ಕರಾವಳಿಯ ಅಪ್ಪಟ ಸೆಕ್ಯೂಲರ್ ಧ್ವನಿ, ನೇರ ನಡೆ ನುಡಿಯ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ (79 ವರ್ಷ) ನಮ್ಮನ್ನು ಅಗಲಿದ್ದಾರೆ.
ಆರಂಭದಿಂದ ಇತ್ತೀಚಿನವರೆಗೂ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಜನರ ಪರವಾಗಿ ನಿಂತು ಹೋರಾಟ ಮಾಡುತ್ತಿದ್ದ ವಸಂತ ಬಂಗೇರ ಅವರು ಪ್ರಾಮಾಣಿಕ ಹಾಗೂ ನೇರ ನಿಷ್ಠುರ ನಡೆಯ ರಾಜಕಾರಣ ಮಾಡಿದವರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಜನಸಾಮಾನ್ಯರ ನಡುವೆ ರಾಜಕಾರಣಿಯೊಬ್ಬರ ಬಗ್ಗೆ ದಂತ ಕತೆಗಳು ಸೃಷ್ಟಿಯಾಗಿದ್ದರೆ ಅದು ವಸಂತ ಬಂಗೇರ ಅವರ ಬಗ್ಗೆ ಮಾತ್ರ. ಬಂಗೇರ ಅವರ ಸಿಟ್ಟು, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಸುವ ಛಾತಿ, ಅಧಿಕಾರಿಗಳನ್ನು ಮೇಲೆ ಕೆಳಗೆ ಮಾಡುವ ಅವರ ತಾಕತ್ತು, ಬಡವರ ಬಗೆಗಿನ ಕಾಳಜಿ, ಬಂಗೇರ ಅವರ ಮಾನವೀಯ ಮೌಲ್ಯದ ಗುಣಗಳ ಬಗ್ಗೆ ಎಲ್ಲರ ಬಾಯಲ್ಲೂ ನೂರಾರು ದಂತ ಕಥೆಗಳಿವೆ. ಅವು ಕೇವಲ ಕಥೆಗಳಲ್ಲ, ಎಲ್ಲರೂ ಕಂಡುಕೊಂಡ ಸತ್ಯ.
ಬೆಳ್ತಂಗಡಿಯ ಕೇದೆ ಗುತ್ತು ಮನೆತನದ ಸುಬ್ಬ ಪೂಜಾರಿ ಮತ್ತು ದೇವಕಿ ಪೂಜಾರ್ತಿ ದಂಪತಿಯ ಹಿರಿಯ ಮಗ ವಸಂತ ಬಂಗೇರ. ಅವರ ಸಹೋದರರು ಪ್ರಭಾಕರ ಬಂಗೇರಾ ಮತ್ತು ಚಿದಾನಂದ ಬಂಗೇರರು. ಮೂರು ಮಂದಿ ಸಹೋದರರೂ ಕೂಡ ಶಾಸಕರಾದವರು. ಈ ರೀತಿಯಲ್ಲಿ ಅಣ್ಣ ತಮ್ಮಂದಿರೆಲ್ಲಾ ವಿಧಾನಸೌಧದ ಮೆಟ್ಟಿಲು ಹತ್ತಿದ್ದು ಕೂಡ ಕರಾವಳಿಯಲ್ಲಿ ಅಪರೂಪದ ನಿದರ್ಶನವೇ ಸರಿ.
1983ರಲ್ಲಿ ಬಿಜೆಪಿಯಲ್ಲಿ ಮೊದಲ ಬಾರಿಗೆ ಗೆದ್ದ ವಸಂತ ಬಂಗೇರರು ಅಂದು ವಿಧಾನಸೌಧದಲ್ಲಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಾಥ್ ನೀಡಿದ್ದರು. ಮುಂದೆ 1989 ಹಾಗೂ 1999ರಲ್ಲಿ ಜನತಾ ದಳ ಹಾಗೂ 2008ರಲ್ಲಿ ಮತ್ತು 2013ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು ಎಂಎಲ್‌ಎ ಆದವರು. ಈ ರೀತಿಯಲ್ಲಿ ಕರಾವಳಿ ಭಾಗದಲ್ಲಿ ಒಬ್ಬರೇ ವ್ಯಕ್ತಿ ಮೂರು ಪಕ್ಷಗಳ ಮೂಲಕ ಗೆದ್ದು ವಿಧಾನಸೌಧ ಪ್ರವೇಶಿಸಿದ ದಾಖಲೆ ಕೂಡ ಬಂಗೇರ ಅವರದ್ದು ಮಾತ್ರ.
ಉಡುಪಿ ಲೋಕಸಭಾ ಕ್ಷೇತ್ರದಿಂದ ಜನತಾ ದಳದಿಂದ ಒಂದು ಬಾರಿ ಸ್ಪರ್ಧಿಸಿ ಅವರು ಸೋತಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತರಾಗಿದ್ದ ಬಂಗೇರರು 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಅವಕಾಶ ಕೈ ತಪ್ಪಿತ್ತು. 1994-99ರಲ್ಲಿ ವಿಧಾನಸಭೆಯ ಮುಖ್ಯ ಸಚೇತಕನಾಗಿ ಸೇವೆ ಸಲ್ಲಿಸುವ ಅವಕಾಶ ಬಂಗೇರ ಅವರದಾಗಿತ್ತು. ಉಳಿದಂತೆ ಅವರ ಜೀವನವೆಲ್ಲ ಅವರು ಆಡಳಿತ ಪಕ್ಷದಲ್ಲಿದ್ದರೂ ಪ್ರತಿಪಕ್ಷದ ನೇತಾರನಂತೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಪರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದರು. ಜನರ ಸೇವೆಗಾಗಿ ಸದಾ ಸ್ಪಂದಿಸುತ್ತಿದ್ದ ಬಂಗೇರ ಅವರು ಕಳೆದ ತಿಂಗಳು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗುವ ದಿನದ ತನಕವು ಅವರ ಕಚೇರಿ ಹಾಗೂ ಮನೆಗೆ ಹಗಲು ರಾತ್ರಿ ಅನ್ನದೆ ಜನ ಸಾಲು ಸಾಲಲ್ಲಿ ತಮ್ಮ ಕಷ್ಟ ಹೇಳಿಕೊಳ್ಳಲು, ಬೇಡಿಕೆ ಸಲ್ಲಿಸಲು, ಕೆಲಸ ಮಾಡಿಸಿಕೊಳ್ಳಲು ಬರುತ್ತಿದ್ದರು, ಎಲ್ಲರಿಗೂ ಬಂಗೇರರು ಸವಾಧಾನದಿಂದ ಸ್ಪಂದಿಸುತ್ತಿದ್ದರು. ಯಾರಾದರೊಬ್ಬರು ಸರ್ಕಾರಿ ಕಚೇರಿಯಲ್ಲಿ ತನ್ನ ಕೆಲಸ ನಿಧಾನವಾಗಿದೆ, ಅಧಿಕಾರಿಗಳು ಫೈಲ್ ನೋಡ್ತಾನೆ ಇಲ್ಲ ಅಂದ್ರೆ, ಆ ಕ್ಷಣದಲ್ಲಿ ಫೋನೆತ್ತಿಕೊಂಡು ಅಧಿಕಾರಿಯ ಬೆವರು ಇಳಿಸುತ್ತಿದ್ದರು ಬಂಗೇರರು. ಅಂತಹ ಬಂಗೇರರು ಇನ್ನು ನಮ್ಮ ಮುಂದಿಲ್ಲ.
ಈ ಸುದ್ದಿ ಓದಿದ್ದೀರಾ? ನನ್ನ ಚುನಾವಣೆಯ ಉದ್ದೇಶ ಯಶಸ್ವಿ, ಸಂಸದ ರಾಘವೇಂದ್ರ ಬಂಧನವಾಗಲಿ: ಕೆ ಎಸ್ ಈಶ್ವರಪ್ಪ
ವಸಂತ ಬಂಗೇರ ಅವರು ಸ್ಥಾಪಿಸಿದ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಗುರುದೇವ ಕಾಲೇಜು ಬಡ ಜನರ ಸೇವೆಯನ್ನೇ ಮಾಡಿಕೊಂಡು ಬಂದಿತ್ತು, ಮುಂದೆಯೂ ಅದೇ ಪಥದಲ್ಲಿ ಮುಂದುವರಿಲಿದೆ ಎಂಬ ಆಶಯ ಅವರ ಅಭಿಮಾನಿಗಳದ್ದು.
