ಗರ್ಭಿಣಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿ, ಹತ್ಯೆ ಮಾಡಿರುವ ಅಮಾನುಷ ಘಟನೆ ನಡೆದಿದೆ. ಕಾಮಕನ್ನು ಪೊಲೀಸರು ಬಂಧಿಸಿದ್ದು, ಆತನ ಮನೆಯನ್ನು ಕೆಲ ಗ್ರಾಮಸ್ಥರು ಸುಟ್ಟು ಹಾಕಿದ್ದಾರೆ. ಆರೋಪಿ ಮನೆಯನ್ನು ನಾಶ ಮಾಡಿದ ಬಳಿಕ, ತಮ್ಮನ್ನು ಪೊಲೀಸರು ಬಂಧಿಸುತ್ತಾರೆಂದು ಹೆದರಿ ಗ್ರಾಮದ ಸುಮಾರು 20% ಪುರುಷರು ಮೇ 3ರಂಉ ಗ್ರಾಮವನ್ನೇ ತೊರೆದಿದ್ದಾರೆ.
ರಾಜಸ್ಥಾನ ದೌಸಾ ಜಿಲ್ಲೆಯ ಗ್ರಾಮವೊಂದರಲ್ಲಿ ಏಪ್ರಿಲ್ 29ರಂದು 26 ವರ್ಷದ ಗರ್ಭಿಣಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ. ಅದೇ ದಿನ, ಜಗ್ರಾಮ್ ಮೀನಾ ಎಂಬ ಅರೋಪಿಯನ್ನು ಬಂಧಿಸಿದ್ದಾರೆ. ಘಟನೆಯಿಂದಾಗಿ ಒಂದು ವಾರದಿಂದ ಗ್ರಾಮವು ಉದ್ವಿಘ್ನಗೊಂಡಿದೆ.
ಆರೋಪಿಯನ್ನು ಬಂಧಿಸಿದ ಬಳಿಕ, ಮೇ 2ರಂದು ಆತನ ಮನೆ ಬಳಿ ಗ್ರಾಮಸ್ಥರ ಗುಂಪೊಂದು ಜಮಾಯಿಸಿತ್ತು. ಆ ವೇಳೆಗಾಗಲೇ ಆರೋಪಿಯ ಸಂಬಂಧಿಗಳು ಮನೆ ತೊರೆದು ಹೊರಟು ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ್ದನ್ನು ಕಂಡ ಗುಂಪು, ಆರೋಪಿಯ ಮನೆ ಮತ್ತು ಆತನ ಕುಟುಂಬಕ್ಕೆ ಸಂಬಂಧಿಸಿದ್ದ ಅಕ್ಕ-ಪಕ್ಕದ ಎರಡು ಮನೆಗಳನ್ನು ಸುಟ್ಟು ಹಾಕಿದ್ದಾರೆ.
ಬೆಂಕಿ ಹಚ್ಚಿದ ಘಟನೆಯಲ್ಲಿ ಸುಮಾರು 7 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ, ಬಂಧನ ಭೀತಿಯಲ್ಲಿ ಹಲವಾರು ಮಂದಿ ಊರು ತೊರೆದಿದ್ದಾರೆ.
ಗ್ರಾಮಸ್ಥರು ಊರು ತೊರೆದ ಮೂರು ದಿನಗಳ ಬಳಿಕ, ರಾಜಸ್ಥಾನದ ಸಚಿವ ಕಿರೋಡಿ ಲಾಲ್ ಮೀನಾ ಅವರು “ಗ್ರಾಮವನ್ನು ತೊರೆದಿರುವ ಯಾವುದೇ ಅಮಾಯಕರನ್ನು ಬಂಧಿಸುವುದಿಲ್ಲ. ತಪ್ಪಿತಸ್ಥರಿಗೆ ಮಾತ್ರವೇ ಶಿಕ್ಷೆಯಾಗಬೇಕು. ಅಮಾಕರಿಗೆ ತೊಂದರೆ ನೀಡುವುದಿಲ್ಲ” ಎಂದು ಭರವಸೆ ನೀಡಿದ್ದು, ಇದೀಗ, ಹಲವಾರು ಮಂದಿ ಪುರುಷರು ಗ್ರಾಮಕ್ಕೆ ಮರಳುತ್ತಿದ್ದಾರೆ.
“ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ, ಗ್ರಾಮದ ಗುಂಪೊಂದು ಕಾನೂನನ್ನು ತನ್ನ ಕೈಗೆ ತೆಗೆದುಕೊಂಡಿದ್ದು, ಮನೆಗಳನ್ನು ಸುಟ್ಟುಹಾಕಿತು. ಗುಂಪಿನಲ್ಲಿದ್ದ ಸುಮಾರು ಏಳು ಮಂದಿ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಅವರು ಆಸ್ಪತ್ರೆಯಲ್ಲಿದ್ದಾರೆ” ಎಂದು ದೌಸಾ ಸಹಾಯಕ ಪೊಲೀಸ್ ಅಧೀಕ್ಷಕ ದಿನೇಶ್ ಅಗರ್ವಾಲ್ ತಿಳಿಸಿದ್ದಾರೆ.