- ದೆಹಲಿಯಲ್ಲಿ 2021ರಲ್ಲಿ 99.96%ರಷ್ಟು ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಬಂದಿದೆ
- ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 63.63% ಪಿಯುಸಿ ಫಲಿತಾಂಶ ಬಂದಿದೆ
ಸರ್ಕಾರದ ಕಳಪೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯಿಂದಾಗಿ ಪಿಯುಸಿ ಮಕ್ಕಳ ಭವಿಷ್ಯವನ್ನು ಸರ್ಕಾರ ಅಂಧಕಾರಕ್ಕೆ ತಳ್ಳಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.
ಬೆಂಗಳೂರಿನ ಎಎಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಎಎಪಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, “ಕರ್ನಾಟಕದಲ್ಲಿ ಪಿಯುಸಿ ಫಲಿತಾಂಶ ಬಂದಿದೆ. ಖಾಸಗಿ ಶಾಲೆಗಳಲ್ಲಿ 76.67% ಫಲಿತಾಂಶ, ಸರ್ಕಾರಿ ಶಾಲೆಗಳಲ್ಲಿ 63.63% ಫಲಿತಾಂಶ ಬಂದಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವೆ ಹೋಲಿಕೆ ಮಾಡುವುದು ತುಂಬಾ ಅವಶ್ಯಕ. ಏಕೆಂದರೆ, ಎಎಪಿ ನಿಂತಿರುವುದೇ ಸರ್ಕಾರಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ವಿಚಾರದ ಮೇಲೆ” ಎಂದರು.
“ಕಳೆದ ಕೊವಿಡ್ ಸಮಯದಲ್ಲಿ ಎಲ್ಲ ರಾಜ್ಯದಲ್ಲೂ ಮಕ್ಕಳನ್ನ ತೇರ್ಗಡೆ ಮಾಡಲಾಗಿತ್ತು. ಆದರೆ, ದೆಹಲಿಯಲ್ಲಿ 2021ರಲ್ಲಿ 99.96% ರಷ್ಟು ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಬಂದಿದೆ. ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 63.63% ಪಿಯುಸಿ ಫಲಿತಾಂಶ ಬಂದಿದೆ” ಎಂದು ಹೇಳಿದರು.
“ದೆಹಲಿಯಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಅಂಕಗಳೇ ಹೆಚ್ಚಾಗಿವೆ. ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಮಾಡಬಹುದು. ಬೆಂಗಳೂರು ದಕ್ಷಿಣ ವಿಭಾಗದ ಸಂಸದ ‘ಪಂಚರ್ ಸೂರ್ಯ’ (ತೇಜಸ್ವಿ ಸೂರ್ಯ) ಅವರು ಈ ಹಿಂದೆ ಪಂಚರ್ ಹಾಕುವವರು ಏನ್ರಿ ಮಾಡ್ತಾರೆ ಎಂದಿದ್ದರು. ಆದರೆ, ನಿನ್ನೆ ಬಂದಿರುವ ಫಲಿತಾಂಶದಲ್ಲಿ ಅವರದೇ ಕ್ಷೇತ್ರದ ತಬಸುಮ್ ಶೇಖ್ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ. ಕನಿಷ್ಠ ಪಕ್ಷ ಅವರಿಗೆ ಮಾನವೀಯತೆ ಇದ್ದರೆ, ಅವರನ್ನ ಭೇಟಿ ಮಾಡಿ ಕ್ಷಮೆಯಾಚಿಸಿ, ಶುಭಾಷಯ ತಿಳಿಸಲಿ” ಎಂದು ಬ್ರಿಜೇಶ್ ಕಾಳಪ್ಪ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಇನ್ಮುಂದೆ ಬೆಂಗಳೂರಿನ ಆಟೋಗಳಲ್ಲಿ ‘ಸೀಟ್ ಬೆಲ್ಟ್’: ಪ್ರಯಾಣಿಕರ ಸುರಕ್ಷತೆ ಮೊದಲ ಆದ್ಯತೆ ಎಂದ ರ‍್ಯಾಪಿಡೋ
ಸುದ್ದಿಗೋಷ್ಠಿಯಲ್ಲಿ ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಹಾಗೂ ಗಂಗಾದರ್ ಭಾಗವಹಿಸಿದ್ದರು.