ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ 34ನೇ ಸ್ಥಾನದಲ್ಲಿದ್ದರೂ ಇಲ್ಲಿನ ಗ್ರಾಮೀಣ ಭಾಗದ ಕೆಲ ವಿದ್ಯಾರ್ಥಿಗಳು ಗಣನೀಯ ಸಾಧನೆಗೈಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ ಬೀದರ್ ತಾಲೂಕು ಶೇ 66.88 ರಷ್ಟು ಫಲಿತಾಂಶ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಔರಾದ ತಾಲೂಕು ಶೇ 55.78 ರಷ್ಟು ಫಲಿತಾಂಶ ಬಂದಿದ್ದು, ಕೊನೆ ಸ್ಥಾನದಲ್ಲಿದೆ. ಔರಾದ ತಾಲೂಕಿನ ಸರ್ಕಾರಿ ಶಾಲೆಯ ಫಲಿತಾಂಶ ಶೇ 55.75, ಅನುದಾನಿತ ಶಾಲೆ ಶೇ 39.33 ಹಾಗೂ ಖಾಸಗಿ ಶಾಲೆ ಶೇ 89.46 ಫಲಿತಾಂಶ ಬಂದಿದೆ.
ಅನುದಾನಿತ ಶಾಲೆಯ ಫಲಿತಾಂಶದಲ್ಲಿ ತೀರಾ ಕುಸಿತ ಕಂಡರೂ ತಾಲೂಕಿನ ಸಂತಪೂರ ಗ್ರಾಮದ ಸುಭಾಷ ಚಂದ್ರ ಬೋಸ್ ಅನುದಾನಿತ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಹನಾ ರಾಜಪ್ಪಾ 625ಕ್ಕೆ 618 (ಶೇ99.88) ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಿಟ್ಟಿಸಿದ್ದಾಳೆ. ಅಲ್ಲದೇ ಜಿಲ್ಲೆಗೆ ನಾಲ್ಕನೇ ಹಾಗೂ ರಾಜ್ಯಕ್ಕೆ ಎಂಟನೇ ರ್‍ಯಾಂಕ್ ಗಳಿಸಿದ್ದಾಳೆ.
ಗ್ರಾಮೀಣ ಭಾಗದ ರೈತ ಕುಟುಂಬದ ವಿದ್ಯಾರ್ಥಿನಿ ಸಹನಾ ರಾಜಪ್ಪಾ ಪ್ರಾರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಳು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ 125ಕ್ಕೆ 125 ಅಂಕ, ಹಿಂದಿ 100, ಗಣಿತ 100 ಹಾಗೂ ವಿಜ್ಞಾನ 99 ಅಂಕ ಗಳಿಸಿದ್ದಾರೆ.
“ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿ ಟಾಪರ್ ಬರೆಬೇಕೆಂದು ಮನೆಯಲ್ಲಿ ಯಾವುದೇ ಒತ್ತಡ ಇರಲಿಲ್ಲ. ಪೋಷಕರ ಪ್ರೋತ್ಸಾಹ ಹಾಗೂ ಶಾಲೆಯಲ್ಲಿ ಶಿಕ್ಷಕರ ಗುಣಮಟ್ಟ ಬೋಧನೆಯಿಂದ ಇಷ್ಟು ಅಂಕ ಗಳಿಸಲು ಸಾಧ್ಯವಾಗಿದೆ. ಮುಂದೆ ಪಿಯುಸಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುವೆ. ಬದುಕಿನಲ್ಲಿ ಐಎಎಸ್ ಅಧಿಕಾರಿ ಆಗುವ ಗುರಿಯಿದೆ” ಎಂದು ವಿದ್ಯಾರ್ಥಿನಿ ಸಹನಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಲೋಕ ಪ್ರಜ್ಞೆ ವಿಸ್ತರಿಕೊಳ್ಳಲು ವಚನಗಳ ಅನುಸಂಧಾನ ಅಗತ್ಯ : ಡಾ. ಭೀಮಶಂಕರ ಬಿರಾದರ
ವಿದ್ಯಾರ್ಥಿನಿ ಸಾಧನೆಗೆ ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆಯ ಅಧ್ಯಕ್ಷ ಶಿವಾಜಿರಾವ್ ಬೋರಳೆ, ಕಾರ್ಯದರ್ಶಿ ನಂದಾದೀಪ ಬೋರಳೆ, ಮುಖ್ಯಗುರು ಮನೋಹರ ಬಿರಾದಾರ ಸೇರಿದಂತೆ ಶಾಲಾ ಸಿಬ್ಬಂದಿ, ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.