ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆಮಹಲ್‌ನಲ್ಲಿ ಎನ್‌ಐಎ ತಂಡ ಮೂವರನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಸುಳ್ಯದ ಮೊಹಮ್ಮದ್ ಮುಸ್ತಾಫ್ ಅಲಿಯಾಸ್ ಮುಸ್ತಾಫ್ ಪೈಚಾರು, ಸೋಮವಾರಪೇಟೆಯ ಇಲಿಯಾಸ್ ಹಾಗೂ ಸಿರಾಜ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಮೊಹಮ್ಮದ್ ಮುಸ್ತಾಫಾ ಹಾಗೂ ಇಲಿಯಾಸ್ ಆನೆಮಹಲ್‌ನ ಸಿರಾಜ್ ಬಳಿ ಕೆಲಸಕ್ಕೆ ಸೇರಿದ್ದರು. ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸಿರಾಜ್‌ನನ್ನು ವಶಕ್ಕೆ ಪಡೆಯಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿಯನ್ನು ಶುಕ್ರವಾರ (ಮೇ10) ಬಂಧಿಸಲಾಗಿದೆ.
ಬೆಂಗಳೂರಿನಿಂದ ಆಗಮಿಸಿದ ಎನ್ಐಎ ತಂಡ ಆನೆಮಹಲ್ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಲಸ ಸಿಗದಿದ್ದಕ್ಕೆ ಪಿಜಿ ಮೇಲಿಂದ ಬಿದ್ದು ಪದವೀಧರ ಆತ್ಮಹತ್ಯೆ
ಏನಿದು ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ಅವರು 2022ರ ಜುಲೈನಲ್ಲಿ ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ತಕ್ಷಣ ಪುತ್ತೂರು ಆಸ್ಪತ್ರೆಗೆ ಪ್ರವೀಣ್ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈವರೆಗೆ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಕರಣ ಸಂಬಂಧ ಆರಂಭದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.
ಕಳೆದ ವರ್ಷ ಜನವರಿಯಲ್ಲಿ ಎನ್‌ಐಎ 20 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಸಕಲೇಶಪುರದಿಂದ ಮುಸ್ತಾಫಾ ಪೈಚಾರುನನ್ನು ಎನ್‌ಐಎ ತಂಡ ವಶಕ್ಕೆ ಪಡೆದಿದೆ. ಇದಕ್ಕೂ ಮುನ್ನ ಆರೋಪಿ ಮುಸ್ತಾಫಾ ಪೈಚಾರು ಸುಳಿವು ನೀಡಿದವರಿಗೆ ಎನ್ಐಎ ₹5 ಲಕ್ಷ ಬಹುಮಾನ ಫೋಷಿಸಿತ್ತು.