ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಯುವಕನೊಬ್ಬ ಕೆಲಸ ಸಿಗದಿದ್ದಕ್ಕೆ ಪೇಯಿಂಗ್ ಗೆಸ್ಟ್ (ಪಿಜಿ) ಕಟ್ಟಡವೊಂದರ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಅರುಣ್‌ಕುಮಾರ್ ಪಾಟೀಲ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಲಬುರಗಿ ಮೂಲದ ಈತ ಎಂಜಿನಿಯರಿಂಗ್ ಪದವೀಧರ. ಕಂಪನಿಗಳಲ್ಲಿ ಕೆಲಸ ಮಾಡಬೇಕೆಂದು ಕಲಬುರಗಿಯಿಂದ ಕೆಲಸ ಹುಡುಕಿಕೊಂಡು ಮೇ 8ರಂದು ಬೆಂಗಳೂರಿಗೆ ಬಂದಿದ್ದರು. ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಉಳಿದುಕೊಂಡಿದ್ದರು ಎಂದು ವೈಟ್‌ಫೀಲ್ಡ್ ಠಾಣೆ ಪೊಲೀಸರು ಹೇಳಿದರು.
“ಗುರುವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ತಾನು ನೆಲೆಸಿದ್ದ ಪಿಜಿಯ ಐದನೇ ಮಹಡಿಗೆ ಹೋಗಿದ್ದ ಅರುಣ್‌ಕುಮಾರ್ ಅಲ್ಲಿಂದಲೇ ಕೆಳಗಡೆ ಜಿಗಿದಿದ್ದಾರೆ. ಜೋರು ಶಬ್ದ ಕೇಳಿದ ಸ್ಥಳೀಯರು, ಕಟ್ಟಡ ಬಳಿ ಸೇರಿದ್ದಾರೆ. ತೀವ್ರ ಗಾಯವಾಗಿ ಅರುಣ್‌ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗುರುವಾರ ಸುರಿದ ಧಾರಾಕಾರ ಮಳೆ: ಮತ್ತೆ ಹಳೆ ಸಮಸ್ಯೆಗಳಿಗೆ ಮರಳಿದ ಬೆಂಗಳೂರು
“ಅರುಣ್‌ಕುಮಾರ್ ಮೊಬೈಲ್, ಬ್ಯಾಗ್ ಹಾಗೂ ಇತರೆ ಎಲ್ಲ ವಸ್ತುಗಳು ಕೊಠಡಿಯಲ್ಲಿದ್ದವು. ಆತ್ಮಹತ್ಯೆ ಸಂಬಂಧ ಪೇಯಿಂಗ್ ಗೆಸ್ಟ್ ಕಟ್ಟಡ ಮಾಲೀಕರು ಹಾಗೂ ಇತರರಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದರು.
ಅರುಣಕುಮಾರ್‌ಗೆ ಎಲ್ಲೂ ಕೂಡ ಕೆಲಸ ಸಿಕ್ಕಿರಲಿಲ್ಲ. ಇದರಿಂದ ಮನನೊಂದಿದ್ದ ಆತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತನ ಪೋಷಕರಿಗೆ ಪೊಲೀಸರು ವಿಷಯ ತಿಳಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಶುರುಮಾಡಿದ್ದಾರೆ.