ಹರಿಯಾಣ ದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಮಾಜಿ ಮೈತ್ರಿ ಪಕ್ಷ ಜನನಾಯಕ ಜನತಾ ಪಕ್ಷದ(ಜೆಜೆಪಿ) ಅಧ್ಯಕ್ಷರಾದ ದುಷ್ಯಂತ್ ಚೌತಾಲಾ ಅವರು ವಿದಾನಸಭೆಯಲ್ಲಿ ಸರ್ಕಾರಕ್ಕೆ ವಿಶ್ವಾಸಮತ ಕರೆಯುವಂತೆ ರಾಜ್ಯಪಾಲರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಮೈತ್ರಿ ಪಕ್ಷಕ್ಕೆ ಮೂವರು ಪಕ್ಷೇತರರು ಬೆಂಬಲ ವಾಪಸ್ ಪಡೆದ ನಂತರ ಮತ್ತೊಂದು ರಾಜಕೀಯ ಬೆಳವಣಿಗೆ ನಡೆದಿದೆ.
ಹರಿಯಾಣದ ರಾಜ್ಯಪಾಲರಾದ ಬಂಡಾರು ದತ್ತಾತ್ರೆಯ ಅವರಿಗೆ ಪತ್ರ ಬರೆದಿರುವ ದುಶ್ಯಂತ್ ಚೌತಾಲಾ,ಬಿಜೆಪಿ ಆಡಳಿತಾರೂಢ ಪಕ್ಷಕ್ಕೆ ಮೂವರು ಪಕ್ಷೇತರರು ರಾಜೀನಾಮೆ ನೀಡಿದ ನಂತರ ಸರ್ಕಾರ ಬಹುಮತ ಕಳೆದುಕೊಂಡಿದೆ. ತಕ್ಷಣವೇ ಸೂಕ್ತ ನಿರ್ಧಾರ ತೆಗೆದುಕೊಂಡು ಬಹುಮತ ಸಾಬೀತು ಪಡಿಸಲು ವಿಶ್ವಾಸಮತ ಪರೀಕ್ಷೆಗೆ ಸರ್ಕಾರಕ್ಕೆ ನಿರ್ದೇಶಿಸುವಂತೆ ನಾನು ನಿಮಗೆ ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
“ನಯಾಬ್ ಸಿಂಗ್ ಸೈನಿ ಅವರ ನೇತೃತ್ವದಲ್ಲಿ ಮೂರು ತಿಂಗಳ ಹಿಂದೆ ರಚನೆಯಾಗಿದ್ದ ನೂತನ ಸರ್ಕಾರಕ್ಕೆ ಇತ್ತೀಚಿಗೆ ಮೂವರು ಪಕ್ಷೇತರರು ಬೆಂಬಲ ಹಿಂಪಡೆದು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಮೂವರು ಪಕ್ಷೇತರರು ಬೆಂಬಲ ವಾಪಸ್ ಪಡೆದುಕೊಂಡಿರುವ ಬಗ್ಗೆ ರಾಜ್ಯಪಾಲರಿಗೆ ಪತ್ರ ಕೂಡ ಬರೆದಿದ್ದಾರೆ. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದರೆ ನಮ್ಮ ಜೆಜೆಪಿ ಪಕ್ಷ ಬೆಂಬಲ ನೀಡಲಿದೆ” ಎಂದು ಚೌತಾಲಾ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಕಾಶ್ ಆನಂದ್ ಗೆ ಅರ್ಧಚಂದ್ರ ಪ್ರಯೋಗ- ಮಾಯಾವತಿಯವರ ಹಿಂದೆ ಕೆಲಸ ಮಾಡಿರುವ ಶಕ್ತಿಗಳು ಯಾವುವು?
“ ನಾವು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಕಾಂಗ್ರೆಸ್ ಕೂಡ ವಿಶ್ವಾಸ ಮತಕ್ಕೆ ಸರ್ಕಾರದ ವಿರುದ್ಧ ಆಗ್ರಹಿಸಬೇಕಿದೆ. ರಾಜ್ಯಪಾಲರು ವಿಶ್ವಾಸಮತ ಕರೆಯಲು ಅಧಿಕಾರ ಹೊಂದಿದ್ದು, ಒಂದು ವೇಳೆ ಸರ್ಕಾರಕ್ಕೆ ಬಹುಮತವಿಲ್ಲದಿದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು” ಆಗ್ರಹಿಸಿದ್ದಾರೆ
ಮೂವರು ಪಕ್ಷೇತರ ಶಾಸಕರಾದ ಸೋಬೀರ್ ಸಂಗ್ವಾನ್, ರಣಧೀರ್ ಸಿಂಗ್ ಗೊಲ್ಲೇನ್ ಹಾಗೂ ಧರ್ಮಪಾಲ್ ಗೊಡೇರ್ ಬಿಜೆಪಿ ಸರ್ಕಾರದಿಂದ ತಮ್ಮ ಬೆಂಬಲ ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿದರು.
ಒಟ್ಟು 90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ ಪ್ರಸ್ತುತ 88 ಸದಸ್ಯರಿದ್ದಾರೆ. ಬಹುಮತ ಸಂಖ್ಯೆಗೆ 45 ಸದಸ್ಯರ ಬೆಂಬಲ ಬೇಕು. ಆಡಳಿತರೂಢ ಬಿಜೆಪಿ ಸರ್ಕಾರ 40 ಬಿಜೆಪಿ ಶಾಸಕರೊಂದಿಗೆ 6 ಪಕ್ಷೇತರ ಶಾಸಕರಿದ್ದರು. ಈಗ ಮೂವರು ಪಕ್ಷೇತರ ಶಾಸಕರು ರಾಜೀನಾಮೆ ನೀಡಿರುವುದರಿಂದ ಸರ್ಕಾರದ ಸಂಖ್ಯಾಬಲ 43ಕ್ಕೆ ಕುಸಿದಿದೆ. ವಿಪಕ್ಷ ಕಾಂಗ್ರೆಸ್‌ನ 30 ಶಾಸಕರು ಹಾಗೂ ಮೂವರು ಪಕ್ಷೇತರ ಶಾಸಕರ ಬೆಂಬಲ ಹೊಂದಿದೆ.
ಬಿಜೆಪಿ ಮೈತ್ರಿಯಿಂದ ಹೊರ ಬಂದು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ ಎಂದಿರುವ ಜೆಜೆಪಿ 10 ಶಾಸಕರನ್ನು ಹೊಂದಿದೆ. ಈ ಸಂಖ್ಯಾಬಲವನ್ನು ಕೂಡಿದರೆ ಒಟ್ಟು ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 43 ಆಗಲಿದೆ. ಮ್ಯಾಜಿಕ್ ಸಂಖ್ಯೆ ಪಡೆಯಲು ಇವರಿಗೂ ಇಬ್ಬರು ಶಾಸಕರ ಕೊರತೆ ಎದುರಾಗಲಿದೆ. ಇನ್ನುಳಿದಂತೆ ಐಎನ್ಎಲ್‌ಡಿ ಹಾಗೂ ಹೆಚ್ಎಲ್‌ಪಿ ಪಕ್ಷದ ಇಬ್ಬರು ಶಾಸಕರಿದ್ದಾರೆ.
