುವ ಅರುಣಾ ಮಿಶ್ರಾ ಅಭಿಪ್ರಾಯವೇ ಹೊರತು ತೀರ್ಪಲ್ಲ” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬೇವು ಲೇಪಿತ ಯೂರಿಯಾ ಅಕ್ರಮ ಸಾಗಣೆ; ಲಾರಿ ವಶ
“ಆತ್ಮಗೌರವ, ಸ್ವಾಭಿಮಾನ ಇಲ್ಲದ ನಾಯಕ ನಾಯಕನಲ್ಲ. ಮಂದಕೃಷ್ಣ ಮಾದಿಗ ಅವರು ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಕಾಲಿಗೆ ಬಿದ್ದು ಹೋರಾಟ ಪ್ರಾರಂಭಿಸಿದ್ದರು. ಅವರಿಗೆ ಬದ್ಧತೆಯೂ ಇಲ್ಲ. ಸಮುದಾಯ ರಾಷ್ಟ್ರೀಯ ನಾಯಕನೆಂದು ಬಿಂಬಿಸಿಕೊಂಡು ಬಿಜೆಪಿ ಪರ ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬಿಜೆಪಿಯನ್ನು ಸೋಲಿಸಲು ಸಮುದಾಯದ ಜನರು ಮುಂದಾಗಬೇಕು” ಎಂದರು.
ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ, ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪು, ಆಂಜಿನೇಯ್ಯ ಉಟ್ಕೂರು, ತಾಯಣ್ಣ ಗಧಾರ, ಶ್ರೀನಿವಾಸ ಕಲವಲದೊಡ್ಡಿ ಇದ್ದರು.
ವರದಿ : ಹಫೀಜುಲ್ಲ
