2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಮಾರ್ಚ್ 9ರಂದು ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷೆ ಎನ್. ಮಂಜು ಶ್ರೀ, ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲ ಕೃಷ್ಣ ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರದ್ದೇ ಮೈಲುಗೈಯಾಗಿದೆ. ಈ ಬಾರಿ 4,41,910 ವಿದ್ಯಾರ್ಥಿಗಳು, 4,28,058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. 2,87,416 ಮಂದಿ ಬಾಲಕರು ತೇರ್ಗಡೆಯಾಗಿದ್ದು, ತೇರ್ಗಡೆ ಪ್ರಮಾಣ ಶೇ. 65.90 ಇದೆ. 3,43,788 ಬಾಲಕಿಯರು ತೇರ್ಗಡೆಯಾಗಿದ್ದು, ತೇರ್ಗಡೆ ಪ್ರಮಾಣ ಶೇ 81.11 ಇದೆ. ಈ ಬಾರಿ 73.40 % ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
ಈ ಬಾರಿಯ ಫಲಿತಾಂಶ ಪ್ರಮಾಣ ಶೇ. 73.4 ಆಗಿದ್ದು, ಕಳೆದ ಬಾರಿಗಿಂತ ಶೇ. 10ರಷ್ಟು ಕಡಿಮೆ ಆಗಿದೆ. ಕಳೆದ ವರ್ಷ ಶೇ. 83.89ರಷ್ಟು ಫಲಿತಾಂಶ ದಾಖಲಾಗಿತ್ತು.
ಉಡುಪಿ ಜಿಲ್ಲೆಯಲ್ಲಿ ಶೇ.94ರಷ್ಟು ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ 92.12, ಶಿವಮೊಗ್ಗ ಜಿಲ್ಲೆ ಶೇ. 88.67, ಕೊಡಗು ಜಿಲ್ಲೆ ಶೇ.88.67 ರ ಫಲಿತಾಂಶ ದಾಖಲಿಸಿವೆ. ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ದೊರೆತಿದೆ. ಯಾದಗಿರಿ ಜಿಲ್ಲೆಯಲ್ಲಿ ತೇರ್ಗಡೆ ಪ್ರಮಾಣ ಶೇ 50.59 ದಾಖಲಾಗಿದೆ.
ಈ ಬಾರಿ ಒಟ್ಟು 638204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ 287416 ಬಾಲಕರು ಹಾಗೂ 343788 ಬಾಲಕಿಯರು ಪಾಸ್ ಆಗಿದ್ದಾರೆ. ವಿದ್ಯಾರ್ಥಿಯ ನೋಂದಾಯಿತ ಮೊಬೈಲ್ ನಂಬರ್ಗೂ ಸಹ ಫಲಿತಾಂಶದ ವಿವರದ ಎಸ್ಎಂಎಸ್ ಕಳುಹಿಸಲಾಗುವುದು ಎಂದು ಮಂಜುಶ್ರೀ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ಕೂಡ ವೀಕ್ಷಿಸಬಹುದಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು 625ಕ್ಕೆ 625 ಅಂಕಗಳನ್ನು ಪಡೆದು ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಬೆಂಗಳೂರಿನ ಬನಶಂಕರಿಯ ಹೋಲಿ ಚೈಲ್ಡ್ ಇಂಗ್ಲೀಷ್ ಪ್ರೌಢಶಾಲೆಯ ಮೇಧಾ ಶೆಟ್ಟಿ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.
ತುಮಕೂರಿನ ಶಿರಾದ ಶ್ರೀವಾಸವಿ ಇಂಗ್ಲೀಷ್ ಪ್ರೌಢಶಾಲೆಯ ಹರ್ಷಿತಾ ಡಿಎಂ 624 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.
ತೇರ್ಗಡೆ ಪ್ರಮಾಣ?
ದಕ್ಷಿಣ ಕನ್ನಡ ಜಿಲ್ಲೆ ಶೇ. 92.12, ಶಿವಮೊಗ್ಗ ಜಿಲ್ಲೆ ಶೇ. 88.67, ಕೊಡಗು ಜಿಲ್ಲೆ ಶೇ. 88.67ರ ಫಲಿತಾಂಶ ದಾಖಲಿಸಿವೆ. ಉತ್ತರ ಕನ್ನಡ 86.54%, ಹಾಸನ 86.28%, ಮೈಸೂರು 85.5%, ಶಿರಸಿ 84.64%, ಬೆಂಗಳೂರು ಗ್ರಾ. 83.67%, ಚಿಕ್ಕಮಗಳೂರು 83.39%, ವಿಜಯಪುರ 79.82%, ಬೆಂಗಳೂರು ದಕ್ಷಿಣ 79%, ಬಾಗಲಕೋಟೆ 77.92%, ಬೆಂಗಳೂರು ಉತ್ತರ 77.09%, ಹಾವೇರಿ 75.85%, ತುಮಕೂರು 75.16%, ಗದಗ 74.76%, ಚಿಕ್ಕಬಳ್ಳಾಪುರ 73.61%, ಮಂಡ್ಯ 73.59%, ಕೋಲಾರ 73.57%, ಚಿತ್ರದುರ್ಗ 72.85%, ಧಾರವಾಡ 72.67%, ದಾವಣಗೆರೆ 72.49%, ಚಾಮರಾಜನಗರ 71.59%, ಚಿಕ್ಕೋಡಿ 69.82%, ರಾಮನಗರ 69.53%, ವಿಜಯನಗರ 65.61%, ಬಳ್ಳಾರಿ 64.99%, ಬೆಳಗಾವಿ 64.93%, ಮಧುಗಿರಿ 62.44%, ರಾಯಚೂರು 61.2%, ಕೊಪ್ಪಳ 61.16%, ಬೀದರ್ 57.52%, ಕಲಬುರಗಿ 53.04% ಫಲಿತಾಂಶ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮುಂದುವರೆದ ಮಳೆ : ವಾಹನ ಸಂಚಾರ ಅಸ್ತವ್ಯಸ್ತ
2023 – 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು, 4.28 ಲಕ್ಷ ಬಾಲಕಿಯರು ಪರೀಕ್ಷೆ ಎದುರಿಸಿದ್ದರು.
2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪರೀಕ್ಷೆ-1, ಪರೀಕ್ಷೆ-2, ಪರೀಕ್ಷೆ-3 ಎಂದು ನಡೆಸಲಾಗುತ್ತಿದೆ. ಈಗ ಪರೀಕ್ಷೆ-1ರ ಫಲಿತಾಂಶ ಹೊರಬಿದಿದ್ದೆ. ಮೊದಲ ಪರೀಕ್ಷೆಯಲ್ಲಿ ಫೇಲ್ ಆದರೂ, ಎರಡು ಮತ್ತು ಮೂರನೇ ಪರೀಕ್ಷೆಯನ್ನು ಬರೆಯಬಹುದು. ಒಂದು ವೇಳೆ ಕಡಿಮೆ ಅಂಕ ಬಂದರೂ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಈ ಮೂರು ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದದನ್ನು ಪಡೆಯಬಹುದು.