ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣವು ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಇದೇ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ವರದಿಯಾಗಿದೆ.
ಕನ್ನಡದ ಖಾಸಗಿ ಸುದ್ದಿವಾಹಿನಿ POWER TVಯಲ್ಲಿ ಸಂತ್ರಸ್ತ ಮಹಿಳೆಯು ದೇವರಾಜೇಗೌಡರಿಂದ ಅನ್ಯಾಯ ಆಗಿರುವ ಬಗ್ಗೆ ಸಂದರ್ಶನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನೊಂದ ಸಂತ್ರಸ್ತೆ ಹೇಳುವ ಪ್ರಕಾರ, “ದೇವರಾಜೇಗೌಡನ ವಿರುದ್ಧ ಹಾಸನ ಜಿಲ್ಲೆಯಲ್ಲಿ ದೂರು ನೀಡಿದ್ದೇನೆ. ವಿಡಿಯೋ ಕಾಲ್ ಮಾಡಿ, ಖಾಸಗಿ ಅಂಗಾಂಗ ಪ್ರದರ್ಶಿಸಿ ಲೈಂಗಿಕ ಚೇಷ್ಟೆ ಮಾಡಿದ್ದಾರೆ” ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೇ, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಂದರ್ಶನದ ವೇಳೆ ಪ್ರಸಾರವಾಗಿದೆ.
2023ರ ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಹೈಕಮಾಂಡ್‌ಗೆ ಪತ್ರದ ಬರೆದು ಸಂಸದ ಪ್ರಜ್ವಲ್ ರೇವಣ್ಣನ 2976 ಅಶ್ಲೀಲ ವಿಡಿಯೋ ಇರುವ ಬಗ್ಗೆ ‘ತುರ್ತು ರಹಸ್ಯ ಪತ್ರ’ ಬರೆದು, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳದಂತೆ ದೇವರಾಜೇಗೌಡ ಒತ್ತಾಯಿಸಿದ್ದರು. ನಂತರ, ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನಕ್ಕೆ ಮೂರು ದಿನ ಮುನ್ನ ಹಾಸನ ಜಿಲ್ಲೆಯಾದ್ಯಂತ ಪ್ರಜ್ವಲ್ ಪೆನ್‌ಡ್ರೈವ್ ಹರಿದಾಡಿತ್ತು. ಆ ಮೂಲಕ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಅಶ್ಲೀಲ ವಿಡಿಯೋ ಸೋರಿಕೆಯಾದ ಹೊತ್ತಲ್ಲಿ, ದೇವರಾಜೇಗೌಡನೇ ವಿಡಿಯೋಗಳನ್ನು ಬಹಿರಂಗಗೊಳಿಸಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.
ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಕೂಡ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಅನ್ನು ದೇವರಾಜೇಗೌಡರಿಗೆ ಮಾತ್ರ ಕೊಟ್ಟಿದ್ದೆ ಎಂದು ಬಹಿರಂಗ ವಿಡಿಯೋ ಹೇಳಿಕೆ ನೀಡಿದ್ದನ್ನು ಗಮನಿಸಬಹುದು.
ಸದ್ಯ ಈ ಬೆಳವಣಿಗೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿಯವರ ಪತ್ರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಗೆ ಎಸ್‌ಐಟಿ ರಚನೆ ಮಾಡಿತ್ತು.
ಬ್ಲೂಜೆಪಿ ಮುಖಂಡ ದೇವರಾಜೆ ಗೌಡನ ಕಾರುಬಾರು… ಆಡಿಯೋ, ವಿಡಿಯೋ ಸಮೇತ.
— LATPOTBABA (@LATPOTBABA1) May 9, 2024
ಎಸ್‌ಐಟಿ ತನಿಖೆ ಕೈಗೆತ್ತಿಕೊಂಡ ಎಸ್‌ಐಟಿ, ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಮಾಜಿ ಪ್ರಧಾನಿಯ ಮನೆಯಲ್ಲಿ ಬಂಧಿಸಿರುವ ಬೆಳವಣಿಗೆ ದೇಶಾದ್ಯಂತ ಸುದ್ದಿಗೆ ಗ್ರಾಸವಾಯಿತು. ಈ ಬೆಳವಣಿಗೆ ಬೆನ್ನಲ್ಲೇ, ದೇವರಾಜೇಗೌಡ ಯೂಟರ್ನ್ ಹೊಡೆದು, ಪೆಬ್‌ಡ್ರೈವ್ ಹಂಚಿಕೆಯ ಹಿಂದೆ ಕಾಂಗ್ರೆಸ್‌ನ ಮಹಾನಾಯಕರು ಇದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದರು. ಈ ಬಗ್ಗೆ ಎರಡು ಬಾರಿ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ದೇವರಾಜೇಗೌಡ ಸುದ್ದಿಗೋಷ್ಠಿ ಕೂಡ ನಡೆಸಿ, ಎಸ್‌ಐಟಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಟೀಕಿಸುತ್ತಾ, ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಇಂತಹ ಹೊತ್ತಲ್ಲೇ, ದೇವರಾಜೇಗೌಡ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದಿದೆ. ಇದು ಮುಂದೆ ಯಾವ ಸ್ವರೂಪ ಪಡೆಯಲಿದೆ ಎಂದು ಕುತೂಹಲ ಮೂಡಿಸಿದೆ.
ದೇವರಾಜೇಗೌಡ ಮೇಲೆ ಕಳೆದ ಮಾರ್ಚ್‌ನಲ್ಲೇ ದಾಖಲಾಗಿತ್ತು ಪ್ರಕರಣ!
ವಕೀಲ ದೇವರಾಜೇಗೌಡ ವಿರುದ್ಧ ಕಳೆದ ಮಾರ್ಚ್ ತಿಂಗಳ ಕೊನೆಯಲ್ಲಿ ಇದೇ ಸಂತ್ರಸ್ತೆಯ ಪತಿ, ಹಾಸನ ಜಿಲ್ಲೆಯ ಹೊಳೆನರಸೀಪುರ ನಗರ ಠಾಣೆಯಲ್ಲಿ ಜಾತಿ ನಿಂದನೆಯ ದೂರು ದಾಖಲಿಸಿದ್ದಾರೆ. ಆ ದೂರಿನಲ್ಲಿ ದೇವರಾಜೇಗೌಡ ಹೇಳಿದ್ದರು ಎನ್ನಲಾದ ಹೇಳಿಕೆಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆ ದೂರಿನಲ್ಲಿ, “ಸೂಳೆಮಗನೇ, ಎಷ್ಟು ಜನಕ್ಕೆ ಹುಟ್ಟಿದ್ದೀಯೋ..ನನ್ನ ಮಕ್ಕಳ ಹಿಟ್ಟಿಗೆ ಗತಿಯಿಲ್ಲ. ಹೊಲೆಯ ನನ್ನ ಮಗನೇ, ನಿನ್ನ ಮತ್ತು ನಿನ್ನ ಹೆಂಡ್ತಿಯ ಗತಿ ಈ ರಾತ್ರಿ ಏನಾಗುತ್ತದೆ ನೋಡಿ ನನ್ನ ಮಕ್ಕಳಾ, ನಾನು ನಿನ್ನ ಹೆಂಡ್ತಿಗೆ ಈ ಹಿಂದೆ ಏನು ಮಾಡಿದ್ದೀನಿ ಎಂದು ತಿಳಿದುಕೊಂಡಿದ್ದೀಯಾ? ನಾನು ಬೆಂಗಳೂರಿನಲ್ಲಿ ಒಂದು ಲಕ್ಷ ಐವತ್ತು ಸಾವಿರದವರೆಗೆ ಹಣ ಕೊಟ್ಟಿದ್ದೇನೆ. ನಿಮ್ಮ ಗತಿ ಇಲ್ಲಿಗೆ ಮುಗಿಯಿತು. ಈ ವಿಚಾರವಾಗಿ ಪೊಲೀಸ್ ಠಾಣೆಗೆ ಹೋದರೆ ನಿಮ್ಮ ಕುಟುಂಬವನ್ನು ಕೊಲೆ ಮಾಡದೇ ಬಿಡುವುದಿಲ್ಲ. ಸೂಳೆಮಗನೇ ನಾನು ಯಾರೆಂದು ನಿನಗೆ ಗೊತ್ತೇನೋ, ಈ ದೇಶದ ಮಾಜಿ ಪ್ರಧಾನಿಗಳ ಕುಟುಂಬವನ್ನೇ ಎದುರು ಹಾಕಿಕೊಂಡಿದ್ದೇನೆ. ನೀನು ಯಾವ ಜುಜುಬಿ” ಎಂದು ಸಾರ್ವಜನಿಕ ಸ್ಥಳದಲ್ಲಿ ಜಾತಿನಿಂದನೆ ಮಾಡಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.
