ಖಾಸಗಿಯವರೆಗೆ ನೀಡಿರುವ ಗುತ್ತಿಗೆಗಳನ್ನು ಕಾರಣಗಳನ್ನು ನೀಡದೆ ರದ್ದುಗೊಳಿಸಬಾರದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕಲ್ಕತ್ತಾ ಹೈಕೋರ್ಟ್ ನೀಡಿದ ಆದೇಶದ ವಿರುದ್ಧದ ತೀರ್ಪನ್ನು ಕಾಯ್ದಿರಿಸಿದೆ.
ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠವು, ಒಪ್ಪಂದ ಪಡೆದ ನಂತರ ಬಂಡವಾಳಗಳನ್ನು ಹೂಡುವವರು ರದ್ದುಗೊಳ್ಳುವಾಗ ಸಮಂಜಸವಾದ ಕಾರಣಗಳನ್ನು ನಿರೀಕ್ಷಿಸುತ್ತಾರೆ ಎಂದು ತಿಳಿಸಿತು.
“ಹೇಗೆ ಯಾವುದೇ ಕಾರಣವಿಲ್ಲದೆ ಒಪ್ಪಂದಗಳನ್ನು ರದ್ದುಗೊಳಿಸುತ್ತೀರಿ? ಒಬ್ಬ ಖಾಸಗಿ ವ್ಯಕ್ತಿಯು ಒಪ್ಪಂದದ ಅನುಸಾರವಾಗಿ ಗುತ್ತಿಗೆ ಪಡೆದಿರುತ್ತಾನೆ” ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
ಪ್ರಕರಣದ ವಾಸ್ತವಗಳನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು, ಕಾರಣಗಳನ್ನು ನೀಡದೆ ಗುತ್ತಿಗೆಗಳನ್ನು ರದ್ದುಗೊಳಿಸಬಾರದು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ
ಮೇ 25, 2023 ರಂದು ಏಕ ಸದಸ್ಯತ್ವದ ಕಲ್ಕತ್ತಾ ಹೈಕೋರ್ಟ್ ಪೀಠ ಕಂಪನಿಯೊಂದಕ್ಕೆ ಯಾವುದೇ ಕಾರಣ ನೀಡದೆ ಒಪ್ಪಂದವನ್ನು ರದ್ದುಗೊಳಿಸಿದ್ದನ್ನು ಎತ್ತಿಹಿಡಿದಿತ್ತು.
ಒಪ್ಪಂದ ಪಡೆದಿದ್ದ ಕಂಪನಿಯು ಕೋಲ್ಕತ್ತಾದ ಪಶ್ಚಿಮ ನಗರದ ಬೈಪಾಸ್ ಕೆಳರಸ್ತೆಗಳನ್ನು ನಿರ್ವಹಿಸಲು ಹತ್ತು ವರ್ಷಗಳವರೆಗೆ ಗುತ್ತಿಗೆ ಪಡೆದುಕೊಂಡಿತ್ತು. ಒಪ್ಪಂದದಂತೆ ಕಂಪನಿಗೆ ಕೆಳರಸ್ತೆಯ ಎರಡು ಭಾಗಗಳಲ್ಲಿ ಜಾಹೀರಾತು ನೀಡಲು ಅನುಮೋದಿಸಲಾಗಿತ್ತು. ಇದಕ್ಕಾಗಿ ಕೆಲ ಕಾಮಗಾರಿ ಕೆಲಸವನ್ನು ನಿರ್ವಹಿಸುವುದು ಅಗತ್ಯವಾಗಿತ್ತು.
ಆದಾಗ್ಯೂ, ಕೋಲ್ಕತ್ತಾ ಮಹಾನಗರ ಅಭಿವೃದ್ಧಿ ಪ್ರಾಧಿಕಾರ(ಕೆಎಂಡಿಎ) ಫೆ.7,2023 ರಂದು ಒಪ್ಪಂದವನ್ನು ರದ್ದುಗೊಳಿಸಿತ್ತು. ಅಲ್ಲದೆ ಇಲ್ಲಿಯವರೆಗೂ ಕಾಮಗಾರಿ ಹಾಗೂ ನಿರ್ವಹಣೆಗಾಗಿ ವೆಚ್ಚ ಮಾಡಿದ್ದ ಹಣ ಹಾಗೂ ಠೇವಣಿಯಿಟ್ಟಿದ್ದ ಪರವಾನಗಿ ಶುಲ್ಕವನ್ನು ಹಿಂತಿರುಗಿಸುವುದಾಗಿ ಕೆಎಂಡಿಎ ತಿಳಿಸಿತ್ತು.
ಕೆಎಂಡಿಎ ಕಾರಣ ತಿಳಿಸದೆ ಒಪ್ಪಂದವನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು.
