- ನಾನು ಸ್ಪರ್ಧಿಸಲು ಹೋದಲೆಲ್ಲ ಬಿ ಎಲ್ ಸಂತೋಷ್ ಬರುತ್ತಾರೆ
- ವರುಣ ಕ್ಷೇತ್ರದ ಜನ ದ್ವೇಷ ರಾಜಕಾರಣವನ್ನು ಸಹಿಸುವುದಿಲ್ಲ
ನನ್ನನ್ನು ಸೋಲಿಸಲು ಹೊರಟಿರುವುದು ಬಿಜೆಪಿಯಲ್ಲ, ಆರ್ಎಸ್ಎಸ್ನ ಬಿ ಎಲ್ ಸಂತೋಷ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವರುಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ವರುಣಗೆ ಸೋಮಣ್ಣರನ್ನ ಕರೆ ತಂದು ನಿಲ್ಲಿಸಿದ್ದೇ ಬಿ ಎಲ್ ಸಂತೋಷ್. ಸಂತೋಷ್ಗೆ ನಾನು ಸೋಲಬೇಕೆಂಬ ಆಸೆ. ಅದಕ್ಕಾಗಿ ನಾನು ಹೋದಲೆಲ್ಲಾ ಬೆನ್ನು ಬೀಳುತ್ತಿದ್ದಾರೆ ಎಂದರು.
ಸಂತೋಷ್ ಪಕ್ಕಾ ಆರ್ಎಸ್ಎಸ್ ನವರು. ನಾನು ಕೋಲಾರದಲ್ಲಿ ಸ್ಪರ್ಧಿಸುತ್ತೇನೆ ಎಂದಾಗ ಅಲ್ಲಿಗೂ ಬಂದಿದ್ದರು. ಈಗ ವರುಣ ಕ್ಷೇತ್ರಕ್ಕೆ ಬಂದು ನನ್ನ ವಿರುದ್ದ ಕೆಲಸ ಮಾಡುತ್ತಿದ್ದಾರೆ. ನನ್ನನ್ನ ಸೋಲಿಸಬೇಕೆಂದು ಕೆಲಸ ಮಾಡುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ, ಬಿ ಎಲ್ ಸಂತೋಷ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅದರೆ ಇವರು ಯಾರೂ ವರುಣ ಕ್ಷೇತ್ರದ ಮತದಾರರಲ್ಲ. ಇವರ ಮಾತಿಗೆ ನಮ್ಮೂರ ಜನ ಕಿವಿಗೊಡುವುದಿಲ್ಲ.
ಈ ಸುದ್ದಿ ಓದಿದ್ದೀರಾ? :ನಮ್ಮ ಕುಟುಂಬ ಯಾವತ್ತೂ ಪ್ರಚಾರಕ್ಕೆ ಬಂದಿಲ್ಲ, ನಮಗೆ ಸೋಲಿನ ಭಯವಿಲ್ಲ: ಯತೀಂದ್ರ
ನನ್ನನ್ನ ಗೆಲ್ಲಿಸುವುದು ವರುಣ ಕ್ಷೇತ್ರದ ಮತದಾರರು. ನನ್ನ ಕ್ಷೇತ್ರದ ಮತದಾರರು ದ್ವೇಷದ ರಾಜಕಾರಣವನ್ನು ಒಪ್ಪಲ್ಲ ಹಾಗೂ ಮಾಡಲ್ಲ. ಅವರು 1 ಲಕ್ಷಗಳ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಯಾವನ್ ರೀ ಅವನು ಪ್ರತಾಪ್ ಸಿಂಹ, ಇಲ್ಲಿ ಯಾಕೆ ಬಂದು ಪ್ರಚಾರ ಮಾಡುತ್ತಿದ್ದಾರೆ. ಇದು ಚಾಮರಾಜನಗರ ಲೋಕಸಭಾ ಕ್ಷೇತ್ರ. ಅವನು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲಿ ಅವನಿಗೆ ಸೋಲಿನ ಭಯ ಶುರುವಾಗಿದೆ. ಹೀಗಾಗಿ ಇಲ್ಲಿಗೆ ಬಂದು ಓಡಾಡುತ್ತಿದ್ದಾನೆ ಎಂದರು.