ದಿನನಿತ್ಯ ಜನರು ಬಳಸುವ ವಸ್ತುಗಳನ್ನು ಗುರಿಯಾಗಿಟ್ಟುಕೊಂಡು ಪ್ರತಿಷ್ಠಿತ ಕಂಪನಿಗಳ ಹೆಸರು ಹಾಕಿ ಕಳೆದ ಐದು ವರ್ಷಗಳಿಂದ ನಕಲಿ ವಸ್ತುಗಳನ್ನು ತಯಾರು ಮಾಡುತ್ತಿದ್ದ ಗ್ಯಾಂಗ್‌ವೊಂದು ಸಿಸಿಬಿ ಬಲೆಗೆ ಬಿದ್ದಿದೆ.
ಶಿವಪಾಟೀಲ್, ದೌಲತ್ ಸಿಂಗ್ ಹಾಗೂ ಶುಬಂ ಬಂಧಿತ ಆರೋಪಿಗಳು. ಈ ಗ್ಯಾಂಗ್ ಕಳೆದ ಐದು ವರ್ಷದಿಂದ ಪ್ರತಿಷ್ಠಿತ ಕಂಪನಿಗಳ ಹೆಸರು ಬಳಸಿಕೊಂಡು ನಕಲಿ ವಸ್ತುಗಳ ಮಾರಾಟ ಮಾಡುತ್ತಿತ್ತು.
ನಕಲಿ ವಸ್ತು ತಯಾರಿಸುತ್ತಿದ್ದವರ ಬಗ್ಗೆ ಮಾಹಿತಿ ಪಡೆದ ಪ್ರತಿಷ್ಠಿತ ಕಂಪನಿಗಳಾದ ಹಿಂದೂಸ್ಥಾನ್ ಯುನಿಲಿವರ್ ಲಿಮಿಟೆಡ್ ಹಾಗೂ ರೆಕಿಟ್ ಬೆಂಕಿಸರ್ ಇಂಡಿಯಾ ಲಿಮಿಟೆಡ್ ಕಂಪನಿಗಳ ಅಧಿಕೃತ ಪ್ರತಿನಿಧಿಗಳು ಸಿಸಿಬಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆ ಕೈಗೊಂಡ ಸಿಸಿಬಿ ನಕಲಿ ಜಾಲವನ್ನು ಭೇದಿಸಿದೆ.
ಸರ್ಪ್ ಎಕ್ಸೆಲ್, ವಿಮ್ ಲಿಕ್ವಡ್, ಲೈಫ್ ಬಾಯ್ ಹ್ಯಾಂಡ್ ವಾಶ್, ರಿನ್, ವೀಲ್ ಡಿಟರ್ಜಂಟ್ ಪೌಡರ್, ರೆಡ್ ಲೇಬಲ್ ಟಿ ಪೌಡರ್, ಲೈಜಾಲ್, ಹಾರ್ಪಿಕ್ ಸೇರಿದಂತೆ ಹಲವು ಉತ್ಪನ್ನಗಳ ನಕಲಿ ವಸ್ತುಗಳನ್ನು ಇರಿಸಲಾಗಿದ್ದ ವಿಲ್ಸನ್ ಗಾರ್ಡನ್‌ನ ಗೋಡಾನ್ ಹಾಗೂ ಇದನ್ನು ತಯಾರಿಸುತಿದ್ದ ಆವಲಹಳ್ಳಿ ಬಳಿಯ ರಾಮಪುರ ಮತ್ತು ಬಿದರಹಳ್ಳಿಯ ಫ್ಯಾಕ್ಟರಿಗಳಿಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಕಲಿ ತಯಾರಿಕಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ ₹95 ಲಕ್ಷ ಮೌಲ್ಯದ ನಕಲಿ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಬಂಧಿತ ಆರೋಪಿಗಳು ಉತ್ತರ ಭಾರತದವರು. ಕಳೆದ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಇವರು ನಕಲಿ ವಸ್ತುಗಳನ್ನು ತಯಾರು ಮಾಡುವಲ್ಲಿ ಕುಖ್ಯಾತಿ ಹೊಂದಿದ್ದ ಎನ್ನಲಾದ ಮಹೇಶ್ ಗಾಂಧಿ ಎಂಬಾತನ ಬಳಿ ಕೆಲವು ವರ್ಷ ಕೆಲಸ ಮಾಡಿದ್ದಾರೆ.
ಈ ಸಮಯದಲ್ಲಿ ಬ್ರಾಂಡ್ ಹೆಸರಿನ ವಸ್ತುಗಳನ್ನು ನಕಲು ಮಾಡಿ ಮಾರಾಟ ಮಾಡುವ ಬಗ್ಗೆ ಕಲಿತ ಆರೋಪಿಗಳು ನಂತರದ ದಿನಗಳಲ್ಲಿ ತಮ್ಮದೇ ಆದ ವ್ಯವಸ್ಥಿತ ಜಾಲ ತೆರೆದಿದ್ದಾರೆ. ದಿನಕಳೆದಂತೆ ಇವರು ರಾಜ್ಯ ಸೇರಿದಂತೆ ಹಲವೆಡೆ ತಮ್ಮದೇ ಜಾಲ ರೂಪಿಸಿಕೊಂಡು ವ್ಯವಹಾರ ಆರಂಭ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ : ಅಪರಿಚಿತ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲು
ಬಂಧಿತ ಆರೋಪಿಗಳ ಪೈಕಿ ಶಿವ ಪಾಟೀಲ್ ನಕಲಿ ವಸ್ತುಗಳನ್ನು ತಯಾರಿ ಮಾಡುತ್ತಿದ್ದನು. ಮತ್ತೋರ್ವ ಆರೋಪಿ ದೌಲತ್ ಸಿಂಗ್ ಅದರ ಡಿಸ್ಟ್ರಿಬ್ಯೂಟಿಂಗ್ ಬಗ್ಗೆ ನೋಡಿಕೊಳ್ಳುತ್ತಿದ್ದನು. ಕಳೆದ ಐದು ವರ್ಷದಿಂದ ಬಂಧಿತ ಆರೋಪಿಗಳು ಈ ಕೃತ್ಯ ನಡೆಸುತ್ತಿದ್ದಾರೆ.