ಹಾಸನದಲ್ಲಿ ಎಲ್ಲಿ ನೋಡಿದರೂ ಜೆಡಿಎಸ್ ಬಾವುಟಗಳು ಹಾರುತ್ತಿದ್ದು, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸೈನಿಕರಂತೆ ಹೋರಾಟಕ್ಕೆ ಇಳಿದಿದ್ದಾರೆ. ಖಂಡಿತವಾಗಿಯೂ ನಾವು ಹಂಡ್ರೆಡ್ ಪರ್ಸೆಂಟ್ ಗೆದ್ದೇ ಗೆಲ್ತೀವಿ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ರಂಜಾನ್ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಎಚ್ ಪಿ ಸ್ವರೂಪ್ ಜೊತೆಗೂಡಿ ಹಾಸನದ ಹೊಸ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಬಾಂಧವರಿಗೆ ಶುಭಕೋರಿದ ಬಳಿಕ ಮಾತನಾಡಿದರು.
“ಒಂದು ತಿಂಗಳಿನಿಂದ ಮುಸ್ಲಿಂ ಬಾಂಧವರು ಉಪವಾಸ ಆಚರಣೆ ಮಾಡಿ ದೇವರಿಗೆ ಭಕ್ತಿ, ನಿಷ್ಠೆಯನ್ನು ತೋರಿಸಿದ್ದಾರೆ. ಅವರಿಗೆ ಶುಭ ಕೋರಿದ್ದೇವೆ. ಇವತ್ತಿನ ವಾತಾವರಣ ನೋಡಿದರೆ ಶೇ. 95ರಷ್ಟು ಮುಸಲ್ಮಾನ್ ಬಾಂಧವರು ನಮ್ಮನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.
“ಸ್ವರೂಪ್ ಅವರು ಗೆದ್ದು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜಕೀಯ ವಾತಾವರಣ ಬಹಳ ಚೆನ್ನಾಗಿದೆ. ಮೂರು ದಿನದಿಂದ ಬಹಳ ಬದಲಾವಣೆ ಆಗಿದೆ. ಯಾವುದೇ ಸಂಶಯವಿಲ್ಲ. ಎಲ್ಲರೂ ಈ ಬಾರಿ ಜೆಡಿಎಸ್ ಗೆಲ್ಲಿಸುವ ಭಾವನೆ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದರು.
“ಕೆಲ ದಿನಗಳ ಹಿಂದೆ ಜೆಡಿಎಸ್‌ನಲ್ಲಿ ಕಾರ್ಯಕರ್ತರು, ಮುಖಂಡರು ಇಲ್ಲ ಎನ್ನುತ್ತಿದ್ದರು. ನಮ್ಮ ರೋಡ್ ಶೋ ಆದ ಮೇಲೆ ಬಿಜೆಪಿಯ ಕಾರ್ಯಕರ್ತರು, ಮುಖಂಡರು ಯಾರೂ ಕಾಣಿಸುತ್ತಿಲ್ಲ” ಎಂದು ಲೇವಡಿ ಮಾಡಿದರು.
“ಚುನಾವಣೆಗೆ ಕೇವಲ 20 ದಿನ ಇದೆ. ಆ ದಿನ ಹಾಸನ ತಾಲೂಕಿನ ಜನ ಒನ್ ಸೈಡ್ ಜೆಡಿಎಸ್ ಗೆ ಓಟು ಕೊಡಬೇಕು ಅಂತ ತೀರ್ಮಾನ ಮಾಡಿದ್ದಾರೆ. ಹಾಗಾಗಿ ನನಗೆ ಭರವಸೆ ಇದೆ, ನೂರಕ್ಕೆ ನೂರು ಭಾಗ ನಾವೇ ಗದ್ದೇ ಗೆಲ್ತೀವಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | 7 ವಿಧಾನಸಭಾ ಕ್ಷೇತ್ರದ 86 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ: ಜಿಲ್ಲಾಧಿಕಾರಿ
“ಬಿಜೆಪಿ ಅವರಿಗೆ ಈವಾಗ ಬುದ್ದಿ ಬರೋದು, ಮೂರು ವರ್ಷದ ಹಿಂದೆಯೇ ಬಂದಿದ್ರೆ ಅನುಕೂಲ ಆಗಿರೋದು. ಈಗ ಅವರದ್ದು ಎಲ್ಲ ಗೊತ್ತಾಗಿದೆ. ನಾನು ಅವರ ಬಗ್ಗೆ ಮಾತನಾಡಬೇಕಿಲ್ಲ. ಜನರೇ ಮಾತನಾಡುತ್ತಿದ್ದಾರೆ ಏನು ಅಂತ, ಅವರು ಏನೇ ತಂತ್ರಗಾರಿಕೆ ಮಾಡಿದರೂ ನಡೆಯಲ್ಲ. ಅವತ್ತು ಹೊಳೆನರಸೀಪುರದಿಂದ ನಿಲ್ತೀನಿ ಅಂತ ಮಾಧ್ಯಮದವರನ್ನು ದಿಕ್ಕು ತಪ್ಪಿಸಿದ್ರು, ಅಂತಹ ಯಾವುದೇ ತಂತ್ರಗಾರಿಕೆಗೂ ಕಿವಿ ಕೊಡಲು ನಮ್ಮ ಕಾರ್ಯಕರ್ತರಾಗಲೀ, ಮತದಾರರಾಗಲೀ ತಯಾರಿಲ್ಲ” ಎಂದು ಹೇಳಿದರು.
“ನಾವು ಈ ಬಾರಿ ಎಚ್ ಪಿ ಸ್ವರೂಪ್ ಅವರನ್ನು ಗೆಲ್ಲಿಸಿಕೊಳ್ಳಬೇಕು ಎಂದು ನಿರ್ಣಯ ಮಾಡಿದ್ದೀವಿ. ಜೆಡಿಎಸ್ ಆಡಳಿತಕ್ಕೆ ತರಲೇಬೇಕು ಎಂದು ನಿರ್ಧರಿಸಿದ್ದೇವೆ. ಶಾಸಕರಿಗೆ ಭಯ ಶುರುವಾಗಿದೆಯಾ ಎಂದು ನನ್ನ ಕೇಳುವುದಿಲ್ಲ. ಅವರ ಕಾರ್ಯಕರ್ತರನ್ನು ಕೇಳಿದರೆ ಗೊತ್ತಾಗುತ್ತೆ” ಎಂದು ಕುಟುಕಿದರು.