ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಆದರೂ, ಅಬಕಾರಿ ಇಲಾಖೆಯ ಅಧಿಕಾರಿಗಳು ಮಾರಾಟ ಮಾಡುವವರ ವಿರುದ್ದ ಕಡಿವಾಣ ಹಾಕದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಪ್ರತಿ ಗ್ರಾಮಗಳಲ್ಲಿ 24 ಗಂಟೆಯೂ ಆಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕೆಲವು ಬಾರ್‌ಗಳಲ್ಲಿಯೂ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಮದ್ಯ ಸಾಗಾಟ ನಡೆಯುತ್ತಿದೆ. ಆದರೆ, ಅಧಿಕಾರಿಗಳು ಬೇಜಬ್ದಾರಿತನದಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ ಎಂದು ಸಾರ್ವರ್ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಗ್ರಾಮಗಳಲ್ಲಿ ಮಧ್ಯ ಮಾರಾಟ ಮಾಡುವುದರಿಂದ ಯುವಕರು ಕುಡಿತದ ಚಟಕ್ಕೆ ಮಾರುಹೋಗಿ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಅಲ್ಲದೆ, ಹಲವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರಾಟ ಮಾಡುವವರ ವಿರುದ್ಧ ಕಡಿವಾಣ ಹಾಕಿ ಸೂಕ್ತ ಕ್ರಮ ಜರುಗಿಸಬೇಕು” ಎಂದು ಜಕ್ಕಲಿ ಗ್ರಾಮಸ್ಥರು ಅಗ್ರಹಿಸಿದ್ದಾರೆ.
“ಪರವಾನಿಗೆ ಪಡೆಯದೇ ಕೆಲ ಗ್ರಾಮೀಣ ಭಾಗದಲ್ಲಿ ಬಾರ್‌ಗಳು ನಾಯಿಕೊಡೆಯಂತೆ ತೆಲೆ ಎತ್ತಿವೆ. ಅಕ್ರಮ ಮದ್ಯ ಮಾರಾಟ ಅಂಗಡಿಗಳಿಗೆ ಮದ್ಯ ಸರಬರಾಜು ಮಾಡಲಾಗುತ್ತಿದೆ” ಎಂದು ಗ್ರಾಮದ ಜನರು ದೂರಿದ್ದಾರೆ.
“ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಧಿಕಾರಿಗಳು ಕಾಟಾಚಾರಕ್ಕೆ ಅಲ್ಲಲ್ಲಿ ದಾಳಿ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ ಕೇವಲ ಬೆರಳೆಣಿಕೆಯನ್ನು ಪ್ರಕರಣಗಳು ಮಾತ್ರ ದಾಖಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ಅಂದಪ್ಪ ಮಾದರ, ಮೀಡಿಯಾ ವಾಲಂಟಿಯರ್